'ಇನ್ಮುಂದೆ ಹಣ ಮತ್ತು ಕೊಡುಗೆ ಸ್ವೀಕರಿಸುವುದಿಲ್ಲ': ಉಪೇಂದ್ರ ಹೊಸ ನಿರ್ಧಾರ!

''ಇನ್ಮುಂದೆ ಉಪ್ಪಿ ಫೌಂಡೇಶನ್‌ಗೆ ಹಣ ಮತ್ತು ಯಾವುದೇ ಕೊಡುಗೆಯನ್ನು ಸ್ವೀಕರಿಸುವುದಿಲ್ಲ'' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

'ಇನ್ಮುಂದೆ ಹಣ ಮತ್ತು ಕೊಡುಗೆ ಸ್ವೀಕರಿಸುವುದಿಲ್ಲ': ಉಪೇಂದ್ರ ಹೊಸ ನಿರ್ಧಾರ!
Linkup
ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಚಿತ್ರೋದ್ಯಮದ ಕುಟುಂಬಗಳಿಗೆ ರಿಯಲ್ ಸ್ಟಾರ್ ಸಹಾಯ ಮಾಡಿದ್ದರು. ಕನ್ನಡ ಚಿತ್ರರಂಗದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ಉಪೇಂದ್ರ ನೀಡಿದ್ದರು. ಉಪೇಂದ್ರ ಜೊತೆಗೆ ನಟ ಶೋಭರಾಜ್, ಸಾಧು ಕೋಕಿಲ, ಪವನ್ ಒಡೆಯರ್, ಬಿ.ಸರೋಜಾ ದೇವಿ, ನಟಿ ಮಾನ್ಯ ಸೇರಿದಂತೆ ಹಲವರು ಕೈಜೋಡಿಸಿದ್ದರು. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಚಿತ್ರರಂಗದ ನಟ-ನಟಿಯರು ಮಾತ್ರ ಅಲ್ಲ.. ಸಾರ್ವಜನಿಕರೂ ತಮ್ಮ ಕೈಲಾದ ಹಣವನ್ನು ಉಪ್ಪಿ ಫೌಂಡೇಶನ್‌ಗೆ ದೇಣಿಗೆ ನೀಡಿದ್ದರು. ಎಷ್ಟೋ ಜನ ಅಕ್ಕಿ, ಬೇಳೆ ಸೇರಿದಂತೆ ದಿನಸಿಯನ್ನೂ ಉಪ್ಪಿ ಫೌಂಡೇಶನ್‌ಗೆ ಕೊಡುಗೆಯಾಗಿ ನೀಡಿದ್ದರು. ದೇಣಿಗೆ ರೂಪದಲ್ಲಿ ಸಂಗ್ರಹವಾಗಿದ್ದ ಹಣದಲ್ಲಿ ಉಪೇಂದ್ರ ದಿನಸಿ ಕಿಟ್‌ಗಳನ್ನು ಕೊಂಡುಕೊಂಡರು. ಜೊತೆಗೆ ಅದೇ ಹಣದಲ್ಲಿ ರೈತರಿಂದ ನೇರವಾಗಿ ಬೆಳೆಗಳನ್ನು ಖರೀದಿಸಿದ್ದರು. ಲಾಕ್‌ಡೌನ್‌ನಿಂದಾಗಿ ಬೆಳೆದ ಬೆಳೆಯನ್ನು ವ್ಯಾಪಾರ ಮಾಡಲಾಗದೆ ಒದ್ದಾಡುತ್ತಿದ್ದ ರೈತರಿಂದ ನೇರವಾಗಿ ಬೆಳೆ ಖರೀದಿಸಿ, ಅದನ್ನು ದಿನಸಿ ಕಿಟ್‌ಗಳ ಜೊತೆಗೆ ಜನರಿಗೆ ಉಪೇಂದ್ರ ನೀಡಿದ್ದರು. ಉಪೇಂದ್ರ ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ''ಇನ್ಮುಂದೆ ಉಪ್ಪಿ ಫೌಂಡೇಶನ್‌ಗೆ ಹಣ ಮತ್ತು ಯಾವುದೇ ಕೊಡುಗೆಯನ್ನು ಸ್ವೀಕರಿಸುವುದಿಲ್ಲ'' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ. ಉಪೇಂದ್ರ ಟ್ವೀಟ್ ''ಇಲ್ಲಿಯವರೆಗೂ ನಾವು ಯಾರನ್ನೂ ಏನೂ ಕೇಳದಿದ್ದರೂ ತುಂಬಾ ಹೃದಯವಂತರು ನಮ್ಮ ಮೂಲಕ ವಿತರಣೆಯಾಗಲೆಂದು ದಿನಸಿ, ಹಣ್ಣು-ತರಕಾರಿಗಳು ಮುಂತಾದವುಗಳನ್ನು ಕೊಟ್ಟಿದ್ದಾರೆ. ಹಾಗೂ ನಮ್ಮ ಚಾರಿಟಬಲ್ ಟ್ರಸ್ಟ್‌ಗೆ ಧನ ಸಹಾಯವನ್ನೂ ಮಾಡಿದ್ದಾರೆ. ಅವುಗಳೆಲ್ಲವನ್ನು ಸೂಕ್ತವಾಗಿ ಬೇರೆ ಬೇರೆ ಕಡೆ ಸಂಕಷ್ಟದಲ್ಲಿರುವವರಿಗೆ ವಿತರಿಸಲಾಗಿದೆ. ಇನ್ನೂ ವಿತರಿಸಲಾಗುತ್ತಿದೆ. ಸಹೃದಯತೆ ಮೆರೆದಂತಹ ತಮ್ಮೆಲ್ಲರಿಗೂ ಅನಂತಾನಂತ ಧನ್ಯವಾದಗಳು'' ''ಇನ್ನು ಮುಂದೆ ತಾವುಗಳು ಯಾರಿಗಾದರೂ ಸಹಾಯ ಮಾಡಬೇಕೆಂದರೆ ನಿಮ್ಮ ಸುತ್ತಮುತ್ತ ಸಂಕಷ್ಟದಲ್ಲಿ ಇರುವವರನ್ನು ಗುರುತಿಸಿ ನೀವೇ ನೇರವಾಗಿ ಸಹಾಯ ಮಾಡಿ. ನಾವು ಉಪ್ಪಿ ಫೌಂಡೇಶನ್‌ಗೆ ಹಣ ಮತ್ತು ಯಾವುದೇ ಕೊಡುಗೆಗಳನ್ನು ಇನ್ನು ಮುಂದೆ ಸ್ವೀಕರಿಸುವುದನ್ನು ನಿಲ್ಲಿಸುತ್ತಿದ್ದೇವೆ'' ''ಇಲ್ಲಿಯವರೆಗೂ ಉಪ್ಪಿ ಫೌಂಡೇಶನ್‌ಗೆ ಉಪೇಂದ್ರ ಅವರ ಹಣ, ನಿಮ್ಮೆಲ್ಲರಿಂದ ಬಂದಂತಹ ಹಣ, ಅದರ ಖರ್ಚು ಮತ್ತು ಎಲ್ಲಾ ಅಕೌಂಟ್ಸ್ ಸ್ಟೇಟ್ಮೆಂಟ್ಸ್ ಮಾಹಿತಿಗಳನ್ನು ಸದ್ಯದಲ್ಲೇ ಬಹಿರಂಗ ಪಡಿಸುತ್ತೇವೆ'' ಎಂದು ಉಪ್ಪಿ ಫೌಂಡೇಶನ್ ಬಿಡುಗಡೆ ಮಾಡಿರುವ ಹೇಳಿಕೆಯನ್ನು ಉಪೇಂದ್ರ ಟ್ವೀಟ್ ಮಾಡಿದ್ದಾರೆ.