ಹಗಲಿರುಳು ಕೆಲಸ ಮಾಡಿದ್ರೂ ಕರಗದ ಶವಗಳ ಸಾಲು: ವಿದ್ಯುತ್‌ ಚಿತಾಗಾರಗಳಲ್ಲಿ ಫ್ರೀಜರ್‌ಗಳ ಅಳವಡಿಕೆ

ಚಿತಾಗಾರಗಳು ಮತ್ತು ರುದ್ರಭೂಮಿಗಳ ಬಳಿ ಸಾಲುಗಟ್ಟಿ ನಿಲ್ಲುತ್ತಿರುವ ಆ್ಯಂಬುಲೆನ್ಸ್‌ಗಳ ಸಾಲು ಕರಗುತ್ತಲೇ ಇಲ್ಲ. ಹಾಗಾಗಿಯೇ, ಬಿಬಿಎಂಪಿಯು ಶವಗಳನ್ನು ಕೆಡದಂತೆ ಸಂರಕ್ಷಿಸಿಡಲು ಫ್ರೀಜರ್‌ ಬಾಕ್ಸ್‌ಗಳನ್ನು ವಿದ್ಯುತ್‌ ಚಿತಾಗಾರಗಳಿಗೆ ಒದಗಿಸಿದೆ.

ಹಗಲಿರುಳು ಕೆಲಸ ಮಾಡಿದ್ರೂ ಕರಗದ ಶವಗಳ ಸಾಲು: ವಿದ್ಯುತ್‌ ಚಿತಾಗಾರಗಳಲ್ಲಿ ಫ್ರೀಜರ್‌ಗಳ ಅಳವಡಿಕೆ
Linkup
: ನಗರದಲ್ಲಿ ಕೋವಿಡ್‌ನ ಎರಡನೇ ಅಲೆಯು ಮರಣ ಮೃದಂಗ ಬಾರಿಸುತ್ತಿದ್ದು, ವಿದ್ಯುತ್‌ ಚಿತಾಗಾರಗಳಲ್ಲಿ ಹಗಲಿರುಳು ನಡೆಸಿದರೂ, ಶವಗಳ ಸಾಲು ಕರಗುತ್ತಿಲ್ಲ. ಹೀಗಾಗಿ, ಬಿಬಿಎಂಪಿಯು ಮೃತದೇಹಗಳನ್ನು ಕೆಡದಂತೆ ಸಂರಕ್ಷಿಸಿಡಲು ಚಿತಾಗಾರಗಳಲ್ಲಿ ಫ್ರೀಜರ್‌ಗಳನ್ನು ಬಳಸುತ್ತಿದೆ. ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇರುವುದು ಜನರಲ್ಲಿ ಭೀತಿ ಮೂಡಿಸಿದೆ. ಸೋಂಕಿತರ ಬಂಧುಗಳು ಹಾಸಿಗೆ, ಐಸಿಯು, ವೆಂಟಿಲೇಟರ್‌ ಸಿಗದೆ ಒದ್ದಾಡುತ್ತಿದ್ದರೆ, ಇತ್ತ ಮೃತರ ಅಂತ್ಯಕ್ರಿಯೆಗೆ ಒಂದೆರಡು ದಿನ ಕಾಯಬೇಕಾದ ಸ್ಥಿತಿ ಇದೆ. ಹಾಗಾಗಿ, ಆಯಾ ದಿನ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗದ ಶವಗಳನ್ನು ಫ್ರೀಜರ್‌ನಲ್ಲಿಟ್ಟು, ಮರು ದಿನ ಸುಡಲಾಗುತ್ತಿದೆ. ಸದ್ಯ ಮೇಡಿ ಅಗ್ರಹಾರದಲ್ಲಿ 8 ಮತ್ತು ಕೂಡ್ಲು ಚಿತಾಗಾರಕ್ಕೆ 10 ಫ್ರೀಜರ್‌ಗಳನ್ನು ಒದಗಿಸಲಾಗಿದೆ. ಉಳಿದ ಚಿತಾಗಾರಗಳಲ್ಲೂ ಫ್ರೀಜರ್‌ಗಳನ್ನಿಡಲು ಪಾಲಿಕೆಯು ಚಿಂತಿಸಿದೆ. ನಗರ ಜಿಲ್ಲೆಯಲ್ಲಿ ಕೋವಿಡ್‌ನಿಂದ ಸತ್ತವರ ಅಂತ್ಯಸಂಸ್ಕಾರಕ್ಕೆ 7 ವಿದ್ಯುತ್‌ ಚಿತಾಗಾರಗಳು ಹಾಗೂ ಮೂರು ರುದ್ರಭೂಮಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ದುರಸ್ತಿ ಕಾರಣದಿಂದ ಸುಮನಹಳ್ಳಿ ಹಾಗೂ ಬನಶಂಕರಿ ಚಿತಾಗಾರಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಹೀಗಾಗಿ, ಉಳಿದ , ಸ್ಮಶಾನಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಸಾವಿನ ಸಂಖ್ಯೆ ಏರುತ್ತಲೇ ಇದ್ದು, ಚಿತಾಗಾರಗಳು ಮತ್ತು ರುದ್ರಭೂಮಿಗಳ ಬಳಿ ಸಾಲುಗಟ್ಟಿ ನಿಲ್ಲುತ್ತಿರುವ ಆ್ಯಂಬುಲೆನ್ಸ್‌ಗಳ ಸಾಲು ಕರಗುತ್ತಲೇ ಇಲ್ಲ. ಹಾಗಾಗಿಯೇ, ಬಿಬಿಎಂಪಿಯು ಶವಗಳನ್ನು ಕೆಡದಂತೆ ಸಂರಕ್ಷಿಸಿಡಲು ಫ್ರೀಜರ್‌ ಬಾಕ್ಸ್‌ಗಳನ್ನು ವಿದ್ಯುತ್‌ ಚಿತಾಗಾರಗಳಿಗೆ ಒದಗಿಸಿದೆ. ದಹನ ಮಾಡಲಾಗದ ಮೃತದೇಹಗಳನ್ನು ಸಿಬ್ಬಂದಿಯು ಫ್ರೀಜರ್‌ನಲ್ಲಿಟ್ಟು, ಮರುದಿನ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ರಾತ್ರಿ-ಹಗಲು ಕಾರ್ಯ ನಿರ್ವಹಿಸಿ ಹೈರಾಣಾಗಿರುವ ಚಿತಾಗಾರದ ಸಿಬ್ಬಂದಿಯು, ಸದ್ಯ ಮಧ್ಯರಾತ್ರಿ ಬಳಿಕ ಅಂತ್ಯಕ್ರಿಯೆ ಮಾಡುತ್ತಿಲ್ಲ. ಪರಿಣಾಮ, ಮೃತರ ಬಂಧುಗಳು ರಾತ್ರಿಯಿಡೀ ದುಃಖದ ಮಡುವಿನಲ್ಲೇ ಚಿತಾಗಾರಗಳ ಬಳಿ ಕಾದು ಕೂರಬೇಕಿದೆ. 'ಕೋವಿಡ್‌ ಮತ್ತು ನಾನ್‌ ಕೋವಿಡ್‌ ಸೇರಿ ರಾತ್ರಿ 9 ಗಂಟೆಯವರೆಗೆ 25 ಶವಗಳನ್ನು ಸುಡಲಾಗಿದೆ. ಉಳಿದ ದೇಹಗಳನ್ನು ಫ್ರೀಜರ್‌ನಲ್ಲಿಟ್ಟು, ಮರುದಿನ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ. ಬಹುತೇಕ ಸಂಬಂಧಿಗಳು ಮನೆಗೆ ಹೋಗುತ್ತಾರೆ. ಆ್ಯಂಬುಲೆನ್ಸ್‌ ಚಾಲಕರಷ್ಟೇ ಸರತಿ ಸಾಲಿನಲ್ಲಿ ನಿಂತಿರುತ್ತಾರೆ' ಎಂದು ಚಿತಾಗಾರದ ಸಿಬ್ಬಂದಿಯೊಬ್ಬರು ತಿಳಿಸಿದರು. ಹೊರವಲಯದ ಗಿಡ್ಡೇನಹಳ್ಳಿಯಲ್ಲಿ ಶನಿವಾರ 66 ಹಾಗೂ ತಾವರೆಕರೆ ಸ್ಮಶಾನದಲ್ಲಿ 60 ಶವಗಳ ಅಂತ್ಯಸಂಸ್ಕಾರ ಮಾಡಲಾಗಿದೆ. ಇಲ್ಲಿಯವರೆಗೆ ಎರಡೂ ರುದ್ರಭೂಮಿಗಳಲ್ಲಿ 1,174 ಮೃತದೇಹಗಳನ್ನು ಸುಡಲಾಗಿದೆ. ಚಾಮರಾಜಪೇಟೆ ಸ್ಮಶಾನದಲ್ಲಿ ನಿತ್ಯ 38 ಕೋವಿಡ್‌ ಶವಗಳ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಪೀಣ್ಯ ಚಿತಾಗಾರದಲ್ಲಿ ಏ.1ರಿಂದ ಇಲ್ಲಿಯವರೆಗೆ 560, ಮೇಡಿ ಅಗ್ರಹಾರದಲ್ಲಿ ಏ.30ರವರೆಗೆ 622 ಕೋವಿಡ್‌ ಶವಗಳ ದಹನ ಮಾಡಲಾಗಿದೆ.