![](https://vijaykarnataka.com/photo/82969710/photo-82969710.jpg)
: ನಗರದಲ್ಲಿ ಮಳೆ ಬಂದಾಗ ಉಂಟಾಗುವ 209 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, ಇಲ್ಲಿ ಯಾವುದೇ ರೀತಿಯ ಅನಾಹುತವಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಳೆ ಅನಾಹುತ ತಡೆಗೆ ಕೈಗೊಂಡಿರುವ ಪೂರ್ವ ಸಿದ್ಧತೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಂಗಳವಾರ ವರ್ಚುಯಲ್ ಸಭೆ ನಡೆಸಿ ಮಾತನಾಡಿದ ಅವರು, '209 ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಮಳೆ ಬಂದಾಗ ಪ್ರವಾಹ ಉಂಟಾಗದ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು. ರಾಜಕಾಲುವೆಗಳಲ್ಲಿ ಹೂಳು ತೆರವುಗೊಳಿಸಿ, ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು' ಎಂದು ಸೂಚಿಸಿದರು.
'ಮಳೆ ಅನಾಹುತಗಳನ್ನು ತಪ್ಪಿಸಲು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಜತೆಗೆ ವಾರ್ಡ್ ರಸ್ತೆಗಳಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ, ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳಲ್ಲಿ ತುಂಬಿರುವ ಕಸ, ಕಡ್ಡಿ, ಹೂಳು ತೆರವುಗೊಳಿಸಬೇಕು' ಎಂದು ಹೇಳಿದರು.
'ಶಿಲ್ಟ್ ಆ್ಯಂಡ್ ಟ್ರ್ಯಾಕ್ಟರ್‌ಗಳನ್ನು ವಾರ್ಡ್‌ವಾರು ನಿಯೋಜಿಸಿಕೊಂಡು ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಸಂಗ್ರಹವಾಗಿರುವ ಕಟ್ಟಡ ಅವಶೇಷ, ಹೂಳು ತೆರವು ಮಾಡಬೇಕು. ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಉಪ ವಿಭಾಗಗಳಲ್ಲಿ ಕೂಡಲೇ ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಬೇಕು. ಟ್ರ್ಯಾಕ್ಟರ್, ಸಿಬ್ಬಂದಿ, ಅಗತ್ಯ ಸಲಕರಣೆಗಳು, ಪಂಪ್ ಸೆಟ್‌ಗಳನ್ನು ಸಿದ್ಧವಾಗಿಟ್ಟುಕೊಂಡಿರಬೇಕು. ಮರಗಳ ತೆರವಿಗೆ 21 ತಂಡಗಳ ಜತೆಗೆ ಹೆಚ್ಚುವರಿಯಾಗಿ 7 ತಂಡಗಳನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಿಕೊಳ್ಳಬೇಕು' ಎಂದು ಸೂಚನೆ ನೀಡಿದರು.