ಹಸಿದ ಹೊಟ್ಟೆಗಳಿಗೆ ‘ಅನ್ನಭಾಗ್ಯ’ ಲಾಕ್‌ಡೌನ್ ಅವಧಿಯಲ್ಲಿ ಹೀಗೊಂದು ಉತ್ತಮ ಕಾರ್ಯ

ಇವರು ಹಸಿದ ಹೊಟ್ಟೆಗಳಿಗೆ ‘ಅನ್ನಭಾಗ್ಯ’ ಕಲ್ಪಿಸುವ ಮೂಲಕ ಲಾಕ್‌ಡೌನ್ ಅವಧಿಯಲ್ಲಿ ಹೀಗೊಂದು ಉತ್ತಮ ಕಾರ್ಯ ನಡೆಸುತ್ತಿದ್ದಾರೆ. ಜನರಿಂದಲೂ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಹಸಿದ ಹೊಟ್ಟೆಗಳಿಗೆ ‘ಅನ್ನಭಾಗ್ಯ’ ಲಾಕ್‌ಡೌನ್ ಅವಧಿಯಲ್ಲಿ ಹೀಗೊಂದು ಉತ್ತಮ ಕಾರ್ಯ
Linkup
ಬೆಂಗಳೂರು: ಕೋವಿಡ್ ಸೋಂಕು ಜನರ ಬದುಕನ್ನೇ ಬದಲಾಯಿಸಿಬಿಟ್ಟದೆ. ಎಲ್ಲೆಡೆ ಸಂಕಷ್ಟ, ಆತಂಕ ಮನೆಮಾಡಿದೆ. ಇಂತಹ ದುಗುಡದ ಸಂದರ್ಭದಲ್ಲೂ ಜನರ ಕಷ್ಟಗಳಿಗೆ ಸ್ಪಂದಿಸುವ ಒಂದಿಷ್ಟು ಮನಸ್ಸುಗಳು ನಮ್ಮ ನಡುವೆ ಇವೆ. ಜನರ ನೋವುಗಳಿಗೆ ಇವರು ಸ್ಪಂದಿಸುತ್ತಿದ್ದಾರೆ. ಹೌದು, ಅಂತವರಲ್ಲಿ ಒಬ್ಬರು ಪಿಇಎಸ್‌ ಯುನಿವರ್ಸಿಟಿ ಮುಖ್ಯಸ್ಥ ಎಂ.ಆರ್ ಡಿ.ಆರ್ ದೊರೆಸ್ವಾಮಿ. ಬೆಂಗಳೂರಿನ ವಾಣಿವಿಲಾಸ್‌ ಹೆರಿಗೆ ಆಸ್ಪತ್ರೆಯ ಮುಂದೆ ಮಧ್ಯಾಹ್ಮ ಸಮಯ 12 ಗಂಟೆಗೆ ಮುಂಚಿತವಾಗಿಯೇ ಉಪಹಾರವನ್ನು ಹೊತ್ತುಕೊಂಡು ಬಂದ ವಾಹನವೊಂದು ಬರುತ್ತದೆ. ಕೆಲ ಹೊತ್ತಿನಲ್ಲೇ ಜನರು ಸರದಿ ಸಾಲಲ್ಲಿ ನಿಂತುಕೊಳ್ಳುತ್ತಾರೆ. ಪಿಪಿಇ ಕಿಟ್ ಹಾಕಿರುವಂತಹ ವ್ಯಕ್ತಿ ಅಲ್ಲಿದ್ದ ಜನರಿಗೆ ಊಟ ಬಡಿಸುತ್ತಾರೆ. ಅವಧಿಯಲ್ಲಿ ಜನರಿಗೆ ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ ಇಂತಹದೊಂದು ಉತ್ತಮ ಕಾರ್ಯವನ್ನು ಆಡಳಿತ ಮಂಡಳಿ ಮಾಡುತ್ತಿದೆ. ನಿತ್ಯ ಸುಮಾರು 25,000 ಖರ್ಚಿನಲ್ಲಿ ಬಿಸಿ ಬಿಸಿ ಬೇಳೆ ಬಾತು, ಪಲಾವು ಅಥವಾ ಇತರ ಆಹಾರಗಳನ್ನು ಜನರಿಗೆ ಉಚಿತವಾಗಿ ನೀಡಲಾಗುತ್ತದೆ. ಜೊತೆಗೆ ನೀರನ್ನು ಕೂಡಾ ಪೂರೈಕೆ ಮಾಡಲಾಗುತ್ತದೆ. ವಾಣಿವಿಲಾಸ್ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ನೂರಾರು ಮಹಿಳೆಯರು ದಾಖಲಾಗಿದ್ದಾರೆ. ಅವರ ಜತೆಗೆ ಅವರ ಕುಟುಂಬದ ಸದಸ್ಯರು ಆಸ್ಪತ್ರೆಗೆ ಆಗಮಿಸುತ್ತಾರೆ. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಆಸ್ಪತ್ರೆಯ ಕ್ಯಾಂಟೀನ್ ಕೂಡಾ ಮುಚ್ಚಿದೆ. ಊಟ-ತಿಂಡಿಗಾಗಿ ಹೊರಗಡೆ ಹೋಗುವುದು ಲಾಕ್‌ಡೌನ್ ಅವಧಿಯಲ್ಲಿ ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ನಿತ್ಯ ಸುಮಾರು 300 ರಿಂದ 350 ಮಂದಿಗೆ ಊಟ- ಉಪಹಾರ ನೀಡಲಾಗುತ್ತದೆ. ‘ಜನರಿಗೆ ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ ಕಾಲೇಜು ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಪ್ರತಿನಿತ್ಯ ಕಾಲೇಜು ಕಿಚನ್‌ನಲ್ಲಿ ಅಡುಗೆ ಮಾಡಲಾಗುತ್ತದೆ. ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಜೊತೆ ಬರುವವರಿಗೆ ಉಚಿತವಾಗಿ ಆಹಾರವನ್ನು ನೀಡುತ್ತೇವೆ. ಇದೊಂದು ಪುಣ್ಯದ ಕೆಲಸ, ತೃಪ್ತಿ ಭಾವನೆಯೊಂದಿಗೆ ಅಗತ್ಯ ಇರುವವರಿಗೆ ಆಹಾರವನ್ನು ನೀಡುತ್ತೇವೆ’ ಎನ್ನುತ್ತಾರೆ ಕಾಲೇಜಿನ ಕ್ಯಾಂಟೀನ್ ಉಸ್ತುವಾರಿ ಗಣೇಶ್ ಭಟ್. ರೋಗಿಗಳ ಸಂಬಂಧಿಸಿಕರಿಗೆ ಮಾತ್ರವಲ್ಲ, ವಾಣಿ ವಿಲಾಸ್ ಆಸ್ಪತ್ರೆಯ ಸಿಬ್ಬಂದಿಗೂ ಉಚಿತವಾಗಿ ಆಹಾರ, ನೀರು ಪೂರೈಕೆ ಮಾಡಲಾಗುತ್ತಿದೆ. ಪಿಇಎಸ್ ಯುನಿವರ್ಸಿಟಿ ಆಡಳಿತ ಮಂಡಳಿ ಮಾಡುತ್ತಿರುವ ಈ ಸೇವೆಗೆ ಆಸ್ಪತ್ರೆಯ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ‘ವಾಣಿ ವಿಲಾಸ್‌ ಆಸ್ಪತ್ರೆಯಲ್ಲಿ 40 ರಿಂದ 50 ಮಹಿಳೆಯರ ಹೆರಿಗೆ ನಿತ್ಯ ಆಗುತ್ತದೆ. ಆಸ್ಪತ್ರೆಗೆ ದಾಖಲಾಗುವವರ ಜತೆಗೆ ಅವರ ಮಕ್ಕಳು ಇರುತ್ತಾರೆ. ಅಲ್ಲದೆ ಸಂಬಂಧಿಕರು ಇರುತ್ತಾರೆ. ಆದರೆ, ಲಾಕ್‌ಡೌನ್ ಇರುವುದರಿಂದ ಅವರಿಗೆಲ್ಲಾ ಹೊರಗಡೆ ಊಟ- ತಿಂಡಿ ಪಡೆದುಕೊಳ್ಳಲು ಕಷ್ಟವಾಗುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಈ ರೀತಿಯಲ್ಲಿ ಸಹಾಯ ಮಾಡುವುದು ನಿಜಕ್ಕೂ ಉತ್ತಮವಾದ ಕಾರ್ಯ’ ಎನ್ನುತ್ತಾರೆ ವಾಣಿವಿಲಾಸ್ ಆಸ್ಪತ್ರೆಯ ಮುಖ್ಯ ಶುಶ್ರೂಷಕಿ ಸುಮಿತ್ರಾ ದೇವಿ ‘ಲಾಕ್‌ಡೌನ್ ಅವಧಿಯಲ್ಲಿ ಊಟ- ತಿಂಡಿಯನ್ನು ಉಚಿತವಾಗಿ ನೀಡುವುದರಿಂದ ನಮಗೆ ಸಾಕಷ್ಟು ಅನುಕೂಲವಾಗುತ್ತದೆ. ಬಿಸಿಲಿನಲ್ಲಿ ಹೊರಗಡೆ ಸುತ್ತಾಡಿದರೂ ಊಟ ಸಿಗುತ್ತಿಲ್ಲ’ ಎನ್ನುತ್ತಾರೆ ಆನಂದ್. ಒಟ್ಟಿನಲ್ಲಿ ಸಂಕಷ್ಟದ ಅವಧಿಯಲ್ಲಿ ಜನರಿಗೆ ಈ ರೀತಿಯಾಗಿ ಸ್ಪಂದಿಸುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಇಂತವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿ ಎಂಬುವುದೇ ನಮ್ಮ ಆಶಯ.