ಭೌತಿಕ ಕೃಷಿ ಮೇಳ ನಡೆಸಲು ಬೆಂಗಳೂರು ಕೃಷಿ ವಿವಿ ಸಜ್ಜು: ಮೇಳಕ್ಕೆಂದೇ ಹೊಸ ತಳಿಗಳ ಅಭಿವೃದ್ಧಿ..!

ಕೃಷಿ ಮೇಳ ನೋಡುವುದೇ ಒಂದು ರೀತಿಯ ಹಬ್ಬ. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಹೈನುಗಾರಿಕೆ ಹೀಗೆ ಕೃಷಿಯಲ್ಲಿನ ನಾನಾ ಆವಿಷ್ಕಾರಗಳು ಮೇಳದಲ್ಲಿ ಒಂದೇ ವೇದಿಕೆಯಲ್ಲಿ ರಾರಾಜಿಸುತ್ತವೆ.

ಭೌತಿಕ ಕೃಷಿ ಮೇಳ ನಡೆಸಲು ಬೆಂಗಳೂರು ಕೃಷಿ ವಿವಿ ಸಜ್ಜು: ಮೇಳಕ್ಕೆಂದೇ ಹೊಸ ತಳಿಗಳ ಅಭಿವೃದ್ಧಿ..!
Linkup
: ಬೆಂಗಳೂರು ವಿವಿಯು ಅಕ್ಟೋಬರ್‌ ಕೊನೆಯ ವಾರದಲ್ಲಿ ಭೌತಿಕವಾಗಿ ನಡೆಸಲು ಚಿಂತನೆ ನಡೆಸಿದೆ. ಕೋವಿಡ್‌ ಪ್ರಮಾಣ ಇಳಿಕೆಯಾಗಿರುವುದರಿಂದ ವರ್ಚುಯಲ್‌ ಮೇಳದ ಜತೆಗೆ ಈ ಬಾರಿ ಭೌತಿಕವಾಗಿಯೂ ಮೇಳ ನಡೆಸಲಾಗುವುದು. ಕೃಷಿಗೆ ಪೂರಕವಾದ ತಂತ್ರಜ್ಞಾನಗಳಿಗೆ ಈ ಬಾರಿ ಹೆಚ್ಚು ಒತ್ತು ನೀಡಲು ವಿವಿ ನಿರ್ಧರಿಸಿದೆ. ರಾಜ್ಯಾದ್ಯಂತ ಲಕ್ಷಾಂತರ ಮಂದಿ ರೈತರು ಮತ್ತು ರೈತಾಸಕ್ತರನ್ನು ಸೆಳೆಯುವ ಮೇಳ ಇದಾಗಿದೆ. ಸಾಮಾನ್ಯವಾಗಿ ಐದು ದಿನಗಳ ಕಾಲ ಕೃಷಿ ಮೇಳ ನಡೆಯುತ್ತಿತ್ತು. ಈ ಎಲ್ಲಾ ದಿನಗಳಲ್ಲೂ ರಾಜ್ಯದ ಎಲ್ಲಾ ಭಾಗಗಳಿಂದ ರೈತರು, ಕೃಷಿ ಆಸಕ್ತರು, ಉದ್ಯಮಿಗಳು, ಮಾರಾಟಗಾರರು, ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಮಂದಿ ಮೇಳವನ್ನು ವೀಕ್ಷಿಸುತ್ತಿದ್ದರು. ಮಾಹಿತಿ ತಿಳಿಯಲು ಹಾಗೂ ಖರೀದಿಗೆ ಪೂರಕವಾಗಿರುವಂತಹ ವಿಶಿಷ್ಟ ಮೇಳ ಇದು. ಆದರೆ ಕೋವಿಡ್‌ನ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ವರ್ಷ ಆನ್‌ಲೈನ್‌ನಲ್ಲಿ ಮೇಳವನ್ನು ನಡೆಸಲಾಗಿತ್ತು. ಈ ಬಾರಿ ಭೌತಿಕವಾಗಿ ಮೇಳ ನಡೆಸುವ ಅಭಿಲಾಷೆಯನ್ನು ಹೊಂದಲಾಗಿದೆ. 'ಅಕ್ಟೋಬರ್‌ ಕೊನೆಗೆ ಇಲ್ಲವೇ ನವೆಂಬರ್‌ ಮೊದಲ ವಾರದಲ್ಲಿ ಮೇಳ ನಡೆಸುತ್ತೇವೆ. ಇದೀಗ ಸೆಪ್ಟೆಂಬರ್‌ 21ರಂದು ಬೆಂಗಳೂರು ಕೃಷಿ ವಿವಿಯ 55ನೇ ಘಟಿಕೋತ್ಸವ ನಡೆಯಲಿದೆ. ಅದರ ತಯಾರಿಯಲ್ಲಿದ್ದೇವೆ. ಅದು ಮುಗಿದ ಕೂಡಲೇ ಮೇಳದ ಬಾಕಿಯಿರುವ ಕೆಲಸಗಳು ಆರಂಭವಾಗಲಿವೆ. ಈಗಾಗಲೇ ಮೇಳಕ್ಕಾಗಿ ಭತ್ತದ ತಳಿಗಳು, ರಾಗಿ, ನವಣೆ, ಸಾಮೆ, ಬರಗು, ಬೀಜದ ದಂಟು, ಮೇವಿನ ಗೋ ತಳಿ.. ಹೀಗೆ ಹಲವು ಹೊಸ ತಳಿಯ ಬೆಳೆಗಳನ್ನು ಬೆಳೆಸಲಾಗಿದೆ' ಎಂದು ಕುಲಪತಿ ಡಾ. ಎಸ್‌. ರಾಜೇಂದ್ರ ಪ್ರಸಾದ್‌ ತಿಳಿಸಿದರು. ಕೃಷಿ ಮೇಳ ನೋಡುವುದೇ ಒಂದು ರೀತಿಯ ಹಬ್ಬ. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಹೈನುಗಾರಿಕೆ ಹೀಗೆ ಕೃಷಿಯಲ್ಲಿನ ನಾನಾ ಆವಿಷ್ಕಾರಗಳು ಒಂದೇ ವೇದಿಕೆಯಲ್ಲಿ ರಾರಾಜಿಸುತ್ತವೆ. ಕೋವಿಡ್‌ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಮೇಳಕ್ಕೆ ಬರಲಾಗದವರು ತಾವು ಇರುವಲ್ಲಿಂದಲೇ ವೀಕ್ಷಣೆಗೆ ಅನುಕೂಲವಾಗುವಂತೆ ಆನ್‌ಲೈನ್‌ನಲ್ಲೂ ಮೇಳದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು. 'ಈ ಬಾರಿಯ ಕೃಷಿ ಮೇಳದಲ್ಲಿ ಬಿಡುಗಡೆ ಮಾಡಲು ಎಂಟರಿಂದ ಹತ್ತು ಹೊಸ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳ ಪ್ರಾತ್ಯಕ್ಷಿಕೆಗಳಿಗಾಗಿ ಸಿದ್ಧತೆ ಮಾಡಲಾಗಿದೆ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಬೇಸಾಯ ಪದ್ಧತಿಯ 28 ಹೊಸ ತಾಂತ್ರಿಕತೆಗಳನ್ನೂ ಪರಿಚಯಿಸಲಾಗುವುದು. ಇದರ ಜತೆಗೆ ಎಂದಿನಂತೆ ಪ್ರದರ್ಶನ ಮಳಿಗೆಗಳಿರುತ್ತವೆ. ನಾನಾ ಸರಕಾರಿ ಮತ್ತು ಖಾಸಗಿ ಇಲಾಖೆಗಳ ಮಳಿಗೆಗಳಿರುತ್ತವೆ. ನಿಖರ ಬೇಸಾಯ ಪದ್ಧತಿಗೆ ಹೆಚ್ಚು ಒತ್ತು ನೀಡಲಾಗುವುದು' ಎಂದು ಕುಲಪತಿಗಳು ನುಡಿದರು. ಮೇಳದಲ್ಲಿ ಪರಿಚಯವಾಗಲಿರುವ ಹೊಸ ತಳಿಗಳು ಈ ಹಿಂದೆ ಅಭಿವೃದ್ಧಿಪಡಿಸಿದ ತಳಿಗಳಿಗಿಂತ ಶೇ.10ರಷ್ಟು ಹೆಚ್ಚು ಇಳುವರಿ ನೀಡುವ ಸಾಮರ್ಥ್ಯ ಹೊಂದಿರುವ, ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ನಾನಾ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪೈಕಿ ಹೆಚ್ಚು ಇಳುವರಿ ಮತ್ತು ಬೆಂಕಿ ರೋಗ ನಿರೋಧಕ ಶಕ್ತಿಯುಳ್ಳ ಭತ್ತದ ಎರಡು ತಳಿಗಳು, ಬುಡ ಕೊಳೆ ರೋಗ ನಿರೋಧಕ ಹೊಂದಿರುವ ರಾಗಿ, ತುಕ್ಕು ಮತ್ತು ಎಲೆ ಅಂಗಮಾರಿ ರೋಗಗಳಿಂದ ಪಾರಾಗಬಲ್ಲ ನವಣೆ, ಕಂದು ಚುಕ್ಕೆ ರೋಗ ತಡೆಯಬಲ್ಲ ಸಾಮೆ ಮತ್ತು ಬರಗು ತಳಿಗಳು, ಗೋಳಾಕಾರದಿಂದ ಕೂಡಿರುವ ಹೂ ಗೊಂಚಲುಗಳ ಬೀಜದ ದಂಟು, ಮೇವಿಗಾಗಿ ತೋಕೆ ಗೋ, ಸ್ವಯಂ ಗರಿ ಕಳಚುವುದರ ಜತೆಗೆ ರುಚಿಕರವಾದ ಬೆಲ್ಲ ತಯಾರಿಕೆಗೆ ಯೋಗ್ಯವಾದ ಕಬ್ಬು, ಕಡಿಮೆ ಅಂಟು ಪ್ರಮಾಣ ಮತ್ತು ಹೆಚ್ಚು ಸಕ್ಕರೆ ಅಂಶ ಹೊಂದಿರುವ 'ಬೈರಚಂದ್ರ' ಎಂಬ ಹಲಸು ಹೀಗೆ ಹತ್ತಾರು ಹೊಸ ಬೆಳೆಗಳ ತಳಿಗಳು ಮೇಳಕ್ಕಾಗಿ ಸಜ್ಜಾಗಿವೆ.