ಬೆಂಗಳೂರಿನ ದೇವಾಲಯದ ಬಳಿ ಹೋಂ ಗಾರ್ಡ್ ಜತೆ ಅಸಭ್ಯವಾಗಿ ವರ್ತಿಸಿದ ಚಾಲಕನ ಬಂಧನ
ಬೆಂಗಳೂರಿನ ದೇವಾಲಯದ ಬಳಿ ಹೋಂ ಗಾರ್ಡ್ ಜತೆ ಅಸಭ್ಯವಾಗಿ ವರ್ತಿಸಿದ ಚಾಲಕನ ಬಂಧನ
ಗಣೇಶ ದೇವಾಲಯದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಹೋಂ ಗಾರ್ಡ್ ಜತೆ ಕುಡಿದ ಅಮಲಿನಲ್ಲಿ ಚಾಲಕನೊಬ್ಬ ಅನುಚಿತವಾಗಿ ವರ್ತಿಸಿರುವ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಸಭ್ಯವಾಗಿ ವರ್ತಿಸಿದ ಚಾಲಕನನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು: ಉಪ್ಪಾರಪೇಟೆಯ ಬಿ.ಟಿ.ರಸ್ತೆಯಲ್ಲಿರುವ ಗಣೇಶ ದೇವಾಲಯದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹರಕ್ಷಕಿ(ಹೋಂ ಗಾರ್ಡ್) ಜತೆ ಅಸಭ್ಯವಾಗಿ ವರ್ತಿಸಿದ ಚಾಲಕನನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಸನ ಮೂಲದ ದೇವರಾಜ್(39) ಬಂಧಿತ ಆರೋಪಿ.
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸೆ.10ರಂದು 37 ವರ್ಷದ ಗೃಹರಕ್ಷಕಿಯನ್ನು ಬಿ.ಟಿ.ರಸ್ತೆಯಲ್ಲಿರುವ ಗಣೇಶ ದೇವಾಲಯದ ಬಳಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆರೋಪಿ ದೇವರಾಜ್ ಕುಡಿದ ಮತ್ತಿನಲ್ಲಿ ಗೃಹರಕ್ಷಕಿಗೆ ಅಶ್ಲೀಲವಾಗಿ ಕೈಸನ್ನೆ ಮಾಡಿದ್ದ. ಬೇರೆ ಯಾರಿಗೋ ಸನ್ನೆ ಮಾಡಿರಬಹುದು ಎಂದು ಗೃಹರಕ್ಷಕಿ ಸುಮ್ಮನಾಗಿದ್ದರು. ನಂತರ ಆರೋಪಿಯು ಗೃಹರಕ್ಷಕಿಯ ಕೈಯನ್ನು ಬಲವಂತವಾಗಿ ಹಿಡಿದು, ಬಟ್ಟೆ ಎಳೆದು ಸಾರ್ವಜನಿಕ ಪ್ರದೇಶದಲ್ಲಿ ಅವರ ಮಾನಕ್ಕೆ ಧಕ್ಕೆ ಉಂಟು ಮಾಡಿದ್ದ.
ದೇವರಾಜ್ನ ವರ್ತನೆ ಗಮನಿಸಿದ್ದ ಸಾರ್ವಜನಿಕರು ಅವನನ್ನು ಹಿಡಿದಿದ್ದರು. ಗೃಹರಕ್ಷಕಿಯು ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಹೊಯ್ಸಳದಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ದೇವರಾಜ್ನನ್ನು ಬಂಧಿಸಿ ಠಾಣೆಗೆ ಕರೆದೊಯ್ದರು. ವೃತ್ತಿಯಲ್ಲಿ ಚಾಲಕನಾಗಿರುವ ಆರೋಪಿಯು, ದೇವಾಲಯಕ್ಕೆ ಬರುತ್ತಿದ್ದ ಮಹಿಳೆಯರ ಜತೆಗೂ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.