ಮರಾಠ ಕೋಟಾ ಅಸಾಂವಿಧಾನಿಕ, ಮಹಾರಾಷ್ಟ್ರದ ಮೀಸಲಾತಿ ಕಾನೂನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

2018ರಲ್ಲಿ ಅಂದಿನ ಮಹಾರಾಷ್ಟ್ರ ಬಿಜೆಪಿ ಸರಕಾರ ಮರಾಠ ಸಮುದಾಯದಕ್ಕೆ ಶೇ.16ರಷ್ಟು ಮೀಸಲಾತಿ ನೀಡಿತ್ತು. ಇದರ ಸಾಂವಿಧಾನಿಕ ಮಾನ್ಯತೆಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್‌, ಸರಕಾರದ ನಿರ್ಧಾರ ಸಮಾನತೆಯನ್ನು ಉಲ್ಲಂಘಿಸಿದೆ ಎಂದು ಹೇಳಿದೆ

ಮರಾಠ ಕೋಟಾ ಅಸಾಂವಿಧಾನಿಕ, ಮಹಾರಾಷ್ಟ್ರದ ಮೀಸಲಾತಿ ಕಾನೂನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌
Linkup
ಹೊಸದಿಲ್ಲಿ: ಮರಾಠಾ ಸಮುದಾಯದ ಜನರಿಗೆ ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮಿಸಲಾತಿ ನೀಡಲು 2018ರಲ್ಲಿ ಸರಕಾರ ಜಾರಿಗೆ ತಂದಿದ್ದ ಕಾಯಿದೆಯನ್ನು ಬುಧವಾರ ರದ್ದುಗೊಳಿಸಿದೆ. ಇದು ಈ ಹಿಂದೆ ಜಾರಿಗೊಳಿಸಲಾಗಿದ್ದ ಗರಿಷ್ಠ ಶೇ.50ರ ನಿಯಮವನ್ನು ಮೀರಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. 2018ರಲ್ಲಿ ಅಂದಿನ ಬಿಜೆಪಿ ಸರಕಾರ ಮರಾಠ ಸಮುದಾಯದಕ್ಕೆ ಶೇ.16ರಷ್ಟು ಮೀಸಲಾತಿ ನೀಡಿತ್ತು. ಇದರ ಸಾಂವಿಧಾನಿಕ ಮಾನ್ಯತೆಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್‌ನ ಪಂಚ ಸದ್ಯಸ ಪೀಠ, ಸರಕಾರದ ನಿರ್ಧಾರ ಸಮಾನತೆಯನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ನ್ಯಾ. ಅಶೋಕ್‌ ಭೂಷಣ್‌, ಎಲ್‌ ನಾಗೇಶ್ವರ್‌ ರಾವ್‌, ಎಸ್‌ ಅಬ್ದುಲ್‌ ನಜೀರ್‌, ಹೇಮಂತ್‌ ಗುಪ್ತಾ ಮತ್ತು ಎಸ್‌ ರವೀಂದ್ರ ಭಟ್‌ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ. “ಸಂಸತ್ತು ಮಾಡಿದ ತಿದ್ದುಪಡಿಯಿಂದಾಗಿ ಯಾವುದೇ ಜಾತಿಯನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಲು ರಾಜ್ಯಗಳಿಗೆ ಅಧಿಕಾರವಿಲ್ಲ,” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. "ರಾಜ್ಯಗಳು ಜಾತಿಗಳನ್ನು ಮಾತ್ರ ಗುರುತಿಸಿ, ಕೇಂದ್ರಕ್ಕೆ ಸೂಚಿಸಬಹುದು ... ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದಿಂದ ಶಿಫಾರಸುಗೊಂಡಲ್ಲಿ ಎಸ್‌ಇಬಿಸಿ ಪಟ್ಟಿಗೆ ರಾಷ್ಟ್ರಪತಿಗಳು ಮಾತ್ರ ಜಾತಿಯನ್ನು ಸೇರಿಸಬಹುದು,” ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಆದಾಗ್ಯೂ, ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಈಗಾಗಲೇ ನಡೆದಿರುವ ಎಲ್ಲಾ ಸೇರ್ಪಡೆಗಳು ಮತ್ತು ಹೊಸ ಕೋಟಾ ಕಾನೂನಿನಡಿಯಲ್ಲಿ ಈಗಾಗಲೇ ನಡೆದಿರುವ ನೇಮಕಾತಿಗಳಿಗೆ ಈ ತೀರ್ಪಿನಿಂದ ತೊಂದರೆಯಾಗುವುದಿಲ್ಲ ಎಂದು ನಾಯಾಲಯ ಹೇಳಿದೆ. 1992 ರ ಮಂಡಲ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ವಿಧಿಸಿರುವ ಮೀಸಲಾತಿ ಮೇಲಿನ ಶೇಕಡಾ 50ರ ನಿರ್ಬಂಧವನ್ನು ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ಸಂವಿಧಾನ ಪೀಠ ಹೇಳಿದೆ. 2018 ರಲ್ಲಿ ಮಹಾರಾಷ್ಟ್ರದ ಬಿಜೆಪಿ ಸರ್ಕಾರವು ಮರಾಠಾ ಸಮುದಾಯಕ್ಕೆ ಶೇಕಡಾ 16 ರಷ್ಟು ಮೀಸಲಾತಿ ನೀಡುವ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ (ಎಸ್‌ಬಿಸಿ) ಕಾಯ್ದೆಯನ್ನು ಅಂಗೀಕರಿಸಿತು. ಇದರ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ, 2019ರಲ್ಲಿ ಮೀಸಲಾತಿಯನ್ನು ಎತ್ತಿಹಿಡಿದಿತ್ತು. ಇದೀಗ ಸುಪ್ರೀಂ ಕೋರ್ಟ್‌ ಬಾಂಬೆ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದೆ.