![](https://vijaykarnataka.com/photo/82373762/photo-82373762.jpg)
ಹುಬ್ಬಳ್ಳಿ: ದೇಶದಾದ್ಯಂತ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಲಕ್ಷಾಂತರ ಜನ ಜೀವನ ಕಳೆದುಕೊಂಡಿದ್ದಾರೆ. ಸೋಂಕು ಪ್ರಮಾಣ ಇನ್ನೂ ಹೆಚ್ಚಾಗುತ್ತಿದ್ದು, ಜನರು ಕಂಗೆಟ್ಟು ನಿತ್ಯದ ಜೀವನ ನಡೆಸುವುದು ದುಸ್ತರವಾಗಿದೆ. ಹೀಗಾಗಿ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ 'ಚೇಂಬರ್ ಆಫ್ ಕಾಮರ್ಸ್' ಸರಕಾರಕ್ಕೆ ಪತ್ರ ಬರೆದಿದೆ.
ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ, ಉದ್ದಿಮೆದಾರರಿಗೆ ಅಲ್ಲದೇ ನಿತ್ಯ ಕಷ್ಟದಿಂದ ಜೀವನ ಸಾಗಿಸುತ್ತಿರುವ ಆಟೋ, ಟ್ಯಾಕ್ಸಿ ಚಾಲಕರು, ತರಕಾರಿ ಮಾರಾಟಗಾರರು ಹಾಗೂ ಬೀದಿ ಬದಿ ವ್ಯಾಪಾರ ನಡೆಸುವವರ ಜೀವನ ಕೂಡ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಅತೀ ಸಣ್ಣ ಕಟುಂಬದಿಂದ ಹಿಡಿದು ಮಧ್ಯಮ ಕುಟುಂಬದವರು ಕೂಡ ಒಂದು ಮನೆ ಮತ್ತು ನಿವೇಶನ ಹೊಂದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಎಲ್ಲ ಕರದಾತರು 2020-21ನೇ ಸಾಲಿನ ಹೆಚ್ಚಳವನ್ನು ಈ ಸಂದರ್ಭದಲ್ಲಿ ಭರಿಸುವುದು ದುಸ್ತರವಾಗಿದೆ. ಇದಲ್ಲದೇ ಸಿನೆಮಾ ಟಾಕೀಸ್ಗಳು, ಉದ್ಯಮಗಳು, ಜವಳಿ, ಆಟೋಮೊಬೈಲ್ ಉದ್ಯಮಿಗಳು ವ್ಯಾಪಾರ ಇಲ್ಲದೇ ನಷ್ಟಕ್ಕೊಳಗಾಗಿದ್ದಾರೆ. ಆದ್ದರಿಂದ ಈ ಕೆಳಗಿನಂತೆ ಸರಕಾರ ಅನುಕೂಲ ಮಾಡಿಕೊಡಬೇಕು ಎಂದು ಸಂಸ್ಥೆ ಒತ್ತಾಯಿಸಿದೆ.
ಈ ಮೊದಲು 2020-21ನೇ ಸಾಲಿಗೆ ಇದ್ದ ಆಸ್ತಿ ತೆರಿಗೆಯನ್ನೇ ಮುಂದುವರಿಸಬೇಕು, ಕೊನೊನಾ ಮಹಾಮಾರಿ ಇರುವುದರಿಂದ ಆಸ್ತಿ ಕರದಲ್ಲಿ ಶೇ.25ರಷ್ಟು ಕಡಿಮೆ ಮಾಡಬೇಕು. ಶೇ.5ರಷ್ಟು ರಿಯಾಯಿತಿಯೊಂದಿಗೆ ಆಸ್ತಿ ತೆರಿಗೆ ಪಾವತಿಸುವ ಅವಧಿಯನ್ನು 2021 ಜುಲೈ 31ರ ವರೆಗೆ ಮುಂದೂಡಬೇಕು, ಹು-ಧಾ ಮಹಾನಗರ ಪಾಲಿಕೆಗಳ ಎಲ್ಲ ಬಡಾವಣೆಗಳಿಗೆ ಏಕರೂಪದ ತೆರಿಗೆ ದರ ನಿಗದಿಪಡಿಸಬೇಕು ಎಂಬ ಒಟ್ಟು 8 ಬೇಡಿಕೆ ಒಳಗೊಂಡ ಪತ್ರವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಭೈರತಿ ಬಸವರಾಜ, ಜಗದೀಶ ಶೆಟ್ಟರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಶ್ರೀನಿವಾಸ ಮಾನೆ ಇವರಿಗೆ, ಆಸ್ತಿ ತೆರಿಗೆ ಹಿಂಪಡೆದುಕೊಳ್ಳುವಂತೆ ಒತ್ತಾಯಿಸಿ ಚೇಂಬರ್ ಆಫ್ ಕಾಮರ್ಸ್ ಪತ್ರ ಬರೆದಿದೆ.