ಕೆಂಪಡಕೆ ಬಳಿಕ ಚಾಲಿ ಅಡಕೆ ದರ ಭಾರಿ ಏರಿಕೆ, 50 ಸಾವಿರ ರೂ. ಗಡಿ ದಾಟುವ ನಿರೀಕ್ಷೆ

ಕೆಂಪಡಕೆ ದರ ಮಾರುಕಟ್ಟೆಯಲ್ಲಿ ಸ್ಥಿರವಾಗಿದ್ದರೆ, ಈಗೊಂದು ವಾರದಿಂದ ಚಾಲಿ ಅಡಕೆ ದರ ನಿರಂತರ ಏರಿಕೆಯಾಗುತ್ತಿದೆ. ಶುಕ್ರವಾರ ಶಿರಸಿಯ ಅಡಕೆ ಮಾರುಕಟ್ಟೆಯಲ್ಲಿ ಚಾಲಿ ಅಡಕೆಯ ದರ ಕ್ವಿಂಟಾಲ್‌ಗೆ 48,000 ರೂ. ದಾಟಿದ್ದು, ಗರಿಷ್ಠ ದರ ದಾಖಲಾದಂತೆ ಆಗಿದೆ.

ಕೆಂಪಡಕೆ ಬಳಿಕ ಚಾಲಿ ಅಡಕೆ ದರ ಭಾರಿ ಏರಿಕೆ, 50 ಸಾವಿರ ರೂ. ಗಡಿ ದಾಟುವ ನಿರೀಕ್ಷೆ
Linkup
(ಉತ್ತರ ಕನ್ನಡ): ಕಳೆದ 15 ದಿನಗಳ ಹಿಂದೆ ನಿರಂತರ ತೇಜಿ ಆಗುತ್ತ ಕೆಂಪಡಕೆ ಕ್ವಿಂಟಾಲ್‌ಗೆ 50 ಸಾವಿರ ರೂ. ದರ ಸ್ಥಿರವಾಗಿದ್ದರೆ, ಈಗೊಂದು ವಾರದಿಂದ ದರ ಕೂಡ ನಿರಂತರ ಏರಿಕೆಯ ಮಾರ್ಗದಲ್ಲಿದೆ. ಶುಕ್ರವಾರ ಇಲ್ಲಿಯ ಅಡಕೆ ಮಾರುಕಟ್ಟೆಯಲ್ಲಿ ಚಾಲಿ ಅಡಕೆಯ ದರ ಕ್ವಿಂಟಾಲ್‌ಗೆ 48,000 ರೂ. ದಾಟಿದ್ದು, ಗರಿಷ್ಠ ದರ ದಾಖಲಾದಂತೆ ಆಗಿದೆ. ಕಳೆದ ಆರೆಂಟು ತಿಂಗಳ ಅವಧಿಯಲ್ಲಿ ಚಾಲಿ ಅಡಕೆ 40 ಸಾವಿರ ರೂ. ಆಸುಪಾಸು ದರಕ್ಕೆ ಟೆಂಡರ್‌ನಲ್ಲಿ ಮಾರಾಟವಾಗುತ್ತಿತ್ತು. ಕೆಂಪಡಕೆ ಹಂಗಾಮು ಮುಗಿಯುತ್ತಿದ್ದಂತೆ ಹಂತ ಹಂತವಾಗಿ ಒಣಗಿದ ಚಾಲಿ ಅಡಿಕೆಯನ್ನು ಸುಲಿದು ಮಾರುಕಟ್ಟೆಗೆ ತರಲಾಗುತ್ತಿದೆ. ಅದಕ್ಕೆ ಹಂಗಾಮು ಎನ್ನುವುದಿಲ್ಲ. ಈಗ ಹಬ್ಬಗಳ ಸರಣಿ ಪ್ರಾರಂಭವಾಗುತ್ತಿದ್ದಂತೆ ಚಾಲಿ ಅಡಕೆ ಮಾರುಕಟ್ಟೆಗೆ ತರುವುದು ರೂಢಿಯಲ್ಲಿದೆ. ಈ ಮಧ್ಯೆ ಚಾಲಿ ಅಡಕೆ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಕಾರಣ ಬೆಳೆಗಾರರಲ್ಲಿ ಕುತೂಹಲ ಮೂಡಿಸಿದೆ. ಕಳೆದ ವಾರ 41-42 ಸಾವಿರ ರೂ. ಸರಾಸರಿಯಲ್ಲಿ ಟೆಂಡರ್‌ ಮಾರುಕಟ್ಟೆಯಲ್ಲಿ ವಿಕ್ರಿ ಆಗುತ್ತಿದ್ದ ಚಾಲಿ ಅಥವಾ ಬಿಳಿ ಅಡಕೆಯ ದರ ಈಗ ವಾರಾಂತ್ಯಕ್ಕೆ ಕನಿಷ್ಠ-ಗರಿಷ್ಠ 46-48 ಸಾವಿರ ರೂ.ಗಳಿಗೆ ತಲುಪಿದೆ. ಮುಂದಿನ ವಾರ ಇನ್ನಷ್ಟು ಏರಿಕೆಯಾಗಿ ಕೆಂಪಡಕೆ ಮಾದರಿಯಲ್ಲಿ 50 ಸಾವಿರ ರೂ. ದಾಟಬಹುದೇ ಎಂಬ ನಿರೀಕ್ಷೆಯಲ್ಲಿ ಅಡಕೆ ಬೆಳೆಗಾರರ ಇದ್ದಾರೆ. ಸಾಕಷ್ಟು ವ್ಯತ್ಯಾಸ ಕೆಂಪಡಕೆ ಮತ್ತು ಚಾಲಿ ಅಡಕೆಗೆ ಪ್ರಸ್ತುತ ಲಭ್ಯವಾಗುತ್ತಿರುವ ದರ ನೋಡಿದರೆ ಕಳೆದ ವರ್ಷಕ್ಕೆ ಮತ್ತು ಈ ವರ್ಷಕ್ಕೆ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳ ಮಧ್ಯಭಾಗದಲ್ಲಿ ಕೆಂಪಡಿಕೆ ದರ ಕನಿಷ್ಠ 33 ರಿಂದ ಗರಿಷ್ಠ 39 ಸಾವಿರ ರೂ.ಗಳಷ್ಟಿತ್ತು. ಆದರೆ ಈ ವರ್ಷ ಅನಿರೀಕ್ಷಿತ ದರ ಏರಿಕೆ ಪರಿಣಾಮ ಕೇವಲ 15 ದಿನಗಳ ಅವಧಿಯಲ್ಲಿ 42ರಿಂದ 52 ಸಾವಿರಕ್ಕೆ ಕೆಂಪಡಕೆ ದರ ಹೆಚ್ಚಳ ಆಗಿದೆ. ಆದರೆ ಕೆಂಪಡಕೆ ಹಂಗಾಮು ಮುಗಿದು ನಾಲ್ಕೈದು ತಿಂಗಳುಗಳೇ ಕಳೆದಿವೆ. ಈ ಅವಧಿಯಲ್ಲಿ ಸಾವಿರಾರು ಅಡಕೆ ಬೆಳೆಗಾರರು ಕೆಂಪಡಿಕೆ ಮಾರಾಟ ಮಾಡಿ ಆಗಿದೆ. ಈಗ ಸೀಮಿತ ಪ್ರಮಾಣದಲ್ಲಿ ಮಾತ್ರ ರೈತರಲ್ಲಿ ಕೆಂಪಡಕೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಇನ್ನೊಂದೆಡೆ, ಚಾಲಿ ಅಡಕೆ ದರ ಕೂಡ ಕಳೆದ ವರ್ಷಕ್ಕಿಂತ ಈ ಬಾರಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಸುಮಾರು 10 ಸಾವಿರ ರೂ.ಗಳಷ್ಟು ಏರಿಕೆ ಆದಂತಾಗಿದೆ. ಅಲ್ಲದೆ ಕೆಂಪಡಕೆಗೆ ಹೋಲಿಸಿದಲ್ಲಿ ಚಾಲಿ ಅಡಕೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಾರರಲ್ಲಿ ದಾಸ್ತಾನು ಇದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಏರಿಕೆ ಆಗಿರುವ ದರವು ಸಾಕಷ್ಟು ರೈತರಿಗೆ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ದರ ಹೆಚ್ಚಳ ಸಂದರ್ಭದಲ್ಲಿ ಮಾರಾಟ ಮಾಡುವುದೋ ಅಥವಾ ಇನ್ನಷ್ಟು ಏರಿಕೆ ಆಗುವುದಕ್ಕೆ ಕಾಯಬೇಕೊ ಎಂಬ ಗೊಂದಲ ಅನೇಕ ಬೆಳೆಗಾರರಲ್ಲಿ ಇದೆ. ಆದರೆ ಹೀಗೆ ಇನ್ನಷ್ಟು ದರ ಹೆಚ್ಚಳ ಆಗುತ್ತದೆ ಎಂಬ ಖಚಿತ ಮಾಹಿತಿ ನೀಡುವುದು ವ್ಯಾಪಾರಸ್ಥರಿಗೂ ಕೂಡಾ ಸಾಧ್ಯವಾಗುವುದಿಲ್ಲ ಎನ್ನುವುದು ಮಾರುಕಟ್ಟೆಯ ವಾಸ್ತವ ಸಂಗತಿಯಾಗಿದೆ. ದರ ವ್ಯತ್ಯಾಸ ಕೆಂಪಡಕೆ 2020 ಸೆಪ್ಟೆಂಬರ್‌ 17: 34,500-39,300 2021 ಸೆಪ್ಟೆಂಬರ್‌ 17: 48,500-52,200 ಚಾಲಿ ಅಡಕೆ 2020 ಸೆಪ್ಟೆಂಬರ್‌ 17: 30,500-34,600 2021 ಸೆಪ್ಟೆಂಬರ್‌ 17 : 43,800-48,100