ಸಂಚಾರಿ ವಿಜಯ್ ಅವರ ಅಪೂರ್ಣ ಆಸೆಗಳನ್ನು ಪೂರೈಸಲು ಹೊರಟ 'ಉಸಿರು' ಬಳಗ

ಸಂಚಾರಿ ವಿಜಯ್ ಅವರ ಅಪೂರ್ಣ ಆಸೆಗಳನ್ನು ಪೂರೈಸಲು 'ಉಸಿರು' ಬಳಗ ಮುಂದಾಗಿದೆ. ಈ ಬಗ್ಗೆ ನಿರ್ದೇಶಕಿ ಕವಿತಾ ಲಂಕೇಶ್ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಸಂಚಾರಿ ವಿಜಯ್ ಅವರ ಅಪೂರ್ಣ ಆಸೆಗಳನ್ನು ಪೂರೈಸಲು ಹೊರಟ 'ಉಸಿರು' ಬಳಗ
Linkup
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಇಹಲೋಕ ತ್ಯಜಿಸುವ ಮುನ್ನ 'ಉಸಿರು' ತಂಡದಲ್ಲಿದ್ದರು. 'ಉಸಿರು' ಬಳಗದ ಜೊತೆ ಸೇರಿ ಸಂಕಷ್ಟದಲ್ಲಿದ್ದ ಅನೇಕ ಕೋವಿಡ್ ಸೋಂಕಿತರಿಗೆ ಸಂಚಾರಿ ವಿಜಯ್ ಸಹಾಯ ಹಸ್ತ ಚಾಚಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬೆಡ್ ಇಲ್ಲದೆ, ಆಕ್ಸಿಜನ್ ಸಿಗದೆ ಒದ್ದಾಡುತ್ತಿದ್ದ ಸೋಂಕಿತರಿಗೆ ಉಚಿತವಾಗಿ ಆಕ್ಸಿಜನ್ ನೀಡುವ ಕೆಲಸವನ್ನು ತಂಡ ಮಾಡುತ್ತಿತ್ತು. 'ಉಸಿರು' ತಂಡದ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಂಚಾರಿ ವಿಜಯ್ ಮುಂದಾಗಿದ್ದರು. ಆದರೆ ಅದೆಲ್ಲ ಕಾರ್ಯರೂಪಕ್ಕೆ ಬರುವ ಮುನ್ನವೇ ದುರಾದೃಷ್ಟವಶಾತ್ ಅಪಘಾತಕ್ಕೀಡಾಗಿ ಸಂಚಾರಿ ವಿಜಯ್ ಬಾರದ ಲೋಕಕ್ಕೆ ತೆರಳಿಬಿಟ್ಟರು. ಇದೀಗ ಸಂಚಾರಿ ವಿಜಯ್ ಅವರ ಅಪೂರ್ಣ ಆಸೆಗಳನ್ನು ಪೂರೈಸಲು 'ಉಸಿರು' ಬಳಗ ಮುಂದಾಗಿದೆ. ಈ ಬಗ್ಗೆ ನಿರ್ದೇಶಕಿ ಕವಿತಾ ಲಂಕೇಶ್ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. ಕವಿತಾ ಲಂಕೇಶ್ ಫೇಸ್‌ಬುಕ್ ಪೋಸ್ಟ್ ''ಬಂಡೀಪುರ ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಶಿಥಿಗೊಂಡ ಮೇಲ್ಚಾವಣಿಗಳಿಗೆ ಉತ್ತಮ ಗುಣಮಟ್ಟದ ಟಾರ್ಪಲ್ ಹೊದಿಕೆ ಹೊದಿಸುವ ವಿಚಾರವಾಗಿ ವಿಜಯ್ ನಮ್ಮ ಬಳಗದಲ್ಲಿ ಬಹಳ ಆಸಕ್ತಿ ವಹಿಸಿದ್ದರು. ಅಷ್ಟೇ ಅಲ್ಲದೆ ಗುಲ್ಬರ್ಗಾ ಜಿಲ್ಲೆಯ ಕಡುಬಡತನದ ಕುಟುಂಬವೊಂದರ ನಾಲ್ಕು ವರ್ಷದ ಹೆಣ್ಣು ಮಗುವೊಂದರ ಹೃದಯ ಚಿಕಿತ್ಸೆಗೆ ನೆರವಾಗಲು ವಿಜಯ್ ಮುಂದಾಗಿದ್ದರು. ಸದ್ಯ ತಿಳಿದು ಬಂದ ಮಾಹಿತಿಯಂತೆ ಆ ಮಗು ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದೆ. ಸಂಪೂರ್ಣ ಸುಧಾರಿಸಿದ ನಂತರ ಈ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ಇವೆರಡೂ ಕಾರ್ಯಗಳನ್ನು ಪೂರೈಸುವ ಮೂಲಕ ವಿಜಯ್ ಅವರಿಗೆ ಗೌರವ ನಮನ ಸಲ್ಲಿಸಲು ನಾವು ಬದ್ಧರಾಗಿದ್ದೇವೆ. ವಿಜಯ್ ಸಾರ್ ನಿಮ್ಮೊಂದಿಗೆ ಸದಾ ನಮ್ಮ ಉಸಿರು'' ಎಂದು ಫೇಸ್‌ಬುಕ್‌ನಲ್ಲಿ ಕವಿತಾ ಲಂಕೇಶ್ ಬರೆದುಕೊಂಡಿದ್ದಾರೆ. 'ಉಸಿರು' ತಂಡದಲ್ಲಿ ಯಾರ್ಯಾರಿದ್ದಾರೆ? 'ಉಸಿರು' ತಂಡದಲ್ಲಿ ನಿರ್ದೇಶಕ ಕವಿರಾಜ್, ನಿರ್ದೇಶಕಿ ಕವಿತಾ ಲಂಕೇಶ್, ನಿರ್ದೇಶಕ ದಿನಕರ್ ತೂಗುದೀಪ, ಸಾಧು ಕೋಕಿಲ, ಚೈತನ್ಯ, ನೀತು ಶೆಟ್ಟಿ, ಸಂಚಾರಿ ವಿಜಯ್, ಅಕ್ಷತಾ ಪಾಂಡವಪುರ, ಸುಂದರ್ ಮುಂತಾದವರಿದ್ದಾರೆ. 'ಉಸಿರು' ತಂಡದ ಜೊತೆಗೆ ನಟ ದರ್ಶನ್ ಕೂಡ ಕೈಜೋಡಿಸಿದ್ದಾರೆ. ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಸಂಚಾರಿ ವಿಜಯ್ ಕಳೆದ ಶನಿವಾರ ರಾತ್ರಿ ಗೆಳೆಯನ ಮನೆಗೆ ತೆರಳಿದ್ದ ಸಂಚಾರಿ ವಿಜಯ್ ಅಲ್ಲಿಂದ ವಾಪಸ್ ಬರುವಾಗ ಜೆಪಿ ನಗರದ ಏಳನೇ ಹಂತದಲ್ಲಿ ಬೈಕ್ ಅಪಘಾತ ಸಂಭವಿಸಿತು. ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ ಸಂಚಾರಿ ವಿಜಯ್ ತಲೆ ಮತ್ತು ತೊಡೆ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ಬ್ರೇನ್ ಫೇಲ್ಯೂರ್ ಮತ್ತು ಬ್ರೇನ್ ಡೆಡ್ ಆದ ಪರಿಣಾಮ ಸಂಚಾರಿ ವಿಜಯ್ ಕೊನೆಯುಸಿರೆಳೆದರು. ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಮಾನವೀಯತೆ ಮೆರೆದರು.