ಕೋಲಾರದಲ್ಲಿ ರೈತ ಮಾಲ್‌ ಸ್ಥಾಪನೆಗೆ ಚಿಂತನೆ: ಎಲ್ಲಾ ಕೃಷಿ ಪರಿಕರಗಳು ಒಂದೇ ಸೂರಿನಡಿ ಲಭ್ಯ!

ರೈತರಿಗೆ ಬೇಕಾದ ಎಲ್ಲಾ ಪರಿಕರಗಳು ಒಂದೇ ಸೂರಿನಡಿ ಸಿಗುವಂತೆ ಮಾಡುವ ರೈತ ಮಾಲ್‌ ಸ್ಥಾಪನೆಗೆ ಚಿಂತನೆ ನಡೆಸಲಾಗಿದ್ದು, ಅಂತಿಮ ರೂಪ ನೀಡಲು ನ.13 ರಂದು ಮತ್ತೆ ಸಭೆ ಕರೆಯುವುದಾಗಿ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ತಿಳಿಸಿದರು

ಕೋಲಾರದಲ್ಲಿ ರೈತ ಮಾಲ್‌ ಸ್ಥಾಪನೆಗೆ ಚಿಂತನೆ: ಎಲ್ಲಾ ಕೃಷಿ ಪರಿಕರಗಳು ಒಂದೇ ಸೂರಿನಡಿ ಲಭ್ಯ!
Linkup
ಕೋಲಾರ: ನಬಾರ್ಡ್‌ ಹಾಗೂ ಡಿಸಿಸಿ ಬ್ಯಾಂಕ್‌ ಸಹಯೋಗದಲ್ಲಿಅನ್ನದಾತನಿಗೆ ಅಗತ್ಯವಾದ ಎಲ್ಲಾಪರಿಕರಗಳು ಒಂದೇ ಸೂರಿನಡಿ ಸಿಗುವಂತೆ ಮಾಡುವ ಸ್ಥಾಪನೆಗೆ ಚಿಂತನೆ ನಡೆಸಲಾಗಿದ್ದು, ಅಂತಿಮ ರೂಪ ನೀಡಲು ನ.13 ರಂದು ಮತ್ತೆ ಸಭೆ ಕರೆಯುವುದಾಗಿ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ತಿಳಿಸಿದರು. ಜಿಲ್ಲಾ ಸಹಕಾರಿ ಯೂನಿಯನ್‌ ಸಭಾಂಗಣದಲ್ಲಿ , ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರು ಹಾಗೂ ಸಹಕಾರಿ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ರೈತರಿಗೆ ಅಗತ್ಯವಾದ ಗೊಬ್ಬರ, ಕೃಷಿ ಯಂತ್ರಗಳು, ಕೀಟನಾಶಕ, ಕೃಷಿಗೆ ಅಗತ್ಯವಾದ ಎಲ್ಲಾ ರೀತಿಯ ಸಲಕರಣೆಗಳನ್ನು ಒಂದೇ ಸೂರಿನಡಿ ಸಿಗುವಂತೆ ಮಾಡಲು ಟಿಎಪಿಸಿಎಂಎಸ್‌ ಆಶ್ರಯದಲ್ಲಿ ರೈತ ಮಾಲ್‌ ಸ್ಥಾಪಿಸುವ ಮೂಲಕ ರೈತರು ಕ್ರೆಡಿಟ್‌ ಕಾರ್ಡ್‌ ಬಳಸಿ ಖರೀದಿಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಅಂತಿಮ ರೂಪ ನೀಡಲು ನ.13ಕ್ಕೆ ಪುನಃ ಸಭೆ ನಡೆಸುವುದಾಗಿ ಹೇಳಿದರು. ಕಡಿಮೆ ಬೆಲೆಗೆ: ದುರುಪಯೋಗಕ್ಕೆ ಅವಕಾಶವಿಲ್ಲದಂತೆ ರೈತರಿಗೆ ಡಿಸಿಸಿ ಬ್ಯಾಂಕ್‌ ಮೂಲಕ ಕ್ರೆಡಿಟ್‌ ಕಾರ್ಡ್‌ ನೀಡಲಿದ್ದು, ಅದನ್ನು ಬಳಸಿ ಅಗತ್ಯ ಸಲಕರಣೆ ಪಡೆಯಬಹುದಾಗಿದೆ, ಜತೆಗೆ ಕಂಪನಿಗಳಿಂದ ರೈತರಿಗೆ ಅಗತ್ಯವಾದ ಉತ್ಪನ್ನವನ್ನು ನೇರವಾಗಿ ಮಾಲ್‌ ಪಡೆಯುವುದರಿಂದ ರೈತರಿಗೆ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಉತ್ಪನ್ನ ಸಿಗಲಿದೆ. 2004ರಿಂದ 2014ರವರೆಗೂ ಡಿಸಿಸಿ ಬ್ಯಾಂಕ್‌ ದಿವಾಳಿಯಾಗಿ ಜಿಲ್ಲೆಯ ರೈತರಿಗೆ ಯಾವುದೇ ಸಾಲ ಮನ್ನಾ ಪ್ರಯೋಜನ ಸಿಕ್ಕಿರಲಿಲ್ಲ. ಇದೀಗ ಬ್ಯಾಂಕ್‌ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ವಾಣಿಜ್ಯ ಬ್ಯಾಂಕುಗಳು, ಚಿನ್ನದ ಸಾಲ ನೀಡುವ ಬ್ಯಾಂಕುಗಳಿಗೆ ಕರುಣೆ ಇಲ್ಲ, ರೈತರ ಶೋಷಣೆ ನಡೆಯುತ್ತಿದೆ, ಇದೆಲ್ಲವನ್ನು ತಪ್ಪಿಸಿ ರೈತರ ಋುಣ ತೀರಿಸುವ ಸದುದ್ದೇಶ ಇದಾಗಿದೆ ಎಂದರು. ಕುರಿ, ಕೋಳಿ, ಮೇಕೆ ಮಾಂಸ ಕಸಾಯಿಖಾನೆ ಸ್ಥಾಪನೆ, ಮಾಂಸ ರಫ್ತು ಕುರಿತಂತೆ ಅಗತ್ಯ ಮಾಹಿತಿ ಸಂಗ್ರಹಿಸಲು ನಸೀರ್‌ ಅಹಮದ್‌ ಅವರಿಗೆ, ಹಣ್ಣು, ತರಕಾರಿ ಬೆಳೆ ಮತ್ತು ಬೇಡಿಕೆ ಕುರಿತು ಮಾಹಿತಿ ಸಂಗ್ರಹಿಸಲು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಅನಿಲ್‌ಕುಮಾರ್‌ ಅವರಿಗೆ ಸೂಚಿಸಿದರು. ಶಾಸಕರ ಸಲಹೆ: ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಎರಡೂ ಜಿಲ್ಲೆಗಳಲ್ಲಿ ರೈತ ಮಾಲ್‌ ಸ್ಥಾಪಿಸುವ ಮೂಲಕ ರೈತರಿಗೆ ನೆರವಾಗುವ ಪ್ರಯತ್ನ ಶ್ಲಾಘನೀಯ, ಇದರ ಜತೆಗೆ ರೈತರಿಗೆ ನ್ಯಾನೋ ಗೊಬ್ಬರ ಬಳಕೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ಶಾಸಕ ಶಿವಶಂಕರರೆಡ್ಡಿ ಮಾತನಾಡಿ, ಕೇಂದ್ರದ ಇತ್ತೀಚಿನ ನೀತಿ ಖಾಸಗೀಕರಣದತ್ತ ಸಾಗಿದೆ. ರೈತ ಮಾಲ್‌ ಜತೆಗೆ ರೈತ ಉತ್ಪಾದಕ ಸಂಸ್ಥೆಗಳನ್ನು ಬಲಿಷ್ಠಗೊಳಿಸುವ ಮೂಲಕ ರೈತರ ಉತ್ಪನ್ನಗಳಿಗೂ ಮಾರುಕಟ್ಟೆ ಒದಗಿಸುವ ಪ್ರಯತ್ನ ನಡೆಸಬೇಕಾಗಿದೆ. ರಾಜ್ಯದಲ್ಲೇ ಇದು ಹೊಸ ಪ್ರಯತ್ನ ಎಂದು ತಿಳಿಸಿದರು. ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಮಾತನಾಡಿ, ರೈತರಿಗೆ ಅಗತ್ಯ ಸಲಕರಣೆ ಒದಗಿಸುವುದರ ಜತೆಗೆ ರೈತ ಬೆಳೆದ ಬೆಳೆಗಳ ಮಾರಾಟಕ್ಕೆ ಮಧ್ಯವರ್ತಿಗಳ ಕಾಟ ತಪ್ಪಿಸಲು ಪ್ರಯತ್ನ ಮಾಡೋಣ ಎಂದರು. ವಿಧಾನಪರಿಷತ್‌ ಸದಸ್ಯ ನಸೀರ್‌ ಅಹಮದ್‌ ಮಾತನಾಡಿ, ರೈತ ಮಾಲ್‌ ಜತೆಗೆ ಜಿಲ್ಲೆಯಲ್ಲಿ ಪುಡ್‌ ಪ್ರೊಸೆಸ್ಸಿಂಗ್‌ ಯುನಿಟ್‌ಗಳ ಸ್ಥಾಪನೆಗೂ ಒತ್ತು ನೀಡಬೇಕು, ಕೃಷಿ ಉತ್ಪನ್ನಗಳ ರಫ್ತಿಗೆ ಒತ್ತು ನೀಡಬೇಕು, ಈ ನಿಟ್ಟಿನಲ್ಲಿ ಆಲೋಚನೆ ಅಗತ್ಯ ಎಂದರು. ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಇಡೀ ದೇಶದಲ್ಲೇ ನಡೆಸುತ್ತಿರುವ ಮೊದಲ ಪ್ರಯೋಗ ಇದಾಗಿದ್ದು, ಇದಕ್ಕೆ ಎಲ್ಲರ ಸಹಮತ ಇದೆ, ಕ್ರೆಡಿಟ್‌ ಕಾರ್ಡ್‌ ವಹಿವಾಟಿನಿಂದ ಬ್ಯಾಂಕ್‌-ಗ್ರಾಹಕರ ನಡುವೆ ಸಂಪರ್ಕ ವೃದ್ದಿಗೂ ಸಹಕಾರಿಯಾಗಲಿದೆ ಎಂದರು. ಸಭೆಯಲ್ಲಿಜಿಪಂ ಮಾಜಿ ಅಧ್ಯಕ್ಷ ಶ್ರೀನಿವಾಸನ್‌, ಕೋಚಿಮುಲ್‌ ಮಾಜಿ ಅಧ್ಯಕ್ಷ ಬ್ಯಾಟಪ್ಪ, ಸಹಕಾರಿ ಯೂನಿಯನ್‌ ಅಧ್ಯಕ್ಷ ಅ.ಮು.ಲಕ್ಷಿತ್ರ್ಮನಾರಾಯಣ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ನಾಗರಾಜ್‌, ನಿರ್ದೇಶಕರು ಮತ್ತಿತರರು ಭಾಗವಹಿಸಿದ್ದರು. ಪ್ಯಾಕ್ಸ್‌ ಮತ್ತು ಟಿಎಪಿಸಿಎಂಎಸ್‌ಗಳಿಗೆ ಶೇ.1 ರ ಬಡ್ಡಿದರದಲ್ಲಿ ನಬಾರ್ಡ್‌ ಸಾಲ ನೀಡಲಿದ್ದು, ರೈತ ಮಾಲ್‌ ಸ್ಥಾಪನೆಯ ಹಾದಿ ಸುಗಮವಾಗಿದೆ. ನಬಾರ್ಡ್‌ ಸಿಜಿಎಂ ಮುಂದಿನ ವಾರ ಬೆಂಗಳೂರಿನ ಅಪೆಕ್ಸ್‌ ಬ್ಯಾಂಕಿಗೆ ಬರಲಿದ್ದು, ಈ ಕುರಿತು ಚರ್ಚಿಸುವೆ. -ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ