ಬೆಂಗಳೂರಿನಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಕುಸಿತ; ನಿವಾಸಿಗಳು ಕೂದಲೆಳೆ ಅಂತರದಲ್ಲಿ ಪಾರು!

ಕಳೆದ ವರ್ಷ ಕಟ್ಟಡದ ಮೇಲೆ ಡ್ಯುಪ್ಲೆಕ್ಸ್‌ ಮನೆಗಳ ನಿರ್ಮಾಣ ಆರಂಭಿಸಲಾಗಿತ್ತು. ಅಕ್ರಮವಾಗಿ ಕಟ್ಟಡ ಕಟ್ಟುತ್ತಿರುವುದನ್ನು ಆಕ್ಷೇಪಿಸಿ ಫ್ಲ್ಯಾಟ್‌ನ ನಿವಾಸಿಗಳು ಭೂಮಾಲೀಕ ಹಾಗೂ ಬಿಲ್ಡರ್‌ ವಿರುದ್ಧ ಪಾಲಿಕೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗೆ ಕಳೆದ ವರ್ಷ ಮಾರ್ಚ್ ನಲ್ಲಿ ದೂರು ನೀಡಿದ್ದರು. ಆದರೆ, ಅಧಿಕಾರಿಗಳು ಮೌನ ವಹಿಸಿದ್ದರು.

ಬೆಂಗಳೂರಿನಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಕುಸಿತ; ನಿವಾಸಿಗಳು ಕೂದಲೆಳೆ ಅಂತರದಲ್ಲಿ ಪಾರು!
Linkup
ಕೆ.ಆರ್‌.ಪುರ: ನಗರದಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಕುಸಿದಿದ್ದು, ಕೂದಲೆಳೆ ಅಂತರದಲ್ಲಿ ನಿವಾಸಿಗಳು ಪಾರಾಗಿದ್ದಾರೆ. ರಾಮಮೂರ್ತಿನಗರ ವಾರ್ಡ್‌ನ ಕಸ್ತೂರಿನಗರದ ಡಾಕ್ಟರ್ಸ್‌ ಲೇಔಟ್‌ನಲ್ಲಿ ನಾಲ್ಕಂತಸ್ತಿನ ಸನ್‌ಶೈನ್‌ ಅಪಾರ್ಟ್‌ಮೆಂಟ್‌ ಕಟ್ಟಡ ಕುಸಿದು ಬಿದ್ದಿದೆ. ಗುರುವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕಟ್ಟಡ ಕುಸಿದಿದೆ. ಕಟ್ಟಡದಲ್ಲಿದ್ದ ಮೂವರು ತಕ್ಷಣ ಹೊರ ಬಂದು ಬಚಾವಾಗಿದ್ದಾರೆ. ಕಟ್ಟಡದಲ್ಲಿ8 ಫ್ಲ್ಯಾಟ್‌ಗಳಿದ್ದು, ಮೂರರಲ್ಲಿ ಮಾತ್ರ ಜನರು ವಾಸವಿದ್ದರು. ಎಲ್ಲ ಮನೆಗಳನ್ನು ಬಾಡಿಗೆಗೆ ಕೊಡಲಾಗಿತ್ತು. ಹೆಚ್ಚಿನವರು ಕಚೇರಿ, ಕೆಲಸ ನಿಮಿತ್ತ ಹೊರ ಹೋಗಿದ್ದರು. ಗುರುವಾರ ಮಧ್ಯಾಹ್ನ ತಳಮಹಡಿಯಲ್ಲಿ ಕುಸಿತದ ಶಬ್ದ ಕೇಳಿ ಬಂದಿದೆ. ತಕ್ಷಣ ಕಟ್ಟಡದಲ್ಲಿದ್ದ ಮೂವರು ಕೆಳಗೆ ಇಳಿದು ಬಂದಿದ್ದಾರೆ. ''ಜೋರಾದ ಶಬ್ದ ಕೇಳಿ ಬಂತು. ತಕ್ಷಣ ಕೆಳಕ್ಕೆ ಓಡಿ ಬಂದೆ. ಏನಾಯಿತು ಎಂದು ನೋಡುವಷ್ಟರಲ್ಲಿ ಕಟ್ಟಡ ಕುಸಿದಿತ್ತು,'' ಎಂದು ನಿವಾಸಿಯೊಬ್ಬರು ತಿಳಿಸಿದರು. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿದ್ದು, ಪರಿಹಾರ ಕಾರ್ಯಾಚರಣೆ ಕೈಗೊಂಡಿತು. ಮನೆಯಲ್ಲಿ ಸಿಲುಕಿದ್ದ ನಾಯಿಯೊಂದನ್ನು ಸುರಕ್ಷಿತವಾಗಿ ಹೊರತರಲಾಯಿತು. ಅಕ್ರಮವಾಗಿ ಡ್ಯುಪ್ಲೆಕ್ಸ್‌ ಫ್ಲ್ಯಾಟ್‌ ಎ.ಎನ್‌. ಬಿಲ್ಡರ್ಸ್ ಎಂಬ ಸಂಸ್ಥೆ 2014ರಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಿತ್ತು. ತಳಮಹಡಿ ಹಾಗೂ ಎರಡು ಮಹಡಿ (ಜಿ+2)ಗೆ ಅನುಮತಿ ಪಡೆದು ಮೂರು ಮಹಡಿ (ಜಿ+3)ಯ ಕಟ್ಟಡ ನಿರ್ಮಿಸಲಾಗಿತ್ತು. ನಿರ್ಮಿಸುವ ಹಂತದಲ್ಲೇ ಒಂದು ಮಹಡಿಯನ್ನು ಹೆಚ್ಚುವರಿಯಾಗಿ ಕಟ್ಟುವ ಮೂಲಕ ಅಕ್ರಮವೆಸಗಲಾಗಿತ್ತು. ಕಟ್ಟಡ ಪೂರ್ಣಗೊಂಡ ಬಗ್ಗೆ, ನಿವಾಸಿಗಳಿಗೆ ಹಸ್ತಾಂತರಿಸಿದ ಸಂಬಂಧ ಸಿಸಿ ಹಾಗೂ ಒಸಿಯನ್ನು ಪಡೆದಿರಲಿಲ್ಲ. ಕಳೆದ ವರ್ಷ ಕಟ್ಟಡದ ಮೇಲೆ ಡ್ಯುಪ್ಲೆಕ್ಸ್‌ ಮನೆಗಳ ನಿರ್ಮಾಣ ಆರಂಭಿಸಲಾಗಿತ್ತು. ಅಕ್ರಮವಾಗಿ ಕಟ್ಟಡ ಕಟ್ಟುತ್ತಿರುವುದನ್ನು ಆಕ್ಷೇಪಿಸಿ ಫ್ಲ್ಯಾಟ್‌ನ ನಿವಾಸಿಗಳು ಭೂಮಾಲೀಕ ಹಾಗೂ ಬಿಲ್ಡರ್‌ ವಿರುದ್ಧ ಪಾಲಿಕೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗೆ ಕಳೆದ ವರ್ಷ ಮಾರ್ಚ್ ನಲ್ಲಿ ದೂರು ನೀಡಿದ್ದರು. ಆದರೆ, ಅಧಿಕಾರಿಗಳು ಮೌನ ವಹಿಸಿದ್ದರು. ಕಳಪೆ ಕಾಮಗಾರಿ ಜತೆಗೆ ಹೆಚ್ಚುವರಿ ಕಟ್ಟಡ ಕಟ್ಟಿದ್ದು ಕಟ್ಟಡ ಕುಸಿಯಲು ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಠಾಣೆಗೆ ದೂರು ಕಳಪೆ ಸಾಮಗ್ರಿ ಬಳಸಿ ಕಾಮಗಾರಿ ಕೈಗೊಂಡಿರುವುದು ಹಾಗೂ ನಿರ್ಲಕ್ಷ್ಯದ ವಿರುದ್ಧ ಆಯೇಷಾ ಬೇಗ್‌, ಮೊಹಮ್ಮದ್‌ ಆಸೀಫ್‌, ಮೊಹಮ್ಮದ್‌ ಇಯಾಸುದ್ದೀನ್‌ ಎಂಬುವವರ ವಿರುದ್ಧ ಪಾಲಿಕೆ ಅಧಿಕಾರಿಗಳು ರಾಮಮೂರ್ತಿನಗರ ಠಾಣೆಗೆ ದೂರು ನೀಡಿದ್ದಾರೆ. ಎಲ್ಲ ಮನೆಗಳು ಬಾಡಿಗೆಗೆ 40*60 ಜಾಗದಲ್ಲಿಅಪಾರ್ಟ್‌ಮೆಂಟ್‌ ನಿರ್ಮಿಸಲಾಗಿತ್ತು. 2 ಬೆಡ್‌ರೂಂಗಳ 8 ಫ್ಲ್ಯಾಟ್‌ ನಿರ್ಮಿಸಲಾಗಿತ್ತು. ನಾಲ್ಕು ಫ್ಲ್ಯಾಟ್‌ ಆಯೇಷಾ ಬೇಗ್‌ ಎಂಬುವರ ಹೆಸರಿನಲ್ಲಿವೆ. ನಾಲ್ಕು ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಫ್ಲ್ಯಾಟ್‌ಗಳನ್ನು ಖರೀದಿಸಿದ ಮಾಲೀಕರಲ್ಲಿ ಯಾರೊಬ್ಬರೂ ಇಲ್ಲಿ ವಾಸವಿರಲಿಲ್ಲ. ಮೂರು ಫ್ಲ್ಯಾಟ್‌ಗಳನ್ನು ಬಾಡಿಗೆ ಕೊಡಲಾಗಿತ್ತು. ಫ್ಲ್ಯಾಟ್‌ಗಳಿಗೆ 1 ಲಕ್ಷ ಠೇವಣಿ ಕೊಡುವ ಜತೆಗೆ 22 ಸಾವಿರ ರೂ. ಬಾಡಿಗೆ ಕೊಡುತ್ತಿದ್ದೆವು ಎಂದು ಬಾಡಿಗೆಗೆ ಇದ್ದ ನಿವಾಸಿಗಳು ತಿಳಿಸಿದ್ದಾರೆ. ಕೆಲಸಕ್ಕೆ ತೆರಳಿದ್ದವರು ಓಡೋಡಿ ಬಂದರು ಕಟ್ಟಡ ಕುಸಿತದ ಮಾಹಿತಿ ತಿಳಿಯುತ್ತಿದ್ದಂತೆ ಬಾಡಿಗೆಗೆ ಇದ್ದವರು ಆತಂಕದಲ್ಲಿ ಕೆಲಸ ಬಿಟ್ಟು ಓಡೋಡಿ ಬಂದಿದ್ದರು. ಮನೆಯ ಸಾಮಗ್ರಿಗಳು ಫ್ಲ್ಯಾಟ್‌ನಲ್ಲೇ ಇದ್ದು, ಸುಸ್ಥಿತಿಯಲ್ಲಿ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ಇದ್ದಾರೆ. ಮನೆಯ ಸಾಮಗ್ರಿಗಳನ್ನು ಸುರಕ್ಷಿತವಾಗಿ ಒದಗಿಸುವಂತೆ ನಿವಾಸಿಗಳು, ಪಾಲಿಕೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯಲ್ಲಿ ಮನವಿ ಮಾಡಿದರು. ಬಿಲ್ಡರ್‌, ಅಧಿಕಾರಿಗಳ ವಿರುದ್ಧ ಕ್ರಮ ನಕ್ಷೆ ಮಂಜೂರಾತಿಗೆ ವಿರುದ್ಧವಾಗಿ ಕಟ್ಟಡ ನಿರ್ಮಿಸಿರುವ ಮಾಲೀಕರು, ಬಿಲ್ಡರ್‌ ಹಾಗೂ ಇದಕ್ಕೆ ಸಹಕರಿಸಿದ ಪಾಲಿಕೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು. ಕಟ್ಟಡ ಕುಸಿತದ ಸ್ಥಳಕ್ಕೆ ಗುರುವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕಟ್ಟಡದಲ್ಲಿ 8 ಫ್ಲ್ಯಾಟ್‌ಗಳಿವೆ. ಪೆಂಟ್‌ ಹೌಸ್‌ ನಿರ್ಮಾಣಕ್ಕೂ ಸಿದ್ಧತೆ ಮಾಡಿಕೊಂಡಿದ್ದರು. ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಮಹಡಿಗಳನ್ನು ಅಕ್ರಮವಾಗಿ ಕಟ್ಟಿರುವುದರಿಂದಲೇ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆದಿಲ್ಲ. ಮಣ್ಣಿನ ಗುಣಮಟ್ಟ ಪರಿಶೀಲಿಸಿ, ವಿನ್ಯಾಸಕ್ಕೆ ತಕ್ಕಂತೆ ಕಟ್ಟಡ ನಿರ್ಮಿಸದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಟ್ಟಡ ಮಾಲೀಕರು, ಬಿಲ್ಡರ್‌ಗಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಟ್ಟಡ ಕುಸಿತದ ಕುರಿತು ಕೂಲಂಕಷ ತನಿಖೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು,'' ಎಂದು ಹೇಳಿದರು. ''ಕುಸಿದಿರುವ ಕಟ್ಟಡದ ಅಕ್ಕಪಕ್ಕದಲ್ಲಿನ ತಲಾ ಎರಡು ಕಟ್ಟಡಗಳಲ್ಲಿ ವಾಸವಿದ್ದ ಜನರನ್ನೂ ಖಾಲಿ ಮಾಡಿಸಲಾಗಿದೆ. ಕಟ್ಟಡವನ್ನು ನೆಲಸಮಗೊಳಿಸಿ, ಶುಕ್ರವಾರ ಸಂಜೆ ವೇಳೆಗೆ ಅವಶೇಷಗಳನ್ನು ತೆರವುಗೊಳಿಸಲಾಗುವುದು,'' ಎಂದರು. 15 ದಿನದ ಅವಧಿಯಲ್ಲಿ ಮೂರನೇ ಘಟನೆ ನಗರದಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣದ ಬಗ್ಗೆ ಸಮರ್ಪಕ ನಿಗಾ ಇಲ್ಲದ ಕಾರಣ ಕಟ್ಟಡಗಳು ಕುಸಿದು ಬೀಳುವ ಘಟನೆಗಳು ಒಂದಾದ ಮೇಲೊಂದರಂತೆ ನಡೆಯುತ್ತಿವೆ. 15 ದಿನಗಳ ಅಂತರದಲ್ಲಿ ಮೂರು ಘಟನೆಗಳು ನಡೆದಿವೆ. ಸೆ.28, 2021 ಕೆಎಂಎಫ್‌ ಆವರಣದಲ್ಲಿ ಬಮೂಲ್‌ ನೌಕರರ ವಾಸಕ್ಕಾಗಿ ನಿರ್ಮಿಸಿದ ಮೂರು ಅಂತಸ್ತಿನ ಕಟ್ಟಡ ನೆಲದೊಳಕ್ಕೆ ಕುಸಿದಿತ್ತು. ಕಟ್ಟಡದ ಒಂದು ಭಾಗ ಕುಸಿಯುವುದನ್ನು ಗಮನಿಸಿ ಉಳಿದವರು ಹೊರಗೆ ಬಂದಿದ್ದರು. ನಾಲ್ವರಿಗೆ ಗಾಯಗಳಾಗಿತ್ತು. ಸೆ.27, 2021 ವಿಲ್ಸನ್‌ ಗಾರ್ಡನ್‌ನ ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ಇದ್ದಕ್ಕಿದ್ದಂತೆ ಕುಸಿದು ಬಿದ್ದಿತ್ತು. ಕಟ್ಟಡದಲ್ಲಿ ನೆಲಸಿದ್ದ ಮೆಟ್ರೊ ಕೆಲಸಗಾರರು ಕೂದಲೆಳೆಯ ಅಂತರದಿಂದ ಪಾರಾಗಿದ್ದರು.