ಡ್ರಗ್ಸ್ ಮಾಫಿಯಾ ವಿರುದ್ಧ ಬೆಂಗಳೂರು ಸಿಟಿ ಪೊಲೀಸರ ವಾರ್..! 11 ಪೆಡ್ಲರ್‌ಗಳು ಖಾಕಿ ಬಲೆಗೆ..

ಬೆಂಗಳೂರು ನಗರದ ವಿವಿದೆಡೆ ಪೊಲೀಸರು ನಡೆಸಿದ ದಾಳಿ ವೇಳೆ ಆರೋಪಿಗಳಿಂದ ಲಕ್ಷಾಂತರ ಮೌಲ್ಯದ ಹೆರಾಯಿನ್‌, ಎಂಡಿಎಂಎ, ಗಾಂಜಾ ಸೇರಿದಂತೆ ನಾನಾ ಮಾದರಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡ್ರಗ್ಸ್ ಮಾಫಿಯಾ ವಿರುದ್ಧ ಬೆಂಗಳೂರು ಸಿಟಿ ಪೊಲೀಸರ ವಾರ್..! 11 ಪೆಡ್ಲರ್‌ಗಳು ಖಾಕಿ ಬಲೆಗೆ..
Linkup
: ಮಾದಕ ಜಾಲದ ವಿರುದ್ಧ ಸಮರ ಸಾರಿರುವ ನಗರ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಐವರು ವಿದೇಶಿ ಪ್ರಜೆಗಳು ಸೇರಿದಂತೆ 11 ಮಂದಿ ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ವಶಪಡಿಸಿಕೊಂಡಿದ್ದಾರೆ. ಮಣಿಪುರ ಮೂಲದ ಮುಯೀನ್‌ ಆಲಮ್‌ (22), ಮೊಹಮ್ಮದ್‌ ಸಹಿದುರ್‌ ರೆಹಮಾನ್‌ (22), ವಾಕಿಮ್‌ ಯೂನಸ್‌ ನನ್ನು ಬಂಧಿಸಿ, ಅವರಿಂದ 111.16 ಗ್ರಾಂ ಹೆರಾಯಿನ್‌ ವಶಪಡಿಸಿಕೊಂಡಿದ್ದಾರೆ. ಜತೆಗೆ ವಿದೇಶಿ ಪ್ರಜೆಗಳಾದ ಡಾಲೊ ಭರತ್‌ ಇಲೆಮೈ (36), ನೈಜಿರೀಯಾ ಮೂಲದ ಪ್ರಿನ್ಸ್‌ ಅನಿ ಚಿಟೋಯಿ ಸ್ಯಾಮುಯಲ್‌ (33), ಐವರಿ ದೇಶದ ಫೋಪನ್‌ ಅಹಮ್ಮದ್‌ (28)ನನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಲಕ್ಷಾಂತರ ಮೌಲ್ಯದ ಹೆರಾಯಿನ್‌, ಎಂಡಿಎಂಎ, ಗಾಂಜಾ ಸೇರಿದಂತೆ ನಾನಾ ಮಾದರಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿಗಳ ಪೈಕಿ ನೈಜೀರಿಯಾದ ಪ್ರಿನ್ಸ್‌ ಅನಿ ವೈದ್ಯಕೀಯ ವೀಸಾದಡಿ ಭಾರತಕ್ಕೆ ಬಂದು ನಗರದಲ್ಲಿ ನೆಲೆಸಿದ್ದ. ಐವರಿಯ ಪೋಪನ್‌, ಬ್ಯುಸಿನೆಸ್‌ ವೀಸಾದಡಿ ನಗರಕ್ಕೆ ಬಂದಿದ್ದ. ಈ ಇಬ್ಬರ ವೀಸಾ ಹಾಗೂ ಪಾಸ್‌ಪೋರ್ಟ್‌ ಅವಧಿ ಮುಗಿದಿದ್ದರೂ ಅಕ್ರಮವಾಗಿ ನಗರದಲ್ಲಿ ನೆಲೆಸಿರುವುದು ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ. ಮುಯೀನ್‌ ಆಲಮ್‌, ಮೊಹಮ್ಮದ್‌ ಸಹಿದುರ್‌ ರೆಹನಾಬ್‌ ಮತ್ತು ವಾಕಿಮ್‌ ಯೂನಸ್‌ ಕೋಣನ ಕುಂಟೆ ಠಾಣೆ ಪೊಲೀಸ್‌ ಠಾಣೆ ವ್ಯಾಪ್ತಿಯ ಮೆಟ್ರೋ ರೈಲ್ವೆ ನಿಲ್ದಾಣದ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು. ಡಾಲೊ ಭರತ್‌ ಇಲೆಮೈ ಕುಮಾರಸ್ವಾಮಿ ಲೇಔಟ್‌ನ ಟೀಚರ್ಸ್ ಕಾಲೋನಿಯ ಒಂದನೇ ಕ್ರಾಸ್‌ನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಇತ್ತ ಪಶ್ಚಿಮ ವಿಭಾಗದ ಪೊಲೀಸರು ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ 16.516 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅನ್ನಪೂರ್ಣೇಶ್ವರಿ ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಸಾಯಿಲ್‌, ಅನಿಲ್‌ನನ್ನು ಬಂಧಿಸಿರುವ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು 8.16 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಇನ್ನು ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಎರಡು ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 8.500 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಪೂರ್ವ ವಿಭಾಗ: ಬ್ಯುಸಿನೆಸ್‌ ವೀಸಾದಡಿ ಭಾರತಕ್ಕೆ ಬಂದು ನಗರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಆಫ್ರಿಕಾ ಪ್ರಜೆ ಮಾದಕ ವಸ್ತು ಮಾರಾಟ ಮಾಡಿ ಗೋವಿಂದಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯು ಹೈಡ್ರೋ ಗಾಂಜಾ, ಎಂಡಿಎಂಎ ಮಾತ್ರೆಗಳನ್ನು ಅಮೂಲ್‌ ಡಬ್ಬಿಯಲ್ಲಿ ತುಂಬಿಕೊಂಡು ಬ್ಯಾಗ್‌ನಲ್ಲಿಇಟ್ಟು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ದೊರೆತ ಮಾಹಿತಿ ಮೇರೆಗೆ ಗೋವಿಂದಪುರ ಪೊಲೀಸರು ಡ್ರಗ್ಸ್‌ ಖರೀದಿಸುವ ಸೋಗಿನಲ್ಲಿ ಆರೋಪಿಯನ್ನು ಸಂಪರ್ಕಿಸಿದ್ದರು. ಆರೋಪಿಯು ಹೋಟೆಲ್‌ವೊಂದರ ಬಳಿ ಬರುವಂತೆ ಪೊಲೀಸರಿಗೆ ಸೂಚಿಸಿದ್ದ. ಅಲ್ಲಿಗೆ ಬಂದ ಪೊಲೀಸರಿಗೆ ಆರೋಪಿ ಹೈಡ್ರೋ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ. ಆ ವೇಳೆ ಪೊಲೀಸರು ಡ್ರಗ್ಸ್‌ ಸಮೇತ ಆರೋಪಿಯನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ.