ಹೊಸದಿಲ್ಲಿ: ದೇಶಾದ್ಯಂತ ಓಮಿಕ್ರಾನ್ ರೂಪಾಂತರಿಯಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದ್ದರೂ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಶೇ. 5-10ರಷ್ಟು ಇದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಹಾಗೆಯೇ, ಸೋಂಕಿತರ ಸಂಖ್ಯೆ ಇದೇ ಪ್ರಮಾಣದಲ್ಲಿ ಏರುಮುಖವಾಗಿದ್ದರೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
"ಕಳೆದ ವರ್ಷ ಕೊರೊನಾ ಎರಡನೇ ಅಲೆ ಉತ್ತುಂಗಕ್ಕೆ ಏರಿದ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಶೇ. 20-23ರಷ್ಟು ಇತ್ತು. ಆದರೆ, ಸದ್ಯ ದೇಶದಲ್ಲಿ ಇದರ ಪ್ರಮಾಣ ಶೇ.10ರವರೆಗೆ ಇದೆ. ಈ ಪ್ರಮಾಣವು ಯಾವಾಗ ಬೇಕಾದರೂ ಬದಲಾಗುವ ಸಾಧ್ಯತೆ ಇದೆ. ಹಾಗಾಗಿ ರಾಜ್ಯಗಳು ಮನೆಯಲ್ಲಿಯೇ ಪ್ರತ್ಯೇಕವಾಗಿರುವ ಹಾಗೂ ಆಸ್ಪತ್ರೆಗೆ ದಾಖಲಾದ ಸೋಂಕಿತರ ಸಂಖ್ಯೆ ಮೇಲೆ ನಿಗಾ ಇಡಬೇಕು,'' ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎರಡನೇ ಅಲೆಗಿಂತ ತೀವ್ರವಾಗಿ ಸೋಂಕಿತರ ಸಂಖ್ಯೆ ಜಾಸ್ತಿಯಾಗುವ ಕುರಿತು ಎಚ್ಚರಿಕೆ ನೀಡಿರುವ ಭೂಷಣ್, ಡೆಲ್ಟಾ ಹಾಗೂ ಓಮಿಕ್ರಾನ್ ಕುರಿತು ಎಚ್ಚರಿಸಿದ್ದಾರೆ. "ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ. ಡೆಲ್ಟಾ ರೂಪಾಂತರಿ ಇರುವಾಗಲೇ ಓಮಿಕ್ರಾನ್ ಪ್ರಸರಣ ಮತ್ತಷ್ಟು ವೇಗವಾಗಲಿದೆ. ಭವಿಷ್ಯದ ದಿನಗಳಲ್ಲಿ 100 ಡೆಲ್ಟಾ ಪ್ರಕರಣ ದಾಖಲಾದರೆ, ಓಮಿಕ್ರಾನ್ನ 400-500 ಕೇಸ್ಗಳು ದಾಖಲಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಮೇಲೆ ನಿಗಾ ಇಡುವ ಜತೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಹಾಗೂ ವೈದ್ಯಕೀಯ ಸಿಬ್ಬಂದಿ ಹೆಚ್ಚಿಸುವ ಕಡೆಗೆ ಗಮನಹರಿಸಬೇಕು," ಎಂದು ತಿಳಿಸಿದ್ದಾರೆ.
''ರಾಜ್ಯಗಳಲ್ಲಿ ವೈದ್ಯಕೀಯ ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಕುರಿತು ಕ್ರಮ ತೆಗೆದುಕೊಳ್ಳಬೇಕು. ಹೋಮ್ ಐಸೊಲೇಷನ್ನಲ್ಲಿರುವವರನ್ನು ಆಸ್ಪತ್ರೆಗೆ ಸಾಗಿಸಲು ಹೆಚ್ಚುವರಿ ಆಂಬ್ಯುಲೆನ್ಸ್ಗಳು, ಮೂಲ ಸೌಕರ್ಯಗಳ ಸಾಗಣೆಗೆ ಖಾಸಗಿ ವಾಹನಗಳು ಸಿದ್ಧವಿರುವಂತೆ ನೋಡಿಕೊಳ್ಳಬೇಕು,'' ಎಂದು ಸೂಚಿಸಿದ್ದಾರೆ.
ದೇಶದಲ್ಲಿ ಸತತವಾಗಿ ನಿತ್ಯ ಒಂದು ಲಕ್ಷಕ್ಕೂ ಅಧಿಕ ಕೇಸ್ಗಳು ದಾಖಲಾಗುತ್ತಿರುವ ಕಾರಣ ಹಾಗೂ ಪಾಸಿಟಿವಿಟಿ ಪ್ರಮಾಣವೂ ಹೆಚ್ಚುತ್ತಿರುವ ಕಾರಣ ಸೋಂಕಿನ ವಿರುದ್ಧ ಹೋರಾಡಲು ಸಕಲ ರೀತಿಯಲ್ಲೂ ಕೇಂದ್ರ ಸರಕಾರ ಕ್ರಮ ತೆಗೆದುಕೊಳ್ಳುತ್ತಿದೆ.
ಲಸಿಕಾ ಕೇಂದ್ರಗಳಿಗೆ ನಿಗದಿತ ಸಮಯ ಇಲ್ಲಎಂದ ಕೇಂದ್ರ
ಕೊರೊನಾ ನಿರೋಧಕ ಲಸಿಕೆ ಕೇಂದ್ರಗಳು ಕಾರ್ಯನಿರ್ವಹಿಸಲು ಸಮಯದ ಮಿತಿ ಇಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. "ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಮಾತ್ರ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸಬೇಕು ಎಂಬ ನಿಯಮವಿಲ್ಲ. ಲಸಿಕೆಗಳ ಲಭ್ಯತೆ ಹಾಗೂ ಜನರು ಬಂದು ಲಸಿಕೆ ಹಾಕಿಸಿಕೊಳ್ಳುವಂತಿದ್ದರೆ ರಾತ್ರಿ 10 ಗಂಟೆವರೆಗೂ ಕಾರ್ಯನಿರ್ವಹಿಸಬಹುದು. ಲಸಿಕೆ ಕೇಂದ್ರಗಳ ಕಾರ್ಯನಿರ್ವಹಣೆಗೆ ಯಾವುದೇ ಸಮಯದ ಮಿತಿ ಇಲ್ಲ," ಎಂದು ಸ್ಪಷ್ಟಪಡಿಸಿದೆ.
ಮುಂಜಾಗ್ರತೆ ಡೋಸ್ಗೆ ಚಾಲನೆ
ದೇಶಾದ್ಯಂತ ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ದಾಟಿದ ಕಾಯಿಲೆ ಪೀಡಿತರಿಗೆ 'ಮುಂಜಾಗ್ರತೆ ಡೋಸ್' ನೀಡುವ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಅಭಿಯಾನದ ಮೊದಲ ದಿನ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಲಸಿಕಾ ಕೇಂದ್ರಗಳಿಗೆ ಆಗಮಿಸಿ 60 ವರ್ಷ ದಾಟಿದ ಅನಾರೋಗ್ಯ ಪೀಡಿತರು ಲಸಿಕೆ ಪಡೆದರು. ಹಾಗೆಯೇ, ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಸಹ ಉತ್ಸಾಹದಿಂದ ಲಸಿಕೆ ಪಡೆದರು. ದೇಶಾದ್ಯಂತ 1.05 ಕೋಟಿ ಆರೋಗ್ಯ ಸಿಬ್ಬಂದಿ, 1.9 ಕೋಟಿ ಮುಂಚೂಣಿ ಕಾರ್ಯಕರ್ತರು ಹಾಗೂ 2.75 ಕೋಟಿ ಕಾಯಿಲೆ ಪೀಡಿತರು ಮುಂಜಾಗ್ರತಾ ಡೋಸ್ ಪಡೆಯಲಿದ್ದಾರೆ.
ಇದರ ನಡುವೆ ಇನ್ನೂ ಹಲವು ಬೆಳವಣಿಗೆಗಳು ನಡೆದಿವೆ. ಅವುಗಳು ಹೀಗಿವೆ,
* ತಮಿಳುನಾಡಿನಲ್ಲಿ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಸಮ್ಮತಿ, 150 ಜನರಿಗೆ ಮಾತ್ರ ವೀಕ್ಷಣೆ
* ಓಮಿಕ್ರಾನ್ ರೂಪಾಂತರಿ ಬಿಎ.1 ಸಹ ಡೆಲ್ಟಾವನ್ನು ಮೀರಿಸುತ್ತಿದೆ ಎಂದು ತಜ್ಞರಿಂದ ಎಚ್ಚರಿಕೆ
* ಅಮೆರಿಕದಲ್ಲಿ ಆರು ಕೋಟಿ ದಾಟಿದ ಕೊರೊನಾ ಪ್ರಕರಣಗಳ ಸಂಖ್ಯೆ, 8.3 ಲಕ್ಷ ಜನ ಸಾವು
* ಸೈಪ್ರಸ್ನಲ್ಲಿ ಪತ್ತೆಯಾದ 'ಡೆಲ್ಟಾಕ್ರಾನ್' ನೂತನ ರೂಪಾಂತರಿ ಕೇಸ್ ಸಂಖ್ಯೆ 25ಕ್ಕೆ ಏರಿಕೆ