ಕೊರೊನಾ ಹಿನ್ನೆಲೆ, ರಾಜ್ಯ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆ ರಿಯಾಯಿತಿ ಅವಧಿ ಜೂನ್‌ 30ರವರೆಗೆ ವಿಸ್ತರಣೆ

ರಾಜ್ಯದಲ್ಲಿ ಪ್ರತಿ ವರ್ಷವೂ ಏಪ್ರಿಲ್‌ ಅಂತ್ಯದೊಳಗೆ ಆಸ್ತಿ ತೆರಿಗೆ ಪಾವತಿಸಿದವರಿಗೆ ಶೇ. 5ರಷ್ಟು ರಿಯಾಯಿತಿ ಸಿಗುತ್ತದೆ. ಆದರೆ ಈ ಬಾರಿ ಏ.27ರಿಂದಲೇ ಕರ್ಫ್ಯೂ ವಿಧಿಸಿರುವುದರಿಂದ ಈ ರಿಯಾಯಿತಿ ದೊರೆಯುವ ಅವಧಿಯನ್ನು ಜೂನ್‌ 30ರವರೆಗೆ ವಿಸ್ತರಿಸಲಾಗಿದೆ.

ಕೊರೊನಾ ಹಿನ್ನೆಲೆ, ರಾಜ್ಯ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆ ರಿಯಾಯಿತಿ ಅವಧಿ ಜೂನ್‌ 30ರವರೆಗೆ ವಿಸ್ತರಣೆ
Linkup
ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳ ಮೇಲಿನ ಸ್ವಯಂ ಘೋಷಿತ ಆಸ್ತಿ ಪಾವತಿಸಲು ಶೇ.5 ರಿಯಾಯಿತಿ ನೀಡುವ ಅವಧಿಯನ್ನು ಜೂ. 30 ರವರೆಗೆ ವಿಸ್ತರಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ಮಾತ್ರ ಇದು ಅನ್ವಯವಾಗುವುದಿಲ್ಲ. ಈ ಹಿಂದೆ ಏಪ್ರಿಲ್‌ ತಿಂಗಳ ಒಳಗೆ ಪಾವತಿಸಿದರೆ ಶೇ. 5 ರಿಯಾಯಿತಿ ಎಂದು ಘೋಷಿಸಲಾಗಿತ್ತು. ಆದರೆ ಕೋವಿಡ್‌ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ರಿಯಾಯಿತಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಕೊರೊನಾ ಎರಡನೇ ಅಲೆ ತೀವ್ರವಾಗಿರುವುದರಿಂದ ರಿಯಾಯಿತಿ ದೊರೆಯುವ ಅವಧಿಯನ್ನು ಜೂನ್‌ 30ರವರೆಗೆ ವಿಸ್ತರಣೆ ಮಾಡಲಾಗಿದೆ. ಕೊರೊನಾ ಸೋಂಕು ನಿಯಂತ್ರಣ ಸಂಬಂಧ ಮೇ 12ರವರೆಗೆ ಕರ್ಫ್ಯೂ ಜಾರಿಗೊಳಿಸಿರುವುದರಿಂದ, ಸಂಕಷ್ಟಕ್ಕೆ ಸಿಲುಕಿದ್ದ ಆಸ್ತಿ ಮಾಲೀಕರ ಕೋರಿಕೆಗೆ ಸರಕಾರ ಸ್ಪಂದಿಸಿದೆ. 14 ದಿನಗಳ ಕಾಲ ಕರ್ಫ್ಯೂ ಜಾರಿಯಲ್ಲಿರುವುದರಿಂದ ತೆರಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಶೇ.5ರಷ್ಟು ರಿಯಾಯಿತಿ ಅವಧಿಯನ್ನು ವಿಸ್ತರಿಸುವಂತೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ತೆರಿಗೆದಾರರು ಒತ್ತಾಯಿಸಿದ್ದರು. ಪ್ರತಿ ವರ್ಷವೂ ಏಪ್ರಿಲ್‌ ಅಂತ್ಯದೊಳಗೆ ಪಾವತಿಸಿದವರಿಗೆ ಮಾತ್ರ ಶೇ.5ರಷ್ಟು ರಿಯಾಯಿತಿ ಸಿಗುತ್ತದೆ. ಆದರೆ, ಈ ಸಲ ಏ.27ರಿಂದಲೇ ಕರ್ಫ್ಯೂ ವಿಧಿಸಿರುವುದರಿಂದ ಆಸ್ತಿ ಮಾಲೀಕರು ಬ್ಯಾಂಕ್‌ಗಳಿಗೆ ಹೋಗಿ ತೆರಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಆರ್ಥಿಕ ಸಂಕಷ್ಟದಿಂದಾಗಿ ತೆರಿಗೆ ಪಾವತಿ ಮಾಡಲು ಆಗಿಲ್ಲ. ಹಾಗಾಗಿ, ತೆರಿಗೆದಾರರಿಗೆ ಶೇ.5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಜೂನ್‌ 30ರವರೆಗೆ ವಿಸ್ತರಣೆ ಮಾಡಲಾಗಿದೆ. ಕಳೆದ ವರ್ಷವೂ ಶೇ.5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಒಂದು ತಿಂಗಳು ವಿಸ್ತರಿಸಲಾಗಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಮೇ 31ರ ಒಳಗೆ ಆಸ್ತಿ ತೆರಿಗೆ ಪಾವತಿಸಿದರೆ ಮಾತ್ರ ಈ ಶೇ.5ರ ರಿಯಾಯಿತಿ ಸಿಗಲಿದೆ. ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಜನರು ಕಂಗೆಟ್ಟು ನಿತ್ಯದ ಜೀವನ ನಡೆಸುವುದು ದುಸ್ತರವಾಗಿದೆ. ಹೀಗಾಗಿ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು ಎಂದು 'ಚೇಂಬರ್‌ ಆಫ್‌ ಕಾಮರ್ಸ್‌' ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿತ್ತು. ಆದರೆ ತೆರಿಗೆಯಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ.