ಕೇಂದ್ರದಿಂದ ದೀಪಾವಳಿ ಗಿಫ್ಟ್‌; ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕ ಭಾರಿ ಇಳಿಕೆ

ದೀಪಾವಳಿಗೂ ಮುನ್ನ ಗ್ರಾಹಕರಿಗೆ ಕೇಂದ್ರ ಸರಕಾರ ಭರ್ಜರಿ ಗಿಫ್ಟ್‌ ನೀಡಿದ್ದು, ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 5 ರೂ. ಹಾಗೂ 10 ರೂ. ಇಳಿಕೆ ಮಾಡಿದೆ.

ಕೇಂದ್ರದಿಂದ ದೀಪಾವಳಿ ಗಿಫ್ಟ್‌; ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕ ಭಾರಿ ಇಳಿಕೆ
Linkup
ಹೊಸದಿಲ್ಲಿ: ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಕೇಂದ್ರ ಸರಕಾರ ಬುಧವಾರ ತುಸು ನೆಮ್ಮದಿಯ ಸುದ್ದಿ ನೀಡಿದೆ. ದೀಪಾವಳಿಗೂ ಮುನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟ್‌ ನೀಡಿರುವ ಕೇಂದ್ರ ಸರಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 5 ರೂ. ಹಾಗೂ 10 ರೂ. ಇಳಿಕೆ ಮಾಡಿದೆ. ಈ ದರಗಳು ಗುರುವಾರದಿಂದಲೇ ಜಾರಿಗೆ ಬರಲಿವೆ. ಇಳಿಕೆಗೆ ತಕ್ಕಂತೆ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಇಳಿಕೆಯಾಗಲಿವೆ ಎಂದು ಮೂಲಗಳು ಹೇಳಿವೆ. ಪೆಟ್ರೋಲ್‌ಗಿಂತ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ದುಪ್ಪಟ್ಟು ಕಡಿತಗೊಳಿಸಲಾಗಿದೆ. ಇದರಿಂದ ರಾಬಿ ಋತುವಿನಲ್ಲಿ ರೈತರಿಗೆ ಉತ್ತೇಜನ ಸಿಗಲಿದೆ ಎಂದು ಸರಕಾರ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಇದೇ ವೇಳೆ ಗ್ರಾಹಕರಿಗೆ ರಿಲೀಫ್‌ ನೀಡಲು ಎರಡೂ ಇಂಧನಗಳ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅನ್ನು ಕಡಿತಗೊಳಿಸುವಂತೆ ರಾಜ್ಯಗಳನ್ನೂ ಕೇಂದ್ರ ಸರಕಾರ ಒತ್ತಾಯಿಸಿದೆ. ದೇಶದೆಲ್ಲೆಡೆ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ದಾಖಲೆಯ ಮಟ್ಟವನ್ನು ತಲುಪಿರುವ ಹೊತ್ತಲ್ಲೇ ಕೇಂದ್ರ ಸರಕಾರ ಈ ದರ ಕಡಿತ ಘೋಷಿಸಿದೆ. ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಲೀಟರ್‌ಗೆ 110.04 ರೂ. ಇತ್ತು. 98.42 ರೂ.ಗೆ ತಲುಪಿತ್ತು. ಸದ್ಯ ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ಗೆ 113.93 ರೂ. ದರವಿದೆ. ಡೀಸೆಲ್‌ ದರ ಲೀಟರ್‌ಗೆ 104.50 ರೂ. ಇದೆ. ಕಳೆದ ವರ್ಷ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾಗುತ್ತಿದ್ದ ಸಂದರ್ಭದಲ್ಲಿ ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರಕಾರ 19.98 ರೂ.ನಿಂದ 32.9 ರೂ.ಗೆ ಏರಿಕೆ ಮಾಡಿತ್ತು. ಏತನ್ಮಧ್ಯೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿರುವುದರಿಂದ ಬಳಕೆ ಹೆಚ್ಚಲಿದೆ ಮತ್ತು ಹಣದುಬ್ಬರವನ್ನು ಕಡಿಮೆ ಮಾಡಲು ಸಹಾಯಕವಾಗಲಿದೆ ಎಂದು ಸರ್ಕಾರ ಹೇಳಿದೆ. 'ಇಂದಿನ ನಿರ್ಧಾರವು ಒಟ್ಟಾರೆ ಆರ್ಥಿಕ ಚಕ್ರವನ್ನು ಮತ್ತಷ್ಟು ಉತ್ತೇಜಿಸುವ ನಿರೀಕ್ಷೆಯಿದೆ" ಎಂದು ಸರಕಾರ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ಒಂದೇ ಸಮನೆ ಏರಿಕೆ ಕಾಣುತ್ತಿವೆ. ಇದರಿಂದ ದೇಶದಲ್ಲೂ ಪೆಟ್ರೋಲ್‌, ಡೀಸೆಲ್‌ ದರಗಳು ಏರಿಕೆಯಾಗಿ ಗ್ರಾಹಕರು ತೀವ್ರ ಒತ್ತಡವನ್ನು ಎದುರಿಸುತ್ತಿದ್ದರು.