ರಂಗಭೂಮಿ, ಸಿನಿಮಾ ಮತ್ತು ಕಿರುತೆರೆಯ ಹಿರಿಯ ನಟ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ವಯೋಸಹಜ ಆನಾರೋಗ್ಯದಿಂದ ಬಳಲುತ್ತಿದ್ದ ಶಂಕರ್ ರಾವ್ ಬೆಂಗಳೂರಿನ ಅರಕೆರೆಯಲ್ಲಿನ ಸ್ವಗೃಹದಲ್ಲಿ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಮೂಲತಃ ಹವ್ಯಾಸಿ ರಂಗಭೂಮಿ ಕಲಾವಿದರಾದ ಶಂಕರ್ ರಾವ್ ನೂರಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಹತ್ತಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 1972 ರಿಂದ ಇತ್ತೀಚಿನವರೆಗೂ ಶಂಕರ್ ರಾವ್ ‘ನಟರಂಗ’ ರಂಗತಂಡದ ಸಕ್ರಿಯ ಕಲಾವಿದರಾಗಿದ್ದರು.
ಶಾಲಾ ದಿನಗಳಲ್ಲೇ ನಾಟಕಗಳತ್ತ ಆಕರ್ಷಿತರಾದ ಶಂಕರ್ ರಾವ್ ತಮ್ಮದೇ ‘ಗೆಳೆಯರ ಬಳಗ’ ರಂಗತಂಡ ಕಟ್ಟಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಸಿಮ್ಸನ್ ಅಂಡ್ ಸಿಮ್ಸನ್ ಕಂಪನಿಯಲ್ಲಿ ನೌಕರಿ ಮಾಡುತ್ತಲೇ ‘ಕಲಾಕುಂಜ’, ‘ನಟರಂಗ’ ರಂಗತಂಡಗಳ ಮೂಲಕ ಹಲವು ನಾಟಕಗಳಲ್ಲಿ ನಟಿಸುತ್ತಾ ಬಂದರು. ‘ನಟರಂಗ’ದ ಬಹುತೇಕ ಎಲ್ಲಾ ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ಕಾಕನಕೋಟೆ, ತೊಘಲಕ್, ಮೃಚ್ಛಕಟಿಕ ಪೋಲಿ ಕಿಟ್ಟಿ.. ಅವರ ಕೆಲವು ಪ್ರಮುಖ ನಾಟಕಗಳು. ಎಂ.ಆರ್.ವಿಠಲ್ ನಿರ್ದೇಶನದ ‘ಯಾರ ಸಾಕ್ಷಿ?’ (1972) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಶಂಕರ್ ರಾವ್ ಕಾಕನಕೋಟೆ, ಸಿಂಹಾಸನ, ಪುಟಾಣಿ ಏಜೆಂಟ್ 123, ಮೂಗನಸೇಡು, ಕಲ್ಯಾಣ ಮಂಟಪ.. ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಸೆಕೆಂಡ್ ಹ್ಯಾಂಡ್ ಸದಾಶಿವ, ಪಲ್ಲವಿ, ಫೊಟೋಗ್ರಾಫರ್ ಪರಮೇಶಿ, ಯಾಕಿಂಗಾಡ್ತಾರೋ, ಪಾಪ ಪಾಂಡು, ಸಿಲ್ಲಿಲಲ್ಲಿ.. ಅವರು ಅಭಿನಯಿಸಿರುವ ಕೆಲವು ಪ್ರಮುಖ ಧಾರಾವಾಹಿಗಳು. ಶಂಕರ್ ರಾವ್ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಪತ್ನಿ ಉಮಾ ಕಳೆದ ವರ್ಷ ನಿಧನರಾಗಿದ್ದರು. ಶಂಕರ್ ರಾವ್ ನಿಧನಕ್ಕೆ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಕ್ಷೇತ್ರದ ಹಲವರು ಕಂಬನಿ ಮಿಡಿದಿದ್ದಾರೆ.
ಟ್ವೀಟ್ ಮಾಡಿದ ರಘುರಾಮ್
‘’ನನ್ನ ನಿರ್ದೇಶನದ ‘ಫೇರ್ ಅಂಡ್ ಲವ್ಲಿ’ ಚಿತ್ರದಲ್ಲಿ ನೀವು ನಟಿಸಬೇಕಾದರೆ ಕಾಲ ಕಳೆದ ಘಳಿಗೆ.. ನಿಮ್ಮ ಜೊತೆಯಲ್ಲಿ ಸಣ್ಣ ಒಡನಾಟದ ನೆನಪು ಸದಾ ನನ್ನೊಳಗೆ.. ಕಲಾ ಸೇವೆಯಲ್ಲಿ ನಿಷ್ಠಾವಂತ ನನ್ನಂತಹ ಚಿತ್ರ ಪ್ರೇಮಿಗಳ ಹೃದಯದಲ್ಲಿ ನೀವು ಸದಾ ಜೀವಂತ.. ಮಿಸ್ ಯೂ ಶಂಕರ್ ರಾವ್ ಸರ್’’ ಎಂದು ನಿರ್ದೇಶಕ ರಘುರಾಮ್ ಟ್ವೀಟ್ ಮಾಡಿದ್ದಾರೆ.
ಕಂಬನಿ ಮಿಡಿದ ವಿಜಯ ಪ್ರಸಾದ್
‘’ಸಹಾಯಕ ನಿರ್ದೇಶಕ, ಸಹ ನಿರ್ದೇಶಕ ಮತ್ತು ನಿರ್ದೇಶಕನಾಗಿ ಇವರೊಂದಿಗೆ ನನ್ನ ಪ್ರಯಾಣ ರೋಚಕವಾದುದ್ದು. ಚಿತ್ರೀಕರಣ ಇರಲಿ ಅಥವಾ ಇಲ್ಲದೇ ಇರಲಿ, ಜೊತೆಯಾದಾಗ ನಗೆಚಟಾಕಿಗಳ ಸುರಿಮಳೆ. ಶುದ್ಧ ಮನಸಿನ ಪರಿಶುದ್ಧ ಜೀವದ ಅಗಲಿಕೆ ನನ್ನನ್ನ ಮೌನವಾಗಿಸಿದೆ. ಹೋಗಿ ಬನ್ನಿ ಸರ್, ಭಾವಪೂರ್ಣ ಶ್ರದ್ಧಾಂಜಲಿ’’ ಎಂದು ನಿರ್ದೇಶಕ ವಿಜಯ ಪ್ರಸಾದ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಟಿ.ಎನ್.ಸೀತಾರಾಮ್
‘’ಬಹುಕಾಲದ ಗೆಳೆಯ, ಕನ್ನಡ ರಂಗಭೂಮಿಯ ಮಹಾನ್ ಕಲಾವಿದ ಶಂಕರ್ ರಾವ್ ಇಂದು ನಿಧನರಾಗಿದ್ದಾರೆ. ಶಂಕರ್ ರಾವ್ ನಟರಂಗ ತಂಡದ ಆಧಾರ ಸ್ಥಂಭಗಳಲ್ಲಿ ಒಬ್ಬರಾಗಿದ್ದರು. ಅವರಿಲ್ಲದೆ ಯಾವ ನಾಟಕವನ್ನೂ ಅವರು ಆಡುತ್ತಿರಲಿಲ್ಲ. ನಮ್ಮ ತಂಡದ ಮಾಯಾಮೃಗ ಧಾರಾವಾಹಿಯಲ್ಲಿ ಸಂತಾನಂ ಪಾತ್ರ ಮಾಡಿ ಬಹಳ ಜನಪ್ರಿಯರಾಗಿದ್ದರು. ಪಾಪ ಪಾಂಡು ಧಾರಾವಾಹಿಯಲ್ಲಿ ಎಲ್ಲರೂ ಇಷ್ಟಪಡುವ ಪಾತ್ರ ಮಾಡಿ ಜನಾನುರಾಗಿಯಾಗಿದ್ದರು. ಅವರಿದ್ದ ಕಡೆ ಪ್ರತಿಕ್ಷಣವೂ ನಗೆಬುಗ್ಗೆಗಳಿಗೆ ಬರವಿರಲಿಲ್ಲ. ಸದಾ ಹಸನ್ಮುಖಿ. ಎಲ್ಲರ ಕಷ್ಟಕ್ಕೆ ಹೃದಯದ ಮೂಲಕ ಸ್ಪಂದಿಸುತ್ತಿದ್ದ ವ್ಯಕ್ತಿ. ಅವರ ಮನೆಯವರ ಶೋಕ ದಟ್ಟವಾಗಿ ಕುಳಿತಿದೆ. ನಟರಂಗದವರ ತಬ್ಬಲಿತನ ದಿನೇ ದಿನೇ ಹೆಚ್ಚು ಹೆಚ್ಚು ಕಾಡುತ್ತಿದೆ. ಅವರ ಅಗಲಿಕೆಯ ದುಃಖವನ್ನು ತಡೆದುಕೊಳ್ಳುವ ಶಕ್ತಿ ಅವರ ಮನೆಯವರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ’’ ಎಂದು ಟಿ.ಎನ್.ಸೀತಾರಾಮ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಜಾಕಿದ್ದಾರೆ.
ನಾಗೇಂದ್ರ ಶಾನ್
‘’ನಗೆ ಚಿಲುಮೆ… ಬದುಕನ್ನು ಅನಂದಮಯವಾಗಿಸಿಕೊಳ್ಳಬೇಕು ಅಂತ ಪಾಠ ಕಲಿಸಿದ ಗುರು ಶಂಕರ್ ರಾವ್. ಅಂತಿಮ ಶುಭ ವಿದಾಯ ಗುರುವೇ’’ ಎಂದು ಫೇಸ್‌ಬುಕ್‌ನಲ್ಲಿ ನಾಗೇಂದ್ರ ಶಾನ್ ಬರೆದುಕೊಂಡಿದ್ದಾರೆ.
ಶರಣ್
''ಕನ್ನಡ ಚಿತ್ರರಂಗದ ಹಿರಿಯ ಹಾಗೂ ಅದ್ಭುತ ನಟ ಶಂಕರ್ ರಾವ್ ಇನ್ನಿಲ್ಲ.. ಅವರೊಂದಿಗೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡುವ ಭಾಗ್ಯ ನನಗೆ ದೊರಕಿದ್ದು, ನಟನೆಯ ಕುರಿತು ಅವರಿಂದ ಬಹಳಷ್ಟು ಕಲಿತಿದ್ದೇನೆ.. ಸರಳ, ಸಜ್ಜನಿಕೆಗೆ ಮತ್ತೊಂದು ಹೆಸರು ಅಂದರೆ ತಪ್ಪಾಗಲಾರದು..
ಅವರಿಗೆ ನನ್ನ ಅಂತಿಮ ನಮನಗಳು''