ಗಾಳಿಪಟ ತೆಗೆಯುವಾಗ ವಿದ್ಯುತ್ ತಗುಲಿ ಬಾಲಕ ಸಾವು: ಬೆಸ್ಕಾಂ, ಬಿಬಿಎಂಪಿ ವಿರುದ್ಧ 'ನರಹತ್ಯೆ' ಕೇಸ್

ಗಾಳಿಪಟ ತೆಗೆಯುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ಬಾಲಕ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ, ಬೆಸ್ಕಾಂ, ಕೆಪಿಟಿಸಿಎಲ್ ಮತ್ತು ಕಟ್ಟಡ ಮಾಲೀಕನ ವಿರುದ್ಧ ಬೆಂಗಳೂರಿನ ವಿವೇಕನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಗಾಳಿಪಟ ತೆಗೆಯುವಾಗ ವಿದ್ಯುತ್ ತಗುಲಿ ಬಾಲಕ ಸಾವು: ಬೆಸ್ಕಾಂ, ಬಿಬಿಎಂಪಿ ವಿರುದ್ಧ 'ನರಹತ್ಯೆ' ಕೇಸ್
Linkup
ಬೆಂಗಳೂರು: ಕಟ್ಟಡದ ಮೇಲ್ಛಾವಣಿಯಿಂದ ಗಾಳಿಪಟವನ್ನು ತೆಗೆಯುವ ವೇಳೆ ವಿದ್ಯುತ್ ತಂತಿ ತಗುಲಿ ಎಂಟು ವರ್ಷದ ಬಾಲಕ ಸುಟ್ಟು ಕರಕಲಾದ ಪ್ರಕರಣ ನಡೆದು ಮೂರು ತಿಂಗಳಾದ ಬಳಿಕ, ಬೆಂಗಳೂರಿನ ಠಾಣೆಯಲ್ಲಿ ಬೆಸ್ಕಾಂ, ಬಿಬಿಎಂಪಿ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ಹಾಗೂ ಕಟ್ಟಡ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 304ರ ಅಡಿ ಕೊಲೆಗೆ ಸಂಬಂಧಿಸದ ಉದ್ದೇಶಪೂರ್ವಕವಲ್ಲದ ನರಹತ್ಯೆ ಮತ್ತು ಸೆಕ್ಷನ್ 304ಎ ಅಡಿ ನಿರ್ಲಕ್ಷ್ಯದಿಂದ ಸಾವಿಗೆ ಕಾರಣ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ತಮ್ಮ ಮಗ ವಿದ್ಯುತ್ ಆಘಾತಕ್ಕೆ ಒಳಗಾದ ಕಟ್ಟಡದ ಮೊದಲ ಮಹಡಿಯನ್ನು ಅಕ್ರಮವಾಗಿ ಕಟ್ಟಡಲಾಗಿದೆ ಎಂದು ಬಾಲಕನ ತಂದೆ ಪ್ರಕಾಶ್ ಸಿಂಗ್ ಆರೋಪಿಸಿದ್ದರು. ಜೂನ್ 20ರಂದು ಎಂಟು ವರ್ಷದ ಬಾಲಕ ಶಿಶಿಲ್ ಸಿಂಗ್ ಮನೆ ಸಮೀಪ ಗಾಳಿಪಟ ಹಾರಿಸುತ್ತಿದ್ದಾಗ ಅದು ಮರವೊಂದರ ಕೊಂಬೆಗೆ ಸಿಲುಕಿಕೊಂಡಿತ್ತು. ಅದನ್ನು ತೆಗೆಯಲು ಪಕ್ಕದಲ್ಲಿದ್ದ ಅನೀಶ್ ಎಂಬುವವರ ಮಾಲೀಕತ್ವದ ಮನೆಯ ತಾರಸಿಗೆ ಆತ ತೆರಳಿದ್ದ. 'ಗಾಳಿಪಟವನ್ನು ಎಳೆದು ತೆಗೆಯಲು ಪ್ರಯತ್ನಿಸುವಾಗ ಶಿಶಿಲ್‌ಗೆ ತೀವ್ರ ವಿದ್ಯುದಾಘಾತವಾಗಿ ದೇಹದ ಬಹುಭಾಗ ಸುಟ್ಟುಹೋಗಿತ್ತು. ಅವನನ್ನು ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಿದ್ದೆವು. ಒಂದು ತಿಂಗಳಿಗೂ ಹೆಚ್ಚು ಸಮಯ ಸಾವು-ಬದುಕಿನ ನಡುವಿನ ತೀವ್ರ ಹೋರಾಟದ ಬಳಿಕ ಜುಲೈ 23ರಂದು ಮೃತಪಟ್ಟಿದ್ದ' ಎಂದು ಪ್ರಕಾಶ್ ಸಿಂಗ್ ದೂರಿನಲ್ಲಿ ತಿಳಿಸಿದ್ದರು. ಕಳೆದ ವಾರ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದ ಪ್ರಕಾಶ್ ಸಿಂಗ್, 'ಮೊದಲ ಮಹಡಿಯನ್ನು ಆಶಿಶ್ ಅಕ್ರಮವಾಗಿ ನಿರ್ಮಿಸಿರುವುದು ಕಂಡುಬಂದಿದೆ. ತಾರಸಿಗೆ ಬಹಳ ಸಮೀಪದಲ್ಲಿ ಹೈ ಟೆನ್ಷನ್ ವೈರ್‌ಗಳು ಸಾಗಿವೆ, ಹೀಗಾಗಿಯೇ ನನ್ನ ಮಗನಿಗೆ ವಿದ್ಯುತ್ ತಗುಲಿತ್ತು. ಅಕ್ರಮವಾಗಿ ಮಹಡಿ ನಿರ್ಮಿಸದೆ ಇದ್ದಿದ್ದರೆ ನನ್ನ ಮಗ ಸಾಯುತ್ತಿರಲಿಲ್ಲ. ಓ ಅಕ್ರಮ ನಿರ್ಮಾಣಕ್ಕೆ ಮತ್ತು ನನ್ನ ಮಗನಿಗೆ ವಿದ್ಯುತ್ ತಗುಲಿ ಸಾಯಲು ನಾನು ಬೆಸ್ಕಾಂ, ಬಿಬಿಎಂಪಿ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳೇ ಹೊಣೆ ಎಂದು ದೂಷಿಸುತ್ತೇನೆ' ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕಾಶ್ ಸಿಂಗ್ ಅವರ ದೂರಿನ ಸಂಬಂಧ ಸರ್ಕಾರಿ ಸಂಸ್ಥೆಗಳಿಗೆ ನೋಟಿಸ್‌ಗಳನ್ನು ನೀಡಲಾಗಿದ್ದು, ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.