'ಮಲಯಾಳಂ ಮಾತನಾಡುವಂತಿಲ್ಲ'!: ದಿಲ್ಲಿ ಆಸ್ಪತ್ರೆ ವಿರುದ್ಧ ಸಿಡಿದೆದ್ದ ಕೇರಳ ಮೂಲದ ದಾದಿಯರು

ಆಸ್ಪತ್ರೆಯಲ್ಲಿ ನೋವು ಮಲಯಾಳಂನಲ್ಲಿ ಸಂಭಾಷಣೆ ನಡೆಸುವಂತಿಲ್ಲ. ಹಿಂದಿ ಅಥವಾ ಇಂಗ್ಲಿಷ್ ಮಾತ್ರ ಬಳಸಬೇಕು- ಹೀಗೆ ದಿಲ್ಲಿ ಸರ್ಕಾರಿ ಸ್ವಾಮ್ಯದ ಜಿಐಪಿಎಂಇಆರ್ ಆಸ್ಪತ್ರೆಯಲ್ಲಿ ಮಲಯಾಳಿ ದಾದಿಯರಿಗೆ ಸುತ್ತೋಲೆ ಮೂಲಕ ಸೂಚನೆ ನೀಡಿದ್ದು ವಿವಾದ ಸೃಷ್ಟಿಸಿದೆ.

'ಮಲಯಾಳಂ ಮಾತನಾಡುವಂತಿಲ್ಲ'!: ದಿಲ್ಲಿ ಆಸ್ಪತ್ರೆ ವಿರುದ್ಧ ಸಿಡಿದೆದ್ದ ಕೇರಳ ಮೂಲದ ದಾದಿಯರು
Linkup
ಹೊಸದಿಲ್ಲಿ: ಮಲಯಾಳಂನಲ್ಲಿ ಮಾತನಾಡುವಂತಿಲ್ಲ. ಇಂಗ್ಲಿಷ್ ಅಥವಾ ಹಿಂದಿಯನ್ನು ಮಾತ್ರವೇ ಬಳಸಬೇಕು- ಹೀಗೆ ವಿವಾದಾತ್ಮಕ ಸುತ್ತೋಲೆ ಹೊರಡಿಸಿರುವ ದಿಲ್ಲಿಯ ಗೋವಿಂದ್ ಬಲ್ಲಭ್ ಪಂತ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಜಿಐಪಿಎಂಇಆರ್) ವಿರುದ್ಧ ಕೇರಳ ಮೂಲದ ದಾದಿಯರು ಸಿಡಿದೆದ್ದಿದ್ದಾರೆ. ಈ ಸುತ್ತೋಲೆಗಾಗಿ ಲಿಖಿತ ಕ್ಷಮೆ ಕೋರಬೇಕು ಮತ್ತು ಇದಕ್ಕೆ ಹೊಣೆಗಾರರ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳಬೇಕು ಎಂದು ದಿಲ್ಲಿಯಲ್ಲಿ ಮಲಯಾಳಿ ನರ್ಸ್‌ ಒಕ್ಕೂಟ ಆಗ್ರಹಿಸಿದೆ. 'ಇದು ನಿಜಕ್ಕೂ ನಮಗೆ ಆಘಾತಕಾರಿ. ಇದು ನಮ್ಮ ಭಾಷಿಕ ಸ್ವಾತಂತ್ರ್ಯಕ್ಕೆ ಎದುರಾದ ಬೆದರಿಕೆ ಎಂದು ಭಾವಿಸುತ್ತೇವೆ. ಇಡೀ ರಾಜ್ಯವನ್ನು ಅವಮಾನಗೊಳಿಸಿದ ಸಂಬಂಧಿಕ ವ್ಯಕ್ತಿಯಿಂದ ನಾವು ಕ್ಷಮಾಪಣೆ ಬಯಸಿದ್ದೇವೆ' ಎಂದು ಮಲಯಾಳಿ ನರ್ಸ್‌ಗಳ ಕ್ರಿಯಾ ಸಮಿತಿ ಪ್ರತಿನಿಧಿ ಫಾಮೀರ್ ಸಿಕೆ ಹೇಳಿದ್ದಾರೆ. ಜೂನ್ 5ರಂದು ದಿಲ್ಲಿ ಸರ್ಕಾರಿ ಸ್ವಾಮ್ಯದ ಜಿಐಪಿಎಂಇಆರ್ ಆಸ್ಪತ್ರೆಯು, ತನ್ನಲ್ಲಿನ ನರ್ಸಿಂಗ್ ಸಿಬ್ಬಂದಿ ತಮ್ಮ ನಡುವೆ ಮಲಯಾಳಂನಲ್ಲಿ ಸಂಭಾಷಣೆ ನಡೆಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿತ್ತು. ಅವರು ಹಿಂದಿ ಅಥವಾ ಇಂಗ್ಲಿಷ್ ಮಾತ್ರ ಬಳಸುವಂತೆ ಸೂಚಿಸಲಾಗಿತ್ತು. ಆದರೆ ಇದನ್ನು ಆಸ್ಪತ್ರೆಯ ಆಡಳಿತ ಹಾಗೂ ದಿಲ್ಲಿ ಸರ್ಕಾರದ ಸೂಚನೆ ಅಥವಾ ತಿಳಿವಳಿಕೆಗೆ ಬಾರದೆ ಹೊರಡಿಸಲಾಗಿತ್ತು ಎಂದು ಆದೇಶವನ್ನು ಹಿಂಪಡೆಯಲಾಗಿತ್ತು. ಆಡಳಿತದ ಅನುಮತಿ ಇಲ್ಲದೆ ಅಂತಹ ನೋಟಿಸ್ ಹೊರಡಿಸುವುದು ಖಂಡನೀಯ ಎಂದಿರುವ ದಾದಿಯರ ಒಕ್ಕೂಟ, ಅಂತಹ ಅನುಚಿತ ವರ್ತನೆ ಪ್ರದರ್ಶಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ. 'ಆಡಳಿತಾಧಿಕಾರಿಯು ತಮಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ಈ ವಿಚಾರ ಮತ್ತಷ್ಟು ಗಂಭೀರವಾಗುತ್ತದೆ. ಈ ಸುತ್ತೋಲೆಯನ್ನು ಅಧಿಕೃತ ಲೆಟರ್‌ಹೆಡ್‌ನಲ್ಲಿ ಅನುಮತಿ ಇಲ್ಲದೆ ಪ್ರಕಟಿಸಿದ ವ್ಯಕ್ತಿಯ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ' ಎಂದು ಫಾಮೀರ್ ಹೇಳಿದ್ದಾರೆ.