
ಮುಂಬಯಿ: ಮಹಾರಾಷ್ಟ್ರದಲ್ಲಿ ಲಸಿಕೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ 18 ರಿಂದ 45 ವರ್ಷದೊಳಗಿನವರಿಗೆ ಮೇ 1ರಿಂದ ಲಸಿಕೆ ಅಭಿಯಾನ ಕೈಗೊಳ್ಳದಿರಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರಕಾರ ನಿರ್ಧರಿಸಿದೆ. ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಕೆಯಲ್ಲಿ ವಿಳಂಬವಾಗುವ ಅಂದಾಜಿನಿಂದ ಈ ಕ್ರಮ ಕೈಗೊಂಡಿದೆ. ಈಗಾಗಲೇ ಸೋಂಕು ನಿಯಂತ್ರಣಕ್ಕೆ ಹರಸಾಹಸ ನಡೆಸುತ್ತಿರುವ ಸರಕಾರ, ಮೂರನೇ ಹಂತದ ಲಸಿಕೆ ಅಭಿಯಾನ ಹಳಿತಪ್ಪಬಾರದೆಂಬ ಕಾರಣಕ್ಕೆ ಸಾಕಷ್ಟು ಲಸಿಕೆ ಸಂಗ್ರಹದ ಬಳಿಕವೇ ಅಭಿಯಾನ ಶುರುಮಾಡಲಿದೆ ಎಂದು ಮೂಲಗಳು ಹೇಳಿವೆ.
ಮೂರನೇ ಹಂತದ ಲಸಿಕೆ ಅಭಿಯಾನ ವಿಳಂಬವಾಗಲಿದೆ. ಆದರೆ 18 ರಿಂದ 45 ವರ್ಷದೊಳಗಿನವರಿಗೂ ಉಚಿತ ಲಸಿಕೆ ಹಾಕಿಸಲು ಸರಕಾರ ನಿರ್ಧರಿಸಿದ್ದು, ಇದಕ್ಕಾಗಿ ಸುಮಾರು 6,500 ಕೋಟಿ ರೂ. ವ್ಯಯಿಸಲು ಮುಂದಾಗಿದೆ. ಸಚಿವ ಸಂಪುಟ ಸಭೆ ಬಳಿಕ ಆರೋಗ್ಯ ಸಚಿವ ರಾಜೇಶ್ ತೋಪೆ ಅವರು ಈ ವಿಷಯ ಪ್ರಕಟಿಸಿದರು. ಈಗಾಗಲೇ 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರಕಾರದ ವತಿಯಿಂದ ಉಚಿತವಾಗಿ ಲಸಿಕೆ ಹಾಕಿಸಲಾಗುತ್ತಿದೆ.
ಇದುವರೆಗೆ ಮಹಾರಾಷ್ಟ್ರದಲ್ಲಿ 1.53 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ.
ಲಾಕ್ಡೌನ್ 15 ದಿನ ವಿಸ್ತರಣೆ
ಕೋವಿಡ್ ಪ್ರಸರಣ ತಡೆಗೆ ಜಾರಿಗೊಳಿಸಲಾಗಿರುವ ಸೆಮಿ ಲಾಕ್ಡೌನ್ ಅನ್ನು ಏ.30ರ ಬಳಿಕ ಇನ್ನೂ 15 ದಿನ ವಿಸ್ತರಿಸಲಾಗುವುದು. ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಭಾಗಿಯಾಗಿದ್ದ ಎಲ್ಲರೂ ಲಾಕ್ಡೌನ್ ವಿಸ್ತರಣೆ ಬಗ್ಗೆ ಒಲವು ತೋರಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸೋಂಕನ್ನು ಹತೋಟಿಗೆ ತರಲು ಇದೊಂದೇ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಸಚಿವ ರಾಜೇಶ್ ತೋಪೆ ಹೇಳಿದರು. ಆಸ್ಪತ್ರೆಗಳಲ್ಲಿ ಆಕ್ಸಿಜನ್, ವೆಂಟಿಲೇಟರ್, ಐಸಿಯು ಬೆಡ್ಗಳ ಕೊರತೆ ನಿವಾರಣೆಗೆ ಸರಕಾರ ಸಕಲ ಕ್ರಮಗಳನ್ನು ಕೈಗೊಂಡಿದೆ.
ಗೋವಾದಲ್ಲಿ ಲಾಕ್ಡೌನ್
ಸೋಂಕಿನ ಸರಪಳಿ ಮುರಿಯುವ ನಿಟ್ಟಿನಲ್ಲಿ ಗೋವಾದಲ್ಲಿ ಸರಕಾರ ಏಪ್ರಿಲ್ 29ರಿಂದ ಮೇ 3ರವರೆಗೆ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಲಿದೆ. ಗುರುವಾರ ಸಂಜೆಯಿಂದ ಸೋಮವಾರ ಬೆಳಗ್ಗೆವರೆಗೆ ಲಾಕ್ಡೌನ್ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಅಗತ್ಯ ಸೇವೆಗಳು ಮತ್ತು ಕೈಗಾರಿಕೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.