ಹಳ್ಳಿಗಳಿಂದ ಜನರ ದಾಂಗುಡಿ: ಬೆಂಗಳೂರಿನಲ್ಲಿ ಕೊರೊನಾ ಲಸಿಕೆಗೆ ಡಿಮ್ಯಾಂಡ್‌ ಹೆಚ್ಚುವ ಸಾಧ್ಯತೆ..!

ಒಂದು ಲಕ್ಷ ಗುರಿ ಇಟ್ಟುಕೊಂಡಿರುವ ಬಿಬಿಎಂಪಿ ಸದ್ಯ ಸರಾಸರಿ 60 ರಿಂದ 70 ಸಾವಿರ ಜನರಿಗೆ ಮಾತ್ರ ಲಸಿಕೆ ನೀಡುತ್ತಿದೆ. ಹೀಗಿರುವಾಗ ವಲಸಿಗರೂ ಲಸಿಕಾ ಅಭಿಯಾನದಲ್ಲಿ ಸೇರಿಕೊಂಡರೆ ಲಸಿಕೆಗೆ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ.

ಹಳ್ಳಿಗಳಿಂದ ಜನರ ದಾಂಗುಡಿ: ಬೆಂಗಳೂರಿನಲ್ಲಿ ಕೊರೊನಾ ಲಸಿಕೆಗೆ ಡಿಮ್ಯಾಂಡ್‌ ಹೆಚ್ಚುವ ಸಾಧ್ಯತೆ..!
Linkup
: ನಗರ ತೊರೆದು ಹಳ್ಳಿ ಸೇರಿದ ಜನರು ಮತ್ತೆ ನಗರಕ್ಕೆ ದಾಂಗುಡಿ ಇಡುತ್ತಿದ್ದು, ರಾಜಧಾನಿಯಲ್ಲಿ ಮುಂದಿನ ಕೆಲವು ದಿನ ಕೋವಿಡ್‌ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಲಾಕ್‌ಡೌನ್‌ ತೆರವುಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ವಾಣಿಜ್ಯ ಚಟುವಟಿಕೆಗಳು ನಿಧಾನವಾಗಿ ತೆರೆದುಕೊಳ್ಳುತ್ತಿವೆ. ಇದರಿಂದ ನಗರಕ್ಕೆ ಮರು ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಸೋಮವಾರ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಿದ್ದು, ನಗರದ ಹೊರ ವಲಯದ ಟೋಲ್‌ಗೇಟ್‌ಗಳು ವಾಹನ ದಟ್ಟಣೆಯಿಂದ ತುಂಬಿ ತುಳುಕುತ್ತಿದ್ದರೆ, ರೈಲ್ವೆ ನಿಲ್ದಾಣ ಕೂಡ ಜನಜಂಗುಳಿಯಿಂದ ತುಂಬಿತ್ತು. ನಗರಕ್ಕೆ ಮರು ವಲಸೆ ಬರುತ್ತಿರುವ ಬಹಳಷ್ಟು ಜನರು ಒಂದು ಡೋಸ್‌ ಕೂಡ ಲಸಿಕೆ ಹಾಕಿಸಿಕೊಂಡಿಲ್ಲ. ನಗರಕ್ಕೆ ಬಂದು ಲಸಿಕೆ ತೆಗೆದುಕೊಳ್ಳುವ ಉದ್ದೇಶದಿಂದ ಬಹಳಷ್ಟು ಜನರು ಹಾಗೆಯೇ ಬಂದಿದ್ದಾರೆ. ಹೀಗಾಗಿ ಸ್ವಾಭಾವಿಕವಾಗಿಯೇ ಲಸಿಕೆಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಒಂದು ಲಕ್ಷ ಗುರಿ ಇಟ್ಟುಕೊಂಡಿರುವ ಬಿಬಿಎಂಪಿ ಸದ್ಯ ಸರಾಸರಿ 60 ರಿಂದ 70 ಸಾವಿರ ಜನರಿಗೆ ಮಾತ್ರ ಲಸಿಕೆ ನೀಡುತ್ತಿದೆ. ಹೀಗಿರುವಾಗ ವಲಸಿಗರೂ ಲಸಿಕಾ ಅಭಿಯಾನದಲ್ಲಿ ಸೇರಿಕೊಂಡರೆ ಲಸಿಕೆಗೆ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ. 'ಬಿಬಿಎಂಪಿಯಲ್ಲಿ ಸದ್ಯಕ್ಕೆ ಕೋವಿಡ್‌ ಲಸಿಕೆಯ ಯಾವುದೇ ಕೊರತೆ ಇಲ್ಲ. ಲಸಿಕಾ ಫಲಾನುಭವಿಗಳು ಹೆಚ್ಚಾದ ಹಾಗೆ ಬೇಡಿಕೆ ಕೂಡ ಹೆಚ್ಚಾಗಲಿದೆ' ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಯೊಬ್ಬರು. ಲಸಿಕೆ ಜತೆ ಸೋಂಕಿನ ಆತಂಕ: ರಾಜಧಾನಿಯಲ್ಲಿ ಒಂದೆಡೆ ಕೋವಿಡ್‌ ಲಸಿಕೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಇನ್ನೊಂದೆಡೆ ಹರಡುವ ಭೀತಿ ಕೂಡ ಕಾಡುತ್ತಿದೆ. ನಗರದಲ್ಲಿ ಸೋಂಕು ಗಣನೀಯವಾಗಿ ಇಳಿಕೆಯಾಗುತ್ತಿದ್ದು, ತುಸು ನೆಮ್ಮದಿ ಕಂಡುಕೊಂಡ ಜನ ಮರು ವಲಸೆಯಿಂದ ಮತ್ತೆ ಸೋಂಕು ಹೆಚ್ಚಾಗುವ ಆತಂಕದಲ್ಲಿದ್ದಾರೆ. ರಾಜಧಾನಿಗಿಂತ ಹೊರಗಿನ ಕೆಲವು ಜಿಲ್ಲೆಗಳಲ್ಲಿಯೇ ಸೋಂಕು ಹೆಚ್ಚಿರುವುದು ಈ ಆತಂಕಕ್ಕೆ ಕಾರಣವಾಗಿದೆ. ಪರೀಕ್ಷೆ ತಪ್ಪಿಸಿಕೊಳ್ಳುವುದು: ಸದ್ಯ ನಗರದಲ್ಲಿ ಸೋಂಕಿನ ಪರೀಕ್ಷೆ ಹೆಚ್ಚು ಪ್ರಮಾಣದಲ್ಲಿ ನಡೆಸಲಾಗುತ್ತಿಲ್ಲ. ರೈಲ್ವೆ, ಬಸ್‌ ನಿಲ್ದಾಣದಲ್ಲಿ ಪರೀಕ್ಷೆ ನಡೆಸುತ್ತಿದ್ದರೂ ಹಲವರು ಪರೀಕ್ಷೆಯಿಂದ ತಪ್ಪಿಸಿಕೊಂಡು ಹೋಗುತ್ತಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ನಗರಕ್ಕೆ ವಾಪಸ್ ಬರುವವರಲ್ಲೂ ಬಹಳಷ್ಟು ಜನರು ಕೋವಿಡ್‌ ಪರೀಕ್ಷೆ ಮಾಡಿಸದೆಯೇ ಇರುವುದು ಕೂಡ ಸೋಂಕು ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಇದೆ.