'ರೇರಾ' ಜಾರಿಯಾಗಿ 5 ವರ್ಷವಾದರೂ ನ್ಯಾಯ ಮರೀಚಿಕೆ: ನ್ಯೂನತೆ ಬಿಡಿಸಿಟ್ಟ ಗೃಹ ಖರೀದಿದಾರರು..!

ಮೊದಲಿಗೆ 'ರೇರಾ' ಪ್ರಾಧಿಕಾರ ತನ್ನ ಚಟುವಟಿಕೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುತ್ತಿಲ್ಲ. 'ರೇರಾ' ವೆಬ್‌ ಪುಟದಲ್ಲಿ ಸಾಕಷ್ಟು ಮಾಹಿತಿ ನೀಡುತ್ತಿಲ್ಲ. ಹಲವು ಮಾಹಿತಿ ಅಪ್‌ಡೇಟ್‌ ಆಗುವುದೇ ಇಲ್ಲ ಮತ್ತು ಅದಕ್ಕಿಂತ ಮುಖ್ಯವಾಗಿ ಸಾಕಷ್ಟು ಮಾಹಿತಿ ವಾಸ್ತವಕ್ಕೆ ದೂರವಾಗಿರುತ್ತವೆ.

'ರೇರಾ' ಜಾರಿಯಾಗಿ 5 ವರ್ಷವಾದರೂ ನ್ಯಾಯ ಮರೀಚಿಕೆ: ನ್ಯೂನತೆ ಬಿಡಿಸಿಟ್ಟ ಗೃಹ ಖರೀದಿದಾರರು..!
Linkup
: ಗೃಹ ಖರೀದಿದಾರರ ಹಿತ ಕಾಯುವ ದೃಷ್ಟಿಯಿಂದ ರೂಪಿಸಲಾದ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ () ಕಾಯಿದೆ ಜಾರಿಯಾಗಿ ಶನಿವಾರಕ್ಕೆ ಐದು ವರ್ಷಗಳು ಪೂರ್ಣಗೊಂಡಿವೆ. ಆದರೆ, ಅದರ ಜಾರಿಯಲ್ಲಿ ಹಲವು ನ್ಯೂನತೆಗಳಿರುವುದರಿಂದ ಗೃಹ ಖರೀದಿದಾರರಿಗೆ ನ್ಯಾಯ ನಿಜಕ್ಕೂ ಮರೀಚಿಕೆಯಾಗಿದೆ. ಪ್ರಾಧಿಕಾರ ಕಾಯಿದೆಯಡಿ ಲಭ್ಯವಿರುವ ತನ್ನ ಅಧಿಕಾರವನ್ನು ಚಲಾವಣೆ ಮಾಡುತ್ತಿಲ್ಲ. ಹಾಗಾಗಿ, ಬಿಲ್ಡರ್‌ಗಳು ಮೊದಲಿನಂತೆ ನಿಯಮ ಉಲ್ಲಂಘನೆ ಮುಂದುವರಿಸಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಪಾರದರ್ಶಕತೆ ಇಲ್ಲವಾಗಿದೆ ಎಂದು ಕರ್ನಾಟಕದಲ್ಲಿ 'ರೇರಾ' ಪರಿಣಾಮಕಾರಿ ಜಾರಿಗೆ ಹೋರಾಟ ನಡೆಸುತ್ತಿರುವ ಫೋರಂ ಫಾರ್‌ ಪೀಪಲ್ಸ್‌ ಕಲೆಕ್ಟಿವ್‌ ಎಫರ್ಟ್ಸ್ (ಎಫ್‌ಪಿಸಿಇ) ಹೇಳಿದೆ. 'ರೇರಾ' ಕಾಯಿದೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಕರ್ನಾಟಕದಲ್ಲಿ ಏನೇನು ಆಗಿದೆ ಎಂಬ ಕುರಿತು ವಿವರವಾದ ಪತ್ರವನ್ನು ಬಿಡುಗಡೆ ಮಾಡಿರುವ ಗೃಹ ಖರೀದಿದಾರರ ಸಂಘಟನೆ, ಏನೆಲ್ಲಾ ನ್ಯೂನತೆಗಳಿವೆ, ಅವುಗಳಿಗೆ ಕಾಯಿದೆಯಲ್ಲಿರುವ ಪರಿಹಾರಗಳು, ಪ್ರಾಧಿಕಾರಕ್ಕಿರುವ ಅಧಿಕಾರ ಬಳಸಿ ಹೇಗೆ ಗೃಹ ಖರೀದಿದಾರರ ನೆರವಿಗೆ ಧಾವಿಸಬಹುದು ಎಂಬುದನ್ನು ತಿಳಿಸಿದೆ. 'ಕಳೆದ ಐದು ವರ್ಷಗಳಿಂದ ನಿರಂತರವಾಗಿ 'ರೇರಾ' ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹೋರಾಟ ನಡೆಸುತ್ತಿದ್ದೇವೆ, ಏನೂ ಪ್ರಯೋಜನವಾಗಿಲ್ಲ. ಪ್ರಾಧಿಕಾರ ಬಿಲ್ಡರ್‌ ಪರ ವಹಿಸುತ್ತದೆಯೇ ಹೊರತು ಗೃಹ ಖರೀದಿದಾರರ ಪರ ನಿಲ್ಲುತ್ತಿಲ್ಲ. ಹಾಗಾಗಿ, ಕಾಯಿದೆ ಜಾರಿಯಲ್ಲಿನ ವೈಫಲ್ಯಗಳ ಕುರಿತು ಮುಖ್ಯಮಂತ್ರಿ, ವಸತಿ ಸಚಿವರು, ಕಾರ್ಯದರ್ಶಿ, ಪ್ರಾಧಿಕಾರದ ಅಧ್ಯಕ್ಷರಿಗೆ ವಿವರವಾದ ಮನವಿ ಸಲ್ಲಿಸಲಾಗಿದೆ' ಎಂದು ಎಫ್‌ಪಿಸಿಇ ಪ್ರಧಾನ ಕಾರ‍್ಯದರ್ಶಿ ಎಂ.ಎಸ್‌. ಶಂಕರ್‌ ತಿಳಿಸಿದ್ದಾರೆ. ಪಾರದರ್ಶಕತೆಗಿಲ್ಲ ಒತ್ತು: ಮೊದಲಿಗೆ 'ರೇರಾ' ಪ್ರಾಧಿಕಾರ ತನ್ನ ಚಟುವಟಿಕೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುತ್ತಿಲ್ಲ. 'ರೇರಾ' ವೆಬ್‌ ಪುಟದಲ್ಲಿ ಸಾಕಷ್ಟು ಮಾಹಿತಿ ನೀಡುತ್ತಿಲ್ಲ. ಹಲವು ಮಾಹಿತಿ ಅಪ್‌ಡೇಟ್‌ ಆಗುವುದೇ ಇಲ್ಲ ಮತ್ತು ಅದಕ್ಕಿಂತ ಮುಖ್ಯವಾಗಿ ಸಾಕಷ್ಟು ಮಾಹಿತಿ ವಾಸ್ತವಕ್ಕೆ ದೂರವಾಗಿರುತ್ತವೆ. 'ರೇರಾ' ಕಾಯಿದೆ ಸೆಕ್ಷನ್‌ 34(ಸಿ) ಪ್ರಕಾರ, ಪ್ರಾಧಿಕಾರದ ಪ್ರತಿಯೊಂದು ಚಟುವಟಿಕೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಬೇಕಾಗಿದೆ. ಆದರೆ, ಈ ಕೆಲಸ ಆಗುತ್ತಿಲ್ಲ, ಈ ಬಗ್ಗೆ ಹಲವು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. 17 ಕೋಟಿ ರೂ. ರಿವಕರಿ: ನಿಯಮ ಪಾಲನೆ ಮಾಡದ ಬಿಲ್ಡರ್‌ಗಳ ವಿರುದ್ಧ ರೇರಾ ಪ್ರಾಧಿಕಾರ ದಂಡ ವಿಧಿಸುತ್ತಿದೆಯಾದರೂ ಅದನ್ನು ವಸೂಲು ಮಾಡಲು ಗಂಭೀರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಈವರೆಗೆ 524 ಪ್ರಕರಣಗಳಲ್ಲಿ 218 ಕೋಟಿ ರೂ. ದಂಡ ವಸೂಲಿಗೆ ಆದೇಶವಾಗಿದೆ. ಆ ಬೃಹತ್‌ ಮೊತ್ತ ವಸೂಲು ಮಾಡಲು ರಿಕವರಿ ಸರ್ಟಿಫಿಕೇಟ್‌ಗಳನ್ನು ಹೊರಡಿಸಲಾಗಿದೆ. ಆದರೆ ಅದು ಜಾರಿಯಾಗಿಲ್ಲ. ಈವರೆಗೆ ಸುಮಾರು 232 ಪ್ರಕರಣಗಳಲ್ಲಿ 17.66 ಕೋಟಿ ರೂ. ಮಾತ್ರ ವಸೂಲಾಗಿದೆ. ದಂಡ ಪಾವತಿಸದ ಬಿಲ್ಡರ್‌ಗಳ ವಿರುದ್ಧ ಸೆಕ್ಷನ್‌ 63 ಮತ್ತು 64ರಡಿ ಕಠಿಣ ಕ್ರಮಗಳನ್ನು ಜರುಗಿಸಲು ಪ್ರಾಧಿಕಾರಕ್ಕೆ ಅಧಿಕಾರವಿದ್ದರೂ ಅದು ಚಲಾವಣೆ ಮಾಡುತ್ತಿಲ್ಲ. 10 ರಷ್ಟು ವಸತಿ ಯೋಜನೆ ಪೂರ್ಣ: ಕಳೆದ ಐದು ವರ್ಷಗಳಲ್ಲಿ 'ರೇರಾ'ದಲ್ಲಿ ನೋಂದಾಯಿಸಿರುವ ಶೇ.10ರಷ್ಟು ವಸತಿ ಯೋಜನೆಗಳು ಪೂರ್ಣಗೊಂಡಿಲ್ಲ. ವಸತಿ ಯೋಜನೆಗಳು ಸಾಕಷ್ಟು ವಿಳಂಬವಾಗುತ್ತಿದ್ದರೂ ರೇರಾ ಅವುಗಳ ಕೊನೆಯ ದಿನಾಂಕವನ್ನು ವಿಸ್ತರಿಸುತ್ತಲೇ ಹೋಗುತ್ತಿದೆ. 'ರೇರಾ' ಬಿಲ್ಡರ್‌ಗಳ ಒತ್ತಡಕ್ಕೆ ಮಣಿದು ವಸತಿ ಯೋಜನೆಗಳ ಗಡುವನ್ನು ವಿಸ್ತರಣೆ ಮಾಡುತ್ತಲೇ ಇರುವುದರಿಂದ ಬ್ಯಾಂಕುಗಳಿಂದ ಸಾಲ ಪಡೆದಿರುವ ಗೃಹ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸುಮಾರು 1,044 ವಸತಿ ಯೋಜನೆಗಳು ನೋಂದಾಯಿಸಿಲ್ಲವಾದರೂ 'ರೇರಾ' ಅವುಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿಲ್ಲ. ಹಲವು ವಸತಿ ಯೋಜನೆಗಳು 'ರೇರಾ'ದಲ್ಲಿ ನೋಂದಣಿ ಮಾಡಿಸಿಕೊಳ್ಳದೆ ಪೂರ್ಣಗೊಳ್ಳುತ್ತಿವೆ. ಪ್ರಾಧಿಕಾರ ಆ ಬಗ್ಗೆ ಗಂಭೀರ ಗಮನಹರಿಸುತ್ತಿಲ್ಲ ಎಂದು ಸಂಘಟನೆ ದೂರಿದೆ.