ಉತ್ತರಾಖಂಡದಲ್ಲಿ ಮಳೆ ಆರ್ಭಟ, ಭಾರಿ ಪ್ರವಾಹ: ಕನಿಷ್ಠ 24 ಮಂದಿ ಸಾವು

ಉತ್ತರಾಖಂಡದಲ್ಲಿ ಭಾರಿ ಮಳೆ ಆರ್ಭಟ ಮುಂದುವರಿದಿದೆ. ಇದರಿಂದ ಎಲ್ಲೆಡೆ ನದಿಗಳು, ಜಲಾಶಯಗಳು ತುಂಬಿದ್ದು, ರಾಜ್ಯಾದ್ಯಂತ ವಿಪರೀತ ಹಾನಿಯಾಗಿದೆ. ಸಾವಿನ ಸಂಖ್ಯೆ ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ.

ಉತ್ತರಾಖಂಡದಲ್ಲಿ ಮಳೆ ಆರ್ಭಟ, ಭಾರಿ ಪ್ರವಾಹ: ಕನಿಷ್ಠ 24 ಮಂದಿ ಸಾವು
Linkup
ಡೆಹರಾಡೂನ್: ಮಳೆಯ ಆರ್ಭಟಕ್ಕೆ ಅಕ್ಷರಶಃ ತತ್ತರಿಸಿದೆ. ಮುಗಿಲು ತೂತಾದಂತೆ ಸುರಿಯುತ್ತಿರುವ ಮಳೆಗೆ ರಾಜ್ಯದಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ. ಕಳೆದ 48 ಗಂಟೆಗಳಲ್ಲಿ ಭಾರಿ ಪ್ರಮಾಣದಲ್ಲಿ ಸುರಿದಿದ್ದು, ಬೆಟ್ಟ ಗುಡ್ಡಗಳಿಂದ ಆವೃತವಾದ ರಾಜ್ಯದಲ್ಲಿ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ಮತ್ತಷ್ಟು ಭೀತಿ ಉಂಟುಮಾಡಿದೆ. ಮಂಗಳವಾರ ಜಿಲ್ಲೆಯಲ್ಲಿ ರಾಮಗಡದ ಗ್ರಾಮವೊಂದರಲ್ಲಿ ಭಾರಿ ಮಳೆಯ ನಡುವೆ ಮೇಘಸ್ಫೋಟ ಸಂಭವಿಸಿದ್ದು, ಅನೇಕರು ಗಾಯಗೊಂಡಿದ್ದಾರೆ. ಪೊಲೀಸರು ಹಾಗೂ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿದೆ. ಗಾಯಾಳು ಜನರನ್ನು ರಕ್ಷಿಸಲಾಗಿದೆ. ಭಾರಿ ಮಳೆ ಹಾಗೂ ಪ್ರವಾಹದಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಅವರು ಶಿಕ್ಷಣ ಸಚಿವ ಧಾನ್ ಸಿಂಗ್ ರಾವತ್ ಅವರೊಂದಿಗೆ ವೈಮಾನಿಕ ಸಮೀಕ್ಷೆ ನಡೆಸಿದರು. 'ರಾಜ್ಯದಲ್ಲಿನ ಪ್ರಸ್ತುತದ ಪರಿಸ್ಥಿತಿ ಬಗ್ಗೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ಮಾಹಿತಿ ನೀಡಿದ್ದೇನೆ. ಅನೇಕ ಸ್ಥಳಗಳಲ್ಲಿ ಮನೆಗಳು ಹಾಗೂ ಸೇತುವೆಗಳು ಸೇರಿದಂತೆ ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಮೂರು ಹೆಲಿಕಾಪ್ಟರ್‌ಗಳನ್ನು ರವಾನಿಸಲಾಗಿದೆ' ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಉತ್ತರಾಖಂಡವು ಅನೇಕ ಧಾರ್ಮಿಕ ಯಾತ್ರಾ ಸ್ಥಳಗಳನ್ನು ಹೊಂದಿರುವುದರಿಂದ ಸ್ಥಳೀಯರಲ್ಲದೆ, ಇಲ್ಲಿ ವಿವಿಧ ರಾಜ್ಯಗಳಿಂದ ತೆರಳಿದ ಲೆಕ್ಕವಿಲ್ಲದಷ್ಟು ಪ್ರವಾಸಿಗರಿದ್ದಾರೆ. ಕೆಲವರು ಧಾರ್ಮಿಕ ಕ್ಷೇತ್ರಗಳ ಯಾತ್ರೆಗೆ ತೆರಳಿದವರು, ಬೆಟ್ಟಗುಡ್ಡ, ಅರಣ್ಯ ಪ್ರದೇಶಗಳಲ್ಲಿ ಸಿಲುಕಿ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ರಕ್ಷಣಾ ತಂಡಗಳು ಹರಸಾಹಸ ಪಡುತ್ತಿವೆ. ಕಲ್ಚಂತ್‌ನ ರುದ್ರನಾಥ ಚಾರಣ ಮಾರ್ಗದಲ್ಲಿ ಸಿಲುಕಿಕೊಂಡಿದ್ದ ಕೋಲ್ಕತಾದ 10 ಮಂದಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಗೋಪೇಶ್ವರಕ್ಕೆ ಕರೆತಂದಿದ್ದಾರೆ. ಗುಜರಾತ್‌ನ ನೂರಾರು ಭಕ್ತರು ಕೂಡ ರಾಜ್ಯದಲ್ಲಿ ಸಿಲುಕಿದ್ದಾರೆ ಎನ್ನಲಾಗಿದ್ದು, ಅವರ ರಕ್ಷಣೆಗೆ ನೆರವು ನೀಡುವಂತೆ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರು ಉತ್ತರಾಖಂಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಗೋಲಾ ನದಿಯಲ್ಲಿ ನೀರಿನ ಮಟ್ಟ ತೀವ್ರ ಏರಿಕೆಯಾದ ಹಿನ್ನೆಲೆಯಲ್ಲಿ ಕತಗೋಡಮ್ ಜಿಲ್ಲೆಯಲ್ಲಿ ಗೋಲಾ ಸೇತುವೆ ಮುರಿದುಬಿದ್ದಿದೆ. ಹಲದ್ವಾನಿ ಎಂಬಲ್ಲಿ ನದಿ ಸಮೀಪದ ಕತಗೋಡಮ್-ದಿಲ್ಲಿ ಸಂಪರ್ಕಿಸುವ ರೈಲ್ವೆ ಹಳಿಯ ಭಾಗ ಹಾನಿಗೀಡಾಗಿದೆ. ನೈನಿತಾಲ್ ಜಿಲ್ಲೆಯ ಮುಕ್ತೇಶ್ವರದಲ್ಲಿ ಐವರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿದೆ. ಪದವಿ ಕಾಲೇಜೊಂದರ ಗೋಡೆ ಕುಸಿದ ಪರಿಣಾಮ ಕಾರ್ಮಿಕರು ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಅವಶೇಷಗಳ ಅಡಿಯಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಒಬ್ಬ ಕಾರ್ಮಿಕ ಬದುಕುಳಿದಿದ್ದಾನೆ.