ಬೆಂಗಳೂರು: ನಗರದಲ್ಲಿ ಹಾಡಹಗಲೇ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ನೆತ್ತರು ಹರಿಸಿದ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಈ ಹತ್ಯೆಗೆ ಸ್ಟೀಫನ್ ಸೂತ್ರಧಾರ ಎಂದು ತನಿಖೆ ವೇಳೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಪ್ರಮುಖ ಆರೋಪಿಗಳಾದ ಪೀಟರ್ ಅಲಿಯಾಸ್ ಲಂಬೂ (46) ಹಾಗೂ ಸೂರ್ಯನನ್ನು (19) ಪೊಲೀಸರು ಗುಂಡು ಹಾರಿಸಿ ಶುಕ್ರವಾರ ಸೆರೆ ಹಿಡಿದಿದ್ದರು. ಇದರ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ್ದ ಪೊಲೀಸರು, ಸ್ಪೀಫನ್ (21), ಅಜಯ್ (21) ಹಾಗೂ ಪುರುಷೋತ್ತಮ್‌ನನ್ನು (22) ಬಂಧಿಸಿದ್ದಾರೆ. ಪುರುಷೋತ್ತಮ್ ಈ ಹಿಂದೆ ನಡೆದ ಶೋಭನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಸ್ಟೀಫನ್ ವಿರುದ್ಧ ಕೂಡ ಕೊಲೆ ಯತ್ನ ಪ್ರಕರಣವಿದೆ ಎಂದು ಪೊಲೀಸರು ತಿಳಿಸಿದರು.
''ಆರೋಪಿ ಪೀಟರ್ ಹಾಗೂ ಸೂರ್ಯ, ರೇಖಾ ಅವರಿಗೆ ಮಾರಕಾಸ್ತ್ರಗಳಿಂದ ಹೊಡೆದು ಚಾಕುವಿನಿಂದ ಇರಿದಿದ್ದರು. ಇದೇ ವೇಳೆ ತಡೆಯಲು ಬಂದ ಸಾರ್ವಜನಿಕರ ಮೇಲೆ ಸ್ಟೀಫನ್ ಹಾಗೂ ಅಜಯ್ ಹಲ್ಲೆಮಾಡಿದ್ದರು. ಆರೋಪಿ ಪುರುಷೋತ್ತಮ್, ಹಲ್ಲೆನಡೆಸುವ ಮುನ್ನ ಸಿ.ಸಿ.ಟಿ.ವಿ ಕ್ಯಾಮೆರಾ ತಿರುಗಿಸಿದ್ದ'' ಎಂದೂ ಪೊಲೀಸ್ ಮೂಲಗಳು ಹೇಳಿವೆ.
ಹತ್ಯೆ ಪ್ರಕರಣದ ಸಂಬಂಧ ಕದಿರೇಶ್ ಸಹೋದರಿ ಮಾಲಾ ಹಾಗೂ ಮಾಲಾ ಸೊಸೆ ಪೂರ್ಣಿಮಾ ಅವರನ್ನು ಅಜ್ಞಾತ ಸ್ಥಳದಲ್ಲಿ ಪೊಲೀಸರು ವಿಚಾರಣೆಗೊಳಪಡಿಸಿ ಪ್ರಕರಣದ ಪ್ರಮುಖ ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ.
ಹತ್ಯೆ ಪಾತ್ರಧಾರಿಗಳಿಗೆ ಸ್ಟೀಫನ್ ಸೂತ್ರಧಾರಿ
ಎರಡು ತಿಂಗಳ ಹಿಂದೆಯೇ ರೇಖಾ ಕೊಲೆಗೆ ಸಂಚು ರೂಪಿಸಲಾಗಿತ್ತು. ಕೊಲೆ ಹೇಗೆ ಮಾಡಬೇಕು, ಯಾರು, ಯಾವುದರಿಂದ ಹತ್ಯೆ ಮಾಡಬೇಕು, ಬಳಿಕ ಅಲ್ಲಿಂದ ಹೇಗೆ ಪರಾರಿಯಾಗಬೇಕು ಎಂಬುದರ ನೀಲಿ ನಕ್ಷೆಯನ್ನು ಸ್ಟೀಫನ್ ಸಿದ್ಧಪಡಿಸಿದ್ದ ಎಂದು ತಿಳಿದುಬಂದಿದೆ.
ಈ ಯೋಜನೆಯಂತೆ ರೇಖಾ ಊಟ ವಿತರಿಸಿ ತಮ್ಮ ಕಚೇರಿ ಬಳಿ ಬಂದ ವೇಳೆ ಸೂರ್ಯ, ರೇಖಾ ಅವರನ್ನು ಹಿಡಿದು ಎಳೆದುಕೊಂಡು ಬಂದಿದ್ದ. ಪೀಟರ್ ಚಾಕುವಿನಿಂದ ರೇಖಾ ಎದೆ, ಕುತ್ತಿಗೆಗೆ ಚುಚ್ಚಿದರೆ, ಸೂರ್ಯ ಹಿಂಬದಿಯಿಂದ ಚುಚ್ಚಿದ. ಈ ಕೃತ್ಯ ತಡೆಯಲು ಬರುವವರನ್ನು ಅಡ್ಡಗಟ್ಟಲು ಸ್ಟೀಫನ್ ಮತ್ತು ಅಜಯ್ ನಿಂತಿದ್ದರು.
ಕೃತ್ಯವೆಸಗಿದ ಬಳಿಕ ತಮಿಳುನಾಡಿನತ್ತ ಹೋಗಿ ತಲೆಮರೆಸಿಕೊಳ್ಳುವ ಬಗ್ಗೆಯೂ ಪ್ಲಾನ್ ಮಾಡಲಾಗಿತ್ತು ಎಂಬುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಲಾ ಸುಪಾರಿ ನೀಡಿದ್ದರಾ?!
ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ತನ್ನ ಮಗ ಅಥವಾ ಮಗಳನ್ನು ನಿಲ್ಲಿಸಲು ಮಾಲಾ ಸಿದ್ಧತೆ ನಡೆಸಿದ್ದಳು. ಇದಕ್ಕೆ ರೇಖಾ ಅಡ್ಡಿಯಾಗಿದ್ದರು. ಇದರಿಂದ ಪೀಟರ್‌ಗೆ ಕೊಲೆ ಮಾಡಲು ಪ್ರೇರೇಪಿಸಿದಳು. ''ರೇಖಾ ಯಾವುದೇ ಟೆಂಡರ್ ಕಾಮಗಾರಿ ನೀಡುವುದಿಲ್ಲ. ಹಣಕಾಸು ವಿಚಾರದಲ್ಲೂ ನಿನ್ನನ್ನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಹೀಗಾಗಿ, ರೇಖಾ ಅವರಿಂದ ನಿನಗೆ ಯಾವುದೇ ಸಹಾಯ ದೊರೆಯುವುದಿಲ್ಲ. ಆಕೆಯ ಕೊಲೆ ಮಾಡಿದರೆ ನಿನಗೆ 25 ಲಕ್ಷ ನೀಡಲಾಗುವುದು'' ಎಂದು ಸುಪಾರಿ ನೀಡಿದ್ದಳು ಎನ್ನಲಾಗಿದೆ. ಕೊಲೆ ಮಾಡಿದ ಬಳಿಕ ತಲೆಮರೆಸಿಕೊಳ್ಳಲು ಹಣಕಾಸು ವ್ಯವಸ್ಥೆ ಮಾಡಿಸುವುದಾಗಿಯೂ ತಿಳಿಸಿದ್ದಳು. ಆದರೆ, ಮಾಲಾರಿಂದ ಕೇವಲ ಹತ್ತು ಲಕ್ಷ ರೂ. ಮಾತ್ರ ಹೊಂದಿಸಲಾಯಿತು. ಜತೆಗೆ ತಮಿಳುನಾಡಿನಲ್ಲೂ ಲಾಕ್‌ಡೌನ್ ಕಠಿಣ ನಿಯಮವಿರುವುದು ಆರೋಪಿಗಳು ತಪ್ಪಿಸಿಕೊಳ್ಳಲು ಮುಳುವಾಯಿತು ಎಂದು ಮೂಲಗಳು ತಿಳಿಸಿವೆ.
ನಾಲ್ಕು ಆಯಾಮಗಳಿಂದಲೂ ತನಿಖೆ!
ಕದಿರೇಶ್ ಹತ್ಯೆಯ ಬಳಿಕ ಅವರ ಸಂಬಂಧಿಕರನ್ನು ರೇಖಾ ದೂರವಿಟ್ಟಿದ್ದರು. ಯಾವುದೇ ಸಹಾಯ ಮಾಡುತ್ತಿರಲಿಲ್ಲ. ಹೀಗಾಗಿ ಕುಟುಂಬ ಕಲಹವಿತ್ತು. ಮಾಲಾ ತನ್ನ ಮಕ್ಕಳನ್ನು ರಾಜಕೀವಾಗಿ ಬೆಳೆಸಲು ರೇಖಾ ಅಡ್ಡಗಾಲಾಗಿದ್ದರು. ಇನ್ನು ಪೀಟರ್ ಹಾಗೂ ರೇಖಾ ನಡುವೆ ಟೆಂಡರ್ ಕಾಮಗಾರಿ ಹಾಗೂ ಹಣಕಾಸಿನ ವಿಚಾರವಾಗಿ ಗಲಾಟೆಯಾಗಿತ್ತು.
ಅಲ್ಲದೆ, ಛಲವಾದಿ ಪಾಳ್ಯದಲ್ಲಿ ಗಾಂಜಾ ಮಾರಾಟ ಹೆಚ್ಚಾಗುತ್ತಿದ್ದುದರ ಬಗ್ಗೆ ರೇಖಾ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ, ಸೂರ್ಯ ಮತ್ತು ಪೀಟರ್‌ಗೆ ಈ ವಿಚಾರವಾಗಿ ಅಸಮಾಧಾನವಿತ್ತು. ಹಾಗಾಗಿ, ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬುದು ತಿಳಿದಿಲ್ಲ. ಆದ್ದರಿಂದ ನಾಲ್ಕು ಆಯಾಮದಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.