ಆದಾಯ ತೆರಿಗೆ ಪೋರ್ಟಲ್‌ ಸಮಸ್ಯೆ ಇತ್ಯರ್ಥಕ್ಕೆ ಇನ್ಫೋಸಿಸ್‌ಗೆ ಸೂಚನೆ

ಆದಾಯ ತೆರಿಗೆ ಇಲಾಖೆಯ ನೂತನ ವೆಬ್‌ ಪೋರ್ಟಲ್‌ನಲ್ಲಿ ಸಮಸ್ಯೆಗಳು ಮುಂದುವರಿದಿದ್ದು, ಕಾಣಿಸಿರುವ ಪ್ರಮುಖ ಅಡಚಣೆಗಳನ್ನು ವಾರದೊಳಗೆ ಬಗೆಹರಿಸುವಂತೆ ಇನ್ಫೋಸಿಸ್‌ಗೆ ಕೇಂದ್ರ ಸರಕಾರ ಸೂಚಿಸಿದೆ.

ಆದಾಯ ತೆರಿಗೆ ಪೋರ್ಟಲ್‌ ಸಮಸ್ಯೆ ಇತ್ಯರ್ಥಕ್ಕೆ ಇನ್ಫೋಸಿಸ್‌ಗೆ ಸೂಚನೆ
Linkup
ಹೊಸದಿಲ್ಲಿ: ಇಲಾಖೆಯ ನೂತನ ವೆಬ್‌ ಪೋರ್ಟಲ್‌ನಲ್ಲಿ ಕಾಣಿಸಿರುವ ಪ್ರಮುಖ ಅಡಚಣೆಗಳನ್ನು ವಾರದೊಳಗೆ ಬಗೆಹರಿಸುವಂತೆ ಇನ್ಫೋಸಿಸ್‌ಗೆ ಕೇಂದ್ರ ಸರಕಾರ ಮಂಗಳವಾರ ಸೂಚಿಸಿದೆ. ಪೋರ್ಟಲ್‌ನಲ್ಲಿರುವ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಮತ್ತು 5 ಪ್ರಮುಖ ತೊಂದರೆಗಳನ್ನು ವಾರದೊಳಗೆ ಬಗೆಹರಿಸುವಂತೆ ಹಣಕಾಸು ಸಚಿವೆ ಅವರು ಸೂಚಿಸಿದ್ದಾರೆ. ಹಳೆಯ ಐಟಿಆರ್‌ಗಳ ವೀಕ್ಷಣೆ, ರಿಟರ್ನ್ಸ್‌ ಸಲ್ಲಿಕೆ ಕುರಿತ 5 ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದಿದ್ದಾರೆ. ಕಳೆದ ಜೂನ್‌ 7ರಂದು ಬಿಡುಗಡೆಯಾದ ನೂತನ ವೆಬ್‌ ಪೋರ್ಟಲ್‌ ಅನ್ನು ಇನ್ಫೋಸಿಸ್‌ ಅಭಿವೃದ್ಧಿಪಡಿಸಿತ್ತು. ಆದರೆ ನಂತರ ಹಣಕಾಸು ಸಚಿವಾಲಯವು ಸುಮಾರು 2,000ಕ್ಕೂ ಹೆಚ್ಚು ಸಮಸ್ಯೆಗಳಿಗೆ ಸಂಬಂಧಿಸಿ 700ಕ್ಕೂ ಹೆಚ್ಚು ಇ-ಮೇಲ್‌ಗಳನ್ನು ಸ್ವೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವರು ಇನ್ಫೋಸಿಸ್‌ ಜತೆ ಆನ್‌ಲೈನ್‌ ಮೂಲಕ ಮಂಗಳವಾರ ಮಾತುಕತೆ ನಡೆಸಿದರು. ಜಾಲತಾಣಗಳಲ್ಲೂ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹೊಸ ಪೋರ್ಟಲ್‌ ಪರಿಣಾಮ ತೆರಿಗೆದಾರರು ಮತ್ತು ಬಳಕೆದಾರರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಸಚಿವರು ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ವಿಳಂಬಿಸದೆ ಪರಿಹರಿಸಬೇಕು ಎಂದು ಸೂಚಿಸಿದ್ದಾರೆ. ಈಗಾಗಲೇ ಇನ್ಫೋಸಿಸ್‌ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯಪ್ರವೃತ್ತವಾಗಿದೆ. ಫಾರಂ 15ಸಿಎ/15ಸಿಬಿ, ಟಿಡಿಎಸ್‌ ಸ್ಟೇಟ್‌ಮೆಂಟ್‌, ಡಿಜಿಟಲ್‌ ಸಿಗ್ನೇಚರ್‌ ಸರ್ಟಿಫೀಕೇಟ್‌, ಹಳೆಯ ಐಟಿಆರ್‌ ವೀಕ್ಷಣೆ ಕುರಿತ ತಾಂತ್ರಿಕ ಸಮಸ್ಯೆಗಳು ವಾರದೊಳಗೆ ಬಗೆಹರಿಯುವ ನಿರೀಕ್ಷೆ ಇದೆ ಎಂದು ಇನ್ಫೋಸಿಸ್‌ ತಿಳಿಸಿರುವುದಾಗಿ ಐಟಿ ಇಲಾಖೆಯ ಪ್ರಕಟಣೆ ತಿಳಿಸಿದೆ. ಸಭೆಯಲ್ಲಿ ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್‌ ಠಾಕೂರ್‌, ಕಂದಾಯ ಕಾರ್ಯದರ್ಶಿ ತರುಣ್‌ ಬಜಾಜ್‌, ಇನ್ಫೋಸಿಸ್‌ನ ಸಿಇಒ ಸಲೀಲ್‌ ಪರೇಖ್‌, ಸಿಒಒ ಪ್ರವೀಣ್‌ ರಾವ್‌ ಭಾಗವಹಿಸಿದ್ದರು.