ಕುಡಿದು ವಾಹನ ಚಾಲನೆ: 18 ತಿಂಗಳ ಬಳಿಕ ತಪಾಸಣೆಗಿಳಿದ ಪೊಲೀಸರು, ಮೊದಲ ದಿನವೇ 46 ಪ್ರಕರಣ

ಬೆಂಗಳೂರಿನಲ್ಲಿ ಕುಡಿದು ವಾಹನ ಚಾಲನೆ ಮಾಡುವುದರ ತಪಾಸಣೆ ಮತ್ತೆ ಆರಂಭವಾಗಿದೆ. ಕೋವಿಡ್ ಕಾರಣದಿಂದ 18 ತಿಂಗಳು ನಿಂತಿದ್ದ ಈ ಕಾರ್ಯಾಚರಣೆಯನ್ನು ಸಂಚಾರ ಪೊಲೀಸರು ಮತ್ತೆ ಆರಂಭಿಸಿದ್ದಾರೆ.

ಕುಡಿದು ವಾಹನ ಚಾಲನೆ: 18 ತಿಂಗಳ ಬಳಿಕ ತಪಾಸಣೆಗಿಳಿದ ಪೊಲೀಸರು, ಮೊದಲ ದಿನವೇ 46 ಪ್ರಕರಣ
Linkup
ಬೆಂಗಳೂರು: ಕೋವಿಡ್ 19 ಕಾರಣದಿಂದ ನಗರದಲ್ಲಿ ಕುಡಿದು ವಾಹನ ಚಾಲನೆ ಮಾಡುವುದರ ತಪಾಸಣೆಯನ್ನು ಸ್ಥಗಿತಗೊಳಿಸಿದ್ದ ಪೊಲೀಸರು, 18 ತಿಂಗಳ ಬಳಿಕ ಶುಕ್ರವಾರದಿಂದ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಒಂದೇ ದಿನ 46 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಈ ಹಿಂದಿನಂತೆ ಸಾಧನಗಳನ್ನು ಬಳಸುವ ಬದಲು, ರಕ್ತ ಪರೀಕ್ಷೆ ವಿಧಾನ ಅನುಸರಿಸುತ್ತಿದ್ದಾರೆ. ಎಲ್ಲ 46 ವಾಹನ ಸವಾರರು/ಚಾಲಕರನ್ನೂ ರಕ್ತ ಪರೀಕ್ಷೆಗೆ ಒಳಪಡಿಸಲಾಗಿದೆ. ಆಲ್ಕೋಮೀಟರ್ ಯಂತ್ರ ತಂತ್ರಜ್ಞಾನ ಬಳಕೆಗೆ ಬರುವ ಮುನ್ನ, ಪೊಲೀಸ್ ಸಿಬ್ಬಂದಿ ಬಳಸುತ್ತಿದ್ದ ವೈದ್ಯಕೀಯ ಪರೀಕ್ಷೆಯ ವಿಧಾನವನ್ನು ಮರಳಿ ಅವಲಂಬಿಸಿದ್ದಾರೆ. 'ಅವರ ಬಾಯಿಯಿಂದ ಆಲ್ಕೋಹಾಲ್ ವಾಸನೆ ಬಂದ ಬಳಿಕ ಅವರನ್ನು ಸರ್ಕಾರಿ ಆಸ್ಪತ್ರೆಗೆ ಪರೀಕ್ಷೆಗಾಗಿ ಕರೆದೊಯ್ದಿದ್ದೆವು. ಅವರ ರಕ್ತದ ಮಾದರಿಗಳಲ್ಲಿ ಆಲ್ಕೋಹಾಲ್ ಇರುವ ಅಂಶ ಪತ್ತೆಯಾಗಿದೆ ಎಂದು ವೈದ್ಯರು ವರದಿ ನೀಡಿದ್ದರು. ಅದರ ಆಧಾರದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ' ಎಂದು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿಯೇ ( ಮಾಡಿ ವಾಹನ ಚಾಲನೆ) ತಪಾಸಣೆಗಳನ್ನು ಆರಂಭಿಸಲು ವಿಭಾಗ ಉದ್ದೇಶಿಸಿತ್ತು. ಆದರೆ ಎರಡನೆಯ ಅಲೆ ಕೊರೊನಾ ವೈರಸ್ ಸೋಂಕು ತೀವ್ರಗೊಂಡ ಹಿನ್ನೆಲೆಯಲ್ಲಿ ಅದನ್ನು ಕೈಬಿಡಲಾಗಿತ್ತು. 'ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಭೀಕರ ರಸ್ತೆ ಅಪಘಾತಗಳಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಅವುಗಳಲ್ಲಿ ಹೆಚ್ಚಿನವು ರಾತ್ರಿ ಅಥವಾ ನಸುಕಿನಲ್ಲಿ ಸಂಭವಿಸಿವೆ. ಇವುಗಳಲ್ಲಿ ಕೆಲವು ಕುಡಿದು ವಾಹನ ಚಾಲನೆ ಅಥವಾ ಮಾದಕವಸ್ತುಗಳ ಸೇವನೆ ಬಳಿಕ ವಾಹನೆ ಚಲಾಯಿಸಿದ್ದರಿಂದ ಉಂಟಾಗಿರಬಹುದು. ಅಂತಹ ಅಪಘಾತಗಳ ವಿಧಿ ವಿಜ್ಞಾನ ವರದಿಗಳಿಗೆ ನಾವು ಕಾಯುತ್ತಿದ್ದೇವೆ' ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ವಿಆರ್ ರವಿಕಾಂತೇ ಗೌಡ ತಿಳಿಸಿದ್ದಾರೆ.