
ಹೊಸದಿಲ್ಲಿ: ಮನೆಬಾಗಿಲಿಗೆ ನೀಡುವ ವ್ಯವಸ್ಥೆ ಆರಂಭಿಸುವ ಯೋಜನೆ ವಿಚಾರದಲ್ಲಿ ಮತ್ತು ದಿಲ್ಲಿಯ ಎಎಪಿ ಸರ್ಕಾರದ ನಡುವೆ ಹೊಸ ಸಂಘರ್ಷ ಆರಂಭವಾಗಿದೆ. ಕೋವಿಡ್ ಸಂಕಷ್ಟದಲ್ಲಿ ಜನರ ಮನೆಗೇ ಪಡಿತರಗಳನ್ನು ಪೂರೈಸುವ ಮಹತ್ತರ ಯೋಜನೆಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ. ಪಡಿತರ ಮಾಫಿಯಾದ ಪ್ರಭಾವಕ್ಕೆ ಒಳಗಾಗಿ ಕೇಂದ್ರ ಈ ಹೆಜ್ಜೆ ಅನುಸರಿಸಿದೆ. ತಮ್ಮ ಯೋಜನೆ ಬಡವರ ಪರ ಮತ್ತು ಕ್ರಾಂತಿಕಾರಿ ಯೋಜನೆಯಾಗಿತ್ತು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
'ದಿಲ್ಲಿಯಲ್ಲಿ ಮನೆಬಾಗಿಲಿಗೆ ಪಡಿತರ ಪೂರೈಕೆ ಯೋಜನೆ ಜಾರಿಯಾಗುವ ಎರಡು ದಿನಗಳ ಮೊದಲಷ್ಟೇ ಅದನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ. ಪಿಜ್ಜಾ, ಬರ್ಗರ್, ಸ್ಮಾರ್ಟ್ಫೋನ್ ಮತ್ತು ಬಟ್ಟೆಗಳು ಮನೆಗೆ ಪೂರೈಕೆಯಾಗಬಹುದು ಎಂದಾದರೆ, ಮನೆಬಾಗಿಲಿಗೆ ಪಡಿತರಗಳು ಏಕೆ ಪೂರೈಕೆಯಾಗಬಾರದು?' ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
'ರೇಷನ್ ಮಾಫಿಯಾದ ಮೇಲೆ ನಿಗಾ ಇರಿಸಲು ಮೊದಲ ಬಾರಿಗೆ ಸರ್ಕಾರವೊಂದು ಇಂತಹ ಕ್ರಮ ತೆಗೆದುಕೊಂಡಿತ್ತು. ಆ ರೇಷನ್ ಮಾಫಿಯಾ ಎಷ್ಟು ಪ್ರಬಲವಾಗಿದೆ ನೋಡಿ. ಅವರು ಯೋಜನೆ ಜಾರಿಯ ವಾರದ ಮುಂಚೆಯಷ್ಟೇ ಯೋಜನೆಯನ್ನು ರದ್ದುಮಾಡಿಸಿದ್ದಾರೆ' ಎಂದು ಆರೋಪಿಸಿದ್ದಾರೆ.
ಈ ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಅನುಮತಿಯನ್ನು ದಿಲ್ಲಿ ಸರ್ಕಾರ ಪಡೆದಿರಲಿಲ್ಲ ಎಂಬ ಕೇಂದ್ರದ ಆರೋಪವನ್ನು ಕೇಜ್ರಿವಾಲ್ ತಳ್ಳಿಹಾಕಿದ್ದಾರೆ. 'ಯೋಜನೆಯೊಂದರ ಅನುಷ್ಠಾನಕ್ಕಾಗಿ ದಿಲ್ಲಿ ಸರ್ಕಾರವು ಕೇಂದ್ರದ ಅನುಮೋದನೆ ಪಡೆಯುವ ಅಗತ್ಯವಿಲ್ಲ. ಆದರೆ ಯಾವುದೇ ವಿವಾದ ಉಂಟಾಗದಂತೆ ಐದು ಬಾರಿ ಅನುಮತಿಯನ್ನು ಕೋರಿತ್ತು' ಎಂದಿದ್ದಾರೆ.
'ದೊಡ್ಡ ಹಗರಣ ತಪ್ಪಿಸಲಾಗಿದೆ'
ಸಬ್ಸಿಡಿ ಇರುವ ಆಹಾರ ಧಾನ್ಯಗಳನ್ನು ಬೇರೆಡೆಗೆ ತಿರುಗಿಸುವ ಆಲೋಚನೆ ದಿಲ್ಲಿ ಸರ್ಕಾರದಲ್ಲಿ ಇತ್ತು ಎನಿಸುತ್ತದೆ. ಸಂಭವನೀಯ ದೊಡ್ಡ ಹಗರಣವನ್ನು ಕೇಂದ್ರ ಸರ್ಕಾರ ತಡೆದಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ.
'ಅಧಿಸೂಚಿತ ದರದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುವ ಮೂಲಕ ಅಂತಹ ಯೋಜನೆಗಳನ್ನು ಜಾರಿಗೊಳಿಸಲು ದಿಲ್ಲಿ ಸರ್ಕಾರಕ್ಕೆ ಅಧಿಕಾರವಿದೆ. ಆದರೆ ತಮ್ಮದೇ ಯೋಜನೆ ಆರಂಭಿಸುವುದಕ್ಕಾಗಿ ಆಹಾರ ಭದ್ರತಾ ಕಾಯ್ದೆಯಡಿ ಸಬ್ಸಿಡಿಯ ರೇಷನ್ ಹಂಚಿಕೆ ಮಾಡುವ ರಾಷ್ಟ್ರೀಯ ಯೋಜನೆಯನ್ನು ನಿಲ್ಲಿಸುವ ಅಥವಾ ಬದಲಿಸುವ ಅಧಿಕಾರ ಅದಕ್ಕೆ ಇಲ್ಲ' ಎಂದು ಬಿಜೆಪಿ ವಕ್ತಾರ ಹೇಳಿದ್ದಾರೆ.
ಆಧಾರ್ ಕಾರ್ಡ್ ಅಧಿಕೃತತೆಯಲ್ಲಿ ರಾಷ್ಟ್ರೀಯ ಸರಾಸರಿ ಶೇ 80ರಷ್ಟಿದ್ದರೆ, ದಿಲ್ಲಿಯಲ್ಲಿ ಶೂನ್ಯವಿದೆ. ಕೇಜ್ರಿವಾಲ್ ಸರ್ಕಾರ ಈ ಮೊದಲು ಬಯೋಮೆಟ್ರಿಕ್ ಪರಿಶೀಲನೆಗೆ ಅನುವು ಮಾಡಿಕೊಡುವ ಪಿಒಎಸ್ ಯಂತ್ರಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಇದರ ಅರ್ಥ, ಅಗತ್ಯವಿರುವವರಿಗೆ ಆಹಾರ ಧಾನ್ಯಗಳು ಪೂರೈಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಯಾವ ಮಾರ್ಗವೂ ಇಲ್ಲ ಎಂದಿದ್ದಾರೆ.
'ಕೇಜ್ರಿವಾಲ್ ಅವರು ಯಾರಿಗೆ ಪಡಿತರ ನೀಡುತ್ತಿದ್ದಾರೆ ಎನ್ನುವುದು ನಮಗೆ ತಿಳಿಯುವುದೇ ಇಲ್ಲ. ಅವರು ಪಡಿತರ ದಿಕ್ಕು ಬದಲಾವಣೆ ವ್ಯವಸ್ಥೆ ಆರಂಭಿಸಲು ಬಯಸಿದ್ದಾರೆ. ಪಡಿತರವು ಸರಿಯಾದ ವ್ಯಕ್ತಿಗೆ ತಲುಪದ ಮತ್ತು ಅದು ಎಲ್ಲಿಗೆ ಹೋಗಿದೆ ಎನ್ನುವುದು ಯಾರಿಗೂ ತಿಳಿಯಲಾಗದ ಬೃಹತ್ ಹಗರಣವನ್ನು ಶುರುಮಾಡಲು ಅವರು ಬಯಸಿದ್ದಾರೆ. ಇಂತಹ ದೊಡ್ಡ ಹಗರಣ ನಡೆಯುವುದನ್ನು ಕೇಂದ್ರ ಸರ್ಕಾರ ತಪ್ಪಿಸಿದೆ' ಎಂದು ಸಮರ್ಥಿಸಿಕೊಂಡಿದ್ದಾರೆ.