ಮಹಿಳಾ ಸಹಕಾರಿ ಬ್ಯಾಂಕನ್ನು 'ವಿಕಾಸ ಬ್ಯಾಂಕ್‌'ನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಗೆ ಆರ್‌ಬಿಐ ಅನುಮತಿ

ಬೀದರ್‌ನ ಅಶಕ್ತ ಬೀದರ ಮಹಿಳಾ ಸಹಕಾರಿ ಬ್ಯಾಂಕ್‌ನ್ನು ವಿಕಾಸ ಬ್ಯಾಂಕಿನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಗೆ ಭಾರತೀಯ ರಿಜರ್ವ್‌ ಬ್ಯಾಂಕ್‌ ಅನುಮತಿ ದೊರೆತಿದೆ ಎಂದು ವಿಕಾಸ ಬ್ಯಾಂಕ್‌ ಅಧ್ಯಕ್ಷ ವಿಶ್ವನಾಥ್‌ ಚ.ಹಿರೇಮಠ ತಿಳಿಸಿದರು.

ಮಹಿಳಾ ಸಹಕಾರಿ ಬ್ಯಾಂಕನ್ನು 'ವಿಕಾಸ ಬ್ಯಾಂಕ್‌'ನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಗೆ ಆರ್‌ಬಿಐ ಅನುಮತಿ
Linkup
ವಿಜಯನಗರ (ಹೊಸಪೇಟೆ): ಸಹಕಾರಿ ಕ್ಷೇತ್ರದ ಬಲವರ್ಧನೆಗಾಗಿ ಬೀದರ್‌ನ ಅಶಕ್ತ ಬೀದರ ಮಹಿಳಾ ಸಹಕಾರಿ ಬ್ಯಾಂಕ್‌ನ್ನು ವಿಕಾಸ ಬ್ಯಾಂಕಿನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಗೆ ಅನುಮತಿ ದೊರೆತಿದೆ ಎಂದು ಅಧ್ಯಕ್ಷ ವಿಶ್ವನಾಥ್‌ ಚ.ಹಿರೇಮಠ ತಿಳಿಸಿದರು. ನಗರದ ವಿಕಾಸ್‌ ಬ್ಯಾಂಕ್‌ನಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವಿಕಾಸ ಬ್ಯಾಂಕ್‌ ವ್ಯಾಪ್ತಿಗೆ ಅಶಕ್ತ ಮಹಿಳಾ ಸಹಕಾರಿ ಬ್ಯಾಂಕ್‌ ವಿಲೀಗೊಳಿಸಲು ಆರ್‌ಬಿಐಗೆ ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಮತಿ ನೀಡಿದ್ದು, ಮುಂದಿನ ಮೂರು ತಿಂಗಳಲ್ಲಿ ಬೀದರ್‌ ನಗರದಲ್ಲಿ ವಿಕಾಸ ಬ್ಯಾಂಕ್‌ನ ಶಾಖೆಯಾಗಿ ಕಾರ್ಯನಿರ್ವಹಿಸಲಿದೆ. ಅ.23ರಂದು ಬ್ಯಾಂಕ್‌ನ 2020-21ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ನಡೆದಿದ್ದು, ನಾನಾ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಬೆಳ್ಳಿ ಸಂಭ್ರಮಾಚರಣೆ ವರ್ಷದಲ್ಲಿ ಬ್ಯಾಂಕ್‌ನ ಸದಸ್ಯರಿಗೆ ಈ ವರ್ಷ ಶೇ.25 ಲಾಭಾಂಶ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು. ವೃದ್ಧಾಶ್ರಮ ಸ್ಥಾಪನೆ: ಬ್ಯಾಂಕ್‌ನ ಬಹುನಿರೀಕ್ಷಿತ ಯೋಜನೆ ವೃದ್ಧಾಶ್ರಮ ಮುಂದಿನ 10 ತಿಂಗಳೊಳಗೆ ಆರಂಭಿಸಲಾಗುವುದು. ಈಗಾಗಲೇ ದಾನಿಯೊಬ್ಬರು 5 ಎಕರೆ ಜಮೀನು ನೀಡಲು ಮುಂದೆ ಬಂದಿದ್ದು, ತಯಾರಿಗಳು ನಡೆದಿವೆ ಎಂದರು. ಸಹಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕನಿಷ್ಠ 100 ಸಹಕಾರಿ ಸಂಘಗಳಿಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಸಂಕಲ್ಪ ಮಾಡಲಾಗಿದೆ. ಬ್ಯಾಂಕ್‌ನ ಪ್ರಧಾನ ಕಚೇರಿಯ ನೂತನ ಕಟ್ಟಡದಲ್ಲಿ ಗ್ರಾಹಕರಿಗೆ ದಿನದ 24ಗಂಟೆ ಬಳಸಲು ಇ-ಲಾಕರ್‌ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ. ಇದು ರಾಜ್ಯದಲ್ಲಿ ಇ-ಲಾಕರ್‌ ಅಳವಡಿಸಿಕೊಂಡ ಮೊದಲ ಬ್ಯಾಂಕ್‌ ಆಗಲಿದೆ. ಮಹಾರಾಷ್ಟ್ರ ಮತ್ತು ಚೆನ್ನೈಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಠೇವಣಿ ಸ್ವೀಕರಿಸುವ ಕಿಯೋಸ್ಕ್‌ ಯಂತ್ರ ಅಳವಡಿಕೆ ಮಾಡಲಾಗುವುದು. ಬ್ಯಾಂಕ್‌ ಸ್ಮಾಲ್‌ ಫೈನಾನ್ಸ್‌ ಆಗಿ ಪರಿವರ್ತನೆಗೊಳ್ಳಲು ಅಗತ್ಯವಿರುವ ಮಾನದಂಡಗಳನ್ನು ಬ್ಯಾಂಕ್‌ ಹೊಂದಿದ್ದು, ಮುಂಬರುವ ದಿನಗಳಲ್ಲಿ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಆಗಿ ಪರಿವರ್ತನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಕಾರ್ಯವ್ಯಾಪ್ತಿ ವಿಸ್ತರಣೆ: ರಾಜ್ಯದ 16 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್‌ನ ಕಾರ್ಯವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸಲು ಹೆಚ್ಚಿನ ಶಾಖೆಗಳನ್ನು ಸ್ಥಾಪಿಸುವ ಪ್ರಸ್ತಾವಕ್ಕೆ ಒಪ್ಪಿಗೆ ದೊರೆತಿದೆ. ಬೆಳ್ಳಿ ಹಬ್ಬದ ಸಮಾರಂಭದ ವೇಳೆಗೆ ಹೊಸಪೇಟೆ ಪ್ರಧಾನ ಕಚೇರಿ ಹಾಗೂ ತೋರಣಗಲ್ಲು ಶಾಖೆಯ ಕಟ್ಟಡಗಳ ನಿರ್ಮಾಣ ಗುರಿ ಹೊಂದಲಾಗಿದೆ. 265 ಸಹಕಾರಿ ಬ್ಯಾಂಕ್‌ಗಳಲ್ಲಿ 2 ಬ್ಯಾಂಕ್‌ ಮಾತ್ರ ಐಎಫ್‌ಎಸ್‌ಸಿ ಕೋಡ್‌ ಹೊಂದಿವೆ. ಅರ್ಜಿ ಸಲ್ಲಿಸಿದ್ದು, 3ನೇ ಬ್ಯಾಂಕ್‌ ಆಗಲಿದೆ ಎಂದರು. ಬ್ಯಾಂಕ್‌ ನಿರ್ದೇಶಕರಾದ ಛಾಯಾ ದಿವಾಕರ, ಕೆ.ಉಷಾ, ವಿ.ಪದ್ಮಾವತಿ, ರಮೇಶ್‌ ಪುರೋಹಿತ, ಜಿ.ದೊಡ್ಡಬೋರಯ್ಯ, ಎಂ.ವೆಂಕಪ್ಪ, ಸಿಇಒ ಪ್ರಸನ್ನ ಹಿರೇಮಠ, ವ್ಯವಸ್ಥಾಪಕ ಗುರುಸಿದ್ದಯ್ಯ ಹಿರೇಮಠ, ಮಾಜಿ ನಿರ್ದೇಶಕ ಅನಂತ್‌ ಜೋಶಿ ಇದ್ದರು.