ದಿಲ್ಲಿಯಲ್ಲಿ ಮುಂದುವರಿದ ಆಮ್ಲಜನಕ ಕೊರತೆ, ವೈದ್ಯರು ಸೇರಿ ಒಂದೇ ಆಸ್ಪತ್ರೆಯಲ್ಲಿ 8 ಸಾವು

ನಮ್ಮ ಆಸ್ಪತ್ರೆಯಲ್ಲಿ ಆಕ್ಸಿಜನ್‌ ನೆರವಿನಲ್ಲಿದ್ದ 230 ರೋಗಿಗಳು ಸುಮಾರು 80 ನಿಮಿಷಗಳ ಕಾಲ ಆಮ್ಲಜನಕ ಇಲ್ಲದೆ ಇರಬೇಕಾಯಿತು. ಇದರಿಂದಾಗಿ ನಮ್ಮ ಆಸ್ಪತ್ರೆ ವೈದ್ಯರು ಸೇರಿ 8 ರೋಗಿಗಳು ಸಾವನ್ನಪ್ಪಿದರು ಎಂದು ಬಾತ್ರ ಆಸ್ಪತ್ರೆ ಹೇಳಿದೆ.

ದಿಲ್ಲಿಯಲ್ಲಿ ಮುಂದುವರಿದ ಆಮ್ಲಜನಕ ಕೊರತೆ, ವೈದ್ಯರು ಸೇರಿ ಒಂದೇ ಆಸ್ಪತ್ರೆಯಲ್ಲಿ 8 ಸಾವು
Linkup
ಹೊಸದಿಲ್ಲಿ: ಕಳೆದ ಹಲವು ದಿನಗಳಿಂದ ದಿಲ್ಲಿಯನ್ನು ಬಾಧಿಸುತ್ತಿರುವ ಆಮ್ಲಜನಕದ ಕೊರತೆಯ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಪರಿಣಾಮ ಇಲ್ಲಿನ ಬಾತ್ರಾ ಆಸ್ಪತ್ರೆಯಲ್ಲಿ ಶನಿವಾರ ಅಪರಾಹ್ನ ಆಕ್ಸಿಜನ್‌ ಸಿಗದೆ ಓರ್ವ ವೈದ್ಯರು ಸೇರಿ ಒಟ್ಟು 8 ಜನ ರೋಗಿಗಳು ಅಸುನೀಗಿದ್ದಾರೆ. ಇದು ಈ ವಾರವೊಂದರಲ್ಲೇ ಸಿಗದೆ ರೋಗಿಗಳು ಸಾವನ್ನಪ್ಪುತ್ತಿರುವ ಎರಡನೇ ಬೆಳವಣಿಗೆಯಾಗಿದೆ. ಸಾವನ್ನಪ್ಪಿದ ರೋಗಿಗಳಲ್ಲಿ ಆರು ಜನರನ್ನು ಐಸಿಯುಗೆ ದಾಖಲು ಮಾಡಲಾಗಿತ್ತು. ಇಬ್ಬರು ಮಾತ್ರ ವಾರ್ಡ್‌ನಲ್ಲಿದ್ದರು. ಇವರೆಲ್ಲ ಆಮ್ಲಜನಕ ಸಿಗದೆ ಪ್ರಾಣ ಬಿಟ್ಟಿದ್ದಾರೆ. ಸಾವನ್ನಪ್ಪಿದ ವೈದ್ಯರನ್ನು ಗಾಸ್ಟ್ರೋಎಂಟಾರಲಜಿಯ ಮುಖ್ಯಸ್ಥ ಡಾ.ಆರ್‌ಕೆ.ಹಿಮಥಾನಿ ಎಂದು ಗುರುತಿಸಲಾಗಿದೆ. ಈ ಕುರಿತು ಹೈಕೋರ್ಟ್‌ಗೆ ಮಾಹಿತಿ ನೀಡಿದ ಆಸ್ಪತ್ರೆ, 12.45ಕ್ಕೆ ನಮ್ಮ ಎಲ್ಲಾ ಆಮ್ಲಜನಕಗಗಳು ಮುಗಿದಿದ್ದವು. ಆದರೆ ಆಕ್ಸಿಜನ್‌ ಟ್ಯಾಂಕರ್‌ 1.30ರ ವೇಳೆಗೆ ಬಂತು. ಆಕ್ಸಿಜನ್‌ ನೆರವಿನಲ್ಲಿದ್ದ 230 ರೋಗಿಗಳು ಸುಮಾರು 80 ನಿಮಿಷಗಳ ಕಾಲ ಆಮ್ಲಜನಕ ಇಲ್ಲದೆ ಇರಬೇಕಾಯಿತು. ಇದರಿಂದಾಗಿ 8 ರೋಗಿಗಳು ಸಾವನ್ನಪ್ಪಿದರು ಎಂದು ಹೇಳಿದೆ. ಹೈಕೋರ್ಟ್‌ನಲ್ಲಿ ಆಮ್ಲಜನಕ ಕೊರತೆ ಸಂಬಂಧ ಕಳೆದ 11 ದಿನಗಳಿಂದ ನಿರಂತರವಾಗಿ ವಿಚಾರಣೆ ನಡೆಯುತ್ತಲೇ ಇದೆ. ಇದಕ್ಕೂ ಮೊದಲು ಬಾತ್ರಾ ಆಸ್ಪತ್ರೆ ಕಾರ್ಯಕಾರಿ ನಿರ್ದೇಶಕ ಡಾ. ಸುಧಾಂಶು ಬಂಕಟ ವಿಡಿಯೋ ಸಂದೇಶ ಕಳುಹಿಸಿ ಸಹಾಯ ಯಾಚಿಸಿದ್ದರು. "ನಮ್ಮ ಆಮ್ಲಜನಕ ಮುಗಿಯುತ್ತಾ ಬಂದಿದೆ. ಕೆಲವೇ ಸಿಲಿಂಡರ್‌ಗಳಿವೆ ಅಷ್ಟೆ. ಇನ್ನು 10 ನಿಮಿಷಗಳಲ್ಲಿ ಅವುಗಳೂ ಖಾಲಿಯಾಗಲಿವೆ. ನಾವು ಮತ್ತೆ ಬಿಕ್ಕಟ್ಟಿನಲ್ಲಿದ್ದೇವೆ. ದಿಲ್ಲಿ ಸರಕಾರ ಸಹಾಯ ಮಾಡಲು ಯತ್ನಿಸುತ್ತಿದೆ, ಆದರೆ ಟ್ಯಾಂಕರ್‌ ಇನ್ನೂ ತುಂಬಾ ದೂರದಲ್ಲಿದೆ,” ಎಂದು ಅಸಹಾಯಕತೆ ತೋಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ದಿಲ್ಲಿ ನೀರಾವರಿ ಸಚಿವ ರಾಘವ್‌ ಛಡ್ಡಾ, ಇನ್ನೈದು ನಿಮಿಷದಲ್ಲಿ ಲಿಕ್ವಿಡ್‌ ಆಕ್ಸಿಜನ್‌ ಆಸ್ಪತ್ರೆ ತಲುಪಲಿದೆ ಎಂದು ಹೇಳಿದ್ದರು. ಯಾವತ್ತೂ ಆಸ್ಪತ್ರೆಗೆ ಆಮ್ಲಜನಕ ಪೂರೈಸುವವರು, ಸಂಗ್ರಹ ಇಲ್ಲದ ಕಾರಣ ಪೂರೈಸಲು ಸಾಧ್ಯವಾಗದೇ ಕೈಚೆಲ್ಲಿದ್ದಾರೆ ಎಂದು ಹೇಳಿದ್ದರು. ಆದರೆ 12.01ನಿಮಿಷಕ್ಕೆ ದಿಲ್ಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದ ಆಸ್ಪತ್ರೆ ನಮ್ಮ ಆಮ್ಲಜನಕ ಸಂಗ್ರಹ ಮುಗಿಯುತ್ತಿದೆ ಎಂದು ಹೇಳಿತ್ತು. ನಾವು ಬೆಳಿಗ್ಗೆ 6 ಗಂಟೆಯಿಂದಲೇ ಸಹಾಯ ಯಾಚಿಸುತ್ತಿದ್ದೇವೆ. ನಮ್ಮಲ್ಲಿ 307 ರೋಗಿಗಳಿದ್ದಾರೆ, ಇವರಲ್ಲಿ 230 ಸೋಂಕಿತರು ಕೃತಕ ಆಮ್ಲಜನಕ ಆಶ್ರಯಿಸಿದ್ದಾರೆ ಎಂದು ಹೇಳಿತ್ತು. ಬಾತ್ರ ಆಸ್ಪತ್ರೆ ಈ ರೀತಿ ಆಮ್ಲಜನಕದ ಕೊರತೆ ಅನುಭವಿಸುತ್ತಿರುವುದು ವಾರದಲ್ಲಿ ಇದು ಎರಡನೇ ಬಾರಿ. ಏಪ್ರಿಲ್‌ 24ರಂದು ಆಮ್ಲಜನಕ ಪೂರ್ತಿ ಖಾಲಿಯಾದ ಕೆಲವೇ ಕ್ಷಣದಲ್ಲಿ ಬಂದು ತಲುಪಿ, ಭಾರಿ ಅನಾಹುತ ತಪ್ಪಿತ್ತು. ಆದರೆ ಈ ಬಾರಿ ಆ ಅನಾಹುತ ಸಂಭವಿಸಿಯೇ ಬಿಟ್ಟಿತು. ಬಾತ್ರಾ ಆಸ್ಪತ್ರೆ ಮಾತ್ರವಲ್ಲ, ರಾಷ್ಟ್ರ ರಾಜಧಾನಿ ದಿಲ್ಲಿಯ ಹಲವು ಆಸ್ಪತ್ರೆಗಳು ಈ ರೀತಿ ತೀವ್ರ ಆಮ್ಲಜನಕದ ತೀವ್ರ ಕೊರತೆ ಅನುಭವಿಸುತ್ತಿವೆ. ಕಳೆದ ವಾರ ಇಲ್ಲಿನ ಜೈಪುರ್‌ ಗೋಲ್ಡನ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ 25 ರೋಗಿಗಳು ಸಾವನ್ನಪ್ಪಿದ್ದರು. ದಿಲ್ಲಿಯ ಆಮ್ಲಜನಕದ ಪೂರೈಕೆ ಕೋಟಾವನ್ನು 490 ಮೆಟ್ರಿಕ್‌ ಟನ್‌ಗೆ ಹೆಚ್ಚಿಸಲಾಗಿದೆ. ಆದರೆ ಪೂರೈಕೆ ಆಗುತ್ತಿರುವುದು ಮಾತ್ರ 400 ಮೆಟ್ರಿಕ್‌ ಟನ್‌. ಇನ್ನೊಂದೆಡೆ ಇಲ್ಲಿನ ನಿಜವಾದ ಬೇಡಿಕೆ 700 ಮೆಟ್ರಿಕ್‌ ಟನ್‌ ಇದೆ. ಹಾಗಾಗಿ ಸದಾ ಆಮ್ಲಜನಕದ ಕೊರತೆ ಎದುರಾಗುತ್ತಲೇ ಇದೆ.