ಬಿಬಿಎಂಪಿ ವಿರುದ್ಧ ಸ್ವೆಟರ್ ಹಗರಣ ಆರೋಪ..! ದಲಿತ ಸಂಘರ್ಷ ಸಮಿತಿಯಿಂದ ತಮಟೆ ಚಳುವಳಿ

'ಕಳೆದ ಸಾಲಿನಲ್ಲಿ ಕೊರೊನ ಸಾಂಕ್ರಮಿಕ ರೋಗದ ಕಾರಣದಿಂದ ಶಾಲಾ, ಕಾಲೇಜು ಮುಚ್ಚಿದ್ದವು. ಆದರೂ ಸ್ವೆಟರ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ಒಂದು ಕೋಟಿ 76 ಲಕ್ಷ ರೂ. ಹಣವನ್ನು ಪಾವತಿ ಮಾಡಲಾಗಿದೆ' - ಡಿಎಸ್‌ಎಸ್‌ ಆರೋಪ

ಬಿಬಿಎಂಪಿ ವಿರುದ್ಧ ಸ್ವೆಟರ್ ಹಗರಣ ಆರೋಪ..! ದಲಿತ ಸಂಘರ್ಷ ಸಮಿತಿಯಿಂದ ತಮಟೆ ಚಳುವಳಿ
Linkup
: ಶಾಲಾ ಮಕ್ಕಳಿಗೆ ಸ್ವೆಟರ್‌ಗಳನ್ನು ನೀಡದೇ ವಂಚನೆ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಡೆಸಿದರು. ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಬಿಬಿಎಂಪಿ ಅಧಿಕಾರಿಗಳ ವಿರುದ್ದ ತಮಟೆ ಚಳುವಳಿ ನಡೆಸಿದ ಕಾರ್ಯಕರ್ತರು, ಸ್ಥಳದಲ್ಲೇ ಸ್ವೆಟರ್‌ಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಸಮರ್ಪಣೆ ಮಾಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕಾಧ್ಯಕ್ಷ ಡಾ. ಸಿ. ಎಸ್. ರಘು ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಡಾ. ಸಿ. ಎಸ್. ರಘು, 'ಶಾಲಾ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ದಲಿತ, ಹಿಂದುಳಿದ ಮತ್ತು ಕಡು ಬಡವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಿಬಿಎಂಪಿ ವತಿಯಿಂದ ನೀಡುವ ಯೋಜನೆ ರೂಪಿಸಲಾಗಿದೆ. 2020-21ರ ಸಾಲಿನಲ್ಲಿ ಇದಕ್ಕಾಗಿ ಅನುದಾನ ಮೀಸಲಿಡಲಾಗಿತ್ತು. ಆದರೆ, ಕೆಲವು ಬಿಬಿಎಂಪಿ ಅಧಿಕಾರಿಗಳು ಟೆಂಡರ್ ಕರೆಯದೇ 4ಜಿ ವಿನಾಯಿತಿ ಪಡೆದು ಕರ್ನಾಟಕ ಕೈಮಗ್ಗ ನಿಗಮಕ್ಕೆ ಸ್ವೆಟರ್‌ಗಳನ್ನು ಸರಬರಾಜು ಮಾಡಲು ಆದೇಶ ನೀಡುತ್ತಾರೆ' ಎಂದು ಆರೋಪಿಸಿದರು. 'ಕಳೆದ ಸಾಲಿನಲ್ಲಿ ಕೊರೊನ ಸಾಂಕ್ರಮಿಕ ರೋಗದ ಕಾರಣದಿಂದ ಶಾಲಾ, ಕಾಲೇಜು ಮುಚ್ಚಿದ್ದವು. ಆದರೂ ಸ್ವೆಟರ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ಒಂದು ಕೋಟಿ 76 ಲಕ್ಷ ರೂ. ಹಣವನ್ನು ಪಾವತಿ ಮಾಡಲಾಗಿದೆ. ಅಂದಾಜು 16 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸ್ವೆಟರ್‌ಗಳನ್ನು ವಿತರಣೆ ಮಾಡದೆ ಬಿಬಿಎಂಪಿ ಅಧಿಕಾರಿಗಳು ಹಣ ಲೂಟಿ ಮಾಡಿದ್ದಾರೆ' ಎಂದು ರಘು ಆರೋಪಿಸಿದ್ದಾರೆ. 'ಶ್ರೀಮಂತರ ಮಕ್ಕಳಂತೆಯೇ ಎಲ್ಲಾ ಶಾಲಾ, ಕಾಲೇಜು ಮಕ್ಕಳೂ ಮಳೆ, ಚಳಿಯಿಂದ ರಕ್ಷಣೆ ಪಡೆಯಬೇಕು ಹಾಗೂ ಶಿಸ್ತಿನಿಂದ ಕಾಣಬೇಕು ಎಂಬ ಕಾರಣಕ್ಕೆ ಸ್ವೆಟರ್‌ ಯೋಜನೆ ರೂಪಿಸಲಾಗಿತ್ತು. ಆದರೆ ಅಧಿಕಾರಿಗಳ ಧನದಾಹದಿಂದ ಈ ಯೋಜನೆ ಹಳ್ಳ ಹಿಡಿದಿದೆ' ಎಂದು ಅವರು ಕಿಡಿ ಕಾರಿದ್ದಾರೆ. ಸ್ವೆಟರ್ ಖರೀದಿ ಯೋಜನೆಯಲ್ಲಿ ಭ್ರಷ್ಟಚಾರ ಎಸಗಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿ ತಮಟೆ ಚಳುವಳಿ ನಡೆಸಿದ ಕಾರ್ಯಕರ್ತರು, ಸ್ಥಳದಲ್ಲೇ ಸ್ವೆಟರ್‌ಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡರು.