ಮುಂದಿನ ವಾರ ಮಾರುಕಟ್ಟೆಯಲ್ಲಿ ಮಾವಿನ ಸುಗ್ಗಿ..! ಆದರೆ ಬೆಳೆಗಾರರಿಗೆ ಮಾರುಕಟ್ಟೆ ಕೊರತೆ..

ಪ್ರತಿ ವರ್ಷ ಮಾವು ಮೇಳಗಳು ನಡೆಯುತ್ತಿದ್ದವು. ನಿಲ್ದಾಣಗಳಲ್ಲಿ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತಿತ್ತು. ಸಿಂಗೇನ ಅಗ್ರಹಾರ, ಬ್ಯಾಟರಾಯನಪುರ ಅಥವಾ ಇತರೆ ಜಾಗಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲವೂ ಕೊರೊನಾ ಮಯವಾಗಿದೆ.

ಮುಂದಿನ ವಾರ ಮಾರುಕಟ್ಟೆಯಲ್ಲಿ ಮಾವಿನ ಸುಗ್ಗಿ..! ಆದರೆ ಬೆಳೆಗಾರರಿಗೆ ಮಾರುಕಟ್ಟೆ ಕೊರತೆ..
Linkup
: ಹಣ್ಣುಗಳ ರಾಜ ಮುಂದಿನ ವಾರದಿಂದ ಕೋಲಾರ, ಚಿಕ್ಕಬಳ್ಳಾಪುರ ಮತ್ತಿತರ ಭಾಗಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಲಿದೆ. ಆದರೆ, ಮಾವು ಬೆಳೆದವರಿಗೆ ವ್ಯವಸ್ಥೆ ಇಲ್ಲದೆ ಆತಂಕದಲ್ಲಿದ್ದಾರೆ. ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕಾದ ತೋಟಗಾರಿಕೆ ಇಲಾಖೆಯಾಗಲಿ, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವಾಗಲಿ ಈವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈಗಾಗಲೇ ರಾಮನಗರ ಭಾಗದ ಮಾವು ಮಾರುಕಟ್ಟೆಗೆ ಬಂದು ಇನ್ನೇನು ಮುಗಿಯುವ ಹಂತದಲ್ಲಿದೆ. ಆದರೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಕಡಿಮೆ ಬೆಲೆಗೆ ಮಾರುವಂತಾಗಿದೆ. ರಾಜ್ಯಾದ್ಯಂತ 1.68 ಲಕ್ಷ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ವರ್ಷದ ಆರಂಭದಲ್ಲಿ ಮರಗಳಲ್ಲಿ ಹೂವು ಹೆಚ್ಚು ಬಿಟ್ಟಿದ್ದರೂ, ಹವಾಮಾನ ವೈಪರೀತ್ಯದಿಂದ ಬೆಳೆಗೆ ಸ್ವಲ್ಪ ಹೊಡೆತ ಬಿತ್ತು. ಆದರೂ 9-10 ಲಕ್ಷ ಟನ್‌ನಷ್ಟು ಮಾವು ಉತ್ಪಾದನೆಯ ನಿರೀಕ್ಷೆ ಹೊಂದಲಾಗಿದೆ. ಪ್ರತಿ ವರ್ಷ ಮಾವು ಮೇಳಗಳು ನಡೆಯುತ್ತಿದ್ದವು. ನಿಲ್ದಾಣಗಳಲ್ಲಿ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತಿತ್ತು. ಸಿಂಗೇನ ಅಗ್ರಹಾರ, ಬ್ಯಾಟರಾಯನಪುರ ಅಥವಾ ಇತರೆ ಜಾಗಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಇಲಾಖೆ, ನಿಗಮ ಕೋವಿಡ್‌ನಿಂದಾಗಿ ಮಾವು ಮಾರುಕಟ್ಟೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಂಚೆ ಮೂಲಕ 4.5 ಟನ್‌ ಮಾವು: ಅಂಚೆ ಇಲಾಖೆಯಿಂದ ಮಾವು ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಕಳೆದ 10 ದಿನಗಳಲ್ಲಿ 4.5 ಟನ್‌ ಮಾವು ಮಾರಾಟವಾಗಿದೆ. 'ಕೋಲಾರ ಭಾಗದ ಮಾವು ಮೇ ಮಧ್ಯದಲ್ಲಿ ಬರಲಿದೆ. ದೆಹಲಿ ಸೇರಿದಂತೆ ನಾನಾ ಕಡೆ ಮಾವು ಮೇಳಗಳನ್ನು ನಡೆಸುವ ಕುರಿತು ಆಲೋಚನೆ ಮಾಡಿದ್ದೆವು. ಆದರೆ, ಕೋವಿಡ್‌ನಿಂದ ಅದು ಸಾಧ್ಯವಾಗುತ್ತಿಲ್ಲ. ಉಳಿದಂತೆ ಮಾರಾಟಕ್ಕೆ ಯಾವ ವ್ಯವಸ್ಥೆ ಮಾಡಬೇಕೆಂಬುದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ' ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್‌ ತಿಳಿಸಿದ್ದಾರೆ.