ಇದು ಬಣ್ಣವಲ್ಲ ಚಿನ್ನ!: ಚಾಲಾಕಿ ಕಳ್ಳನ ತಂತ್ರ ಕಂಡು ಬೆರಗಾದ ಅಧಿಕಾರಿಗಳು

ಕೇರಳದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಜೀನ್ಸ್ ಪ್ಯಾಂಟ್‌ನ ಎರಡು ಪದರಗಳ ನಡುವೆ ಬಣ್ಣ ಹಚ್ಚಿದಂತೆ ಪೇಸ್ಟ್ ರೂಪದಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಚಾಲಾಕಿ ಕಳ್ಳನಿಂದ 302 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಇದು ಬಣ್ಣವಲ್ಲ ಚಿನ್ನ!: ಚಾಲಾಕಿ ಕಳ್ಳನ ತಂತ್ರ ಕಂಡು ಬೆರಗಾದ ಅಧಿಕಾರಿಗಳು
Linkup
ತಿರುವನಂತಪುರಂ: ಕಳ್ಳಸಾಗಣೆಗೆ ಕಳ್ಳರು ವಿಭಿನ್ನ ತಂತ್ರಗಳನ್ನು ಅನುಸರಿಸುತ್ತಾರೆ. ಕಸ್ಟಮ್ಸ್ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಚಿನ್ನ ಸಾಗಿಸುವ ಕಿರಾತಕರು ಅನೇಕ ಬಾರಿ ಅದರಲ್ಲಿ ಯಶಸ್ವಿಯೂ ಆಗಿರಬಹುದು. ಆದರೆ ಅದು ಎಲ್ಲ ಸಮಯದಲ್ಲಿಯೂ ಸಾಧ್ಯವಿಲ್ಲ. ಇಲ್ಲೊಬ್ಬ ಕಳ್ಳಸಾಗಣೆದಾರ ವಿನೂತನ ಮಾದರಿಯಲ್ಲಿ ಚಿನ್ನ ಸಾಗಿಸುವಾಗ ಸಿಕ್ಕಿಬಿದ್ದಿದ್ದಾನೆ. ಆತನ ಬುದ್ಧಿವಂತಿಕೆ ಕಂಡು ಅಧಿಕಾರಿಗಳೇ ಅಚ್ಚರಿಪಟ್ಟಿದ್ದಾರೆ. ರಾಜ್ಯದ ಕಣ್ಣೂರು ವಿಮಾನ ನಿಲ್ದಾಣದಲ್ಲಿ 302 ಗ್ರಾಂ ಚಿನ್ನವನ್ನು ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಸುಮಾರು 14 ಲಕ್ಷ ರೂ ಬೆಲೆ ಬಾಳುವ ಹಳದಿ ಲೋಹವನ್ನು ಪ್ರಯಾಣಿಕನೊಬ್ಬ ವಿನೂತನ ರೀತಿಯಲ್ಲಿ ಮಾಡುತ್ತಿದ್ದ. ಕಳ್ಳರು ಸಾಮಾನ್ಯವಾಗಿ ಚಿನ್ನವನ್ನು ಬಿಸ್ಕೆಟ್, ಆಭರಣದ ರೂಪದಲ್ಲಿ ಸಾಗಿಸುತ್ತಾರೆ. ಆದರೆ ಈ ಚಾಣಾಕ್ಷ ಕಳ್ಳ ಚಿನ್ನವನ್ನು ತಾನು ಧರಿಸುವ ಪ್ಯಾಂಟ್‌ಗಳ ಪದರಗಳ ನಡುವೆ ಪೇಸ್ಟ್ ರೂಪದಲ್ಲಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಪ್ರಯಾಣಿಕನ ಎರಡು ಪದರದ ಅನ್ನು ಕತ್ತರಿಸಿದ ಚಿತ್ರವನ್ನು ಎಎನ್ಐ ಸುದ್ದಿಸಂಸ್ಥೆ ಹಂಚಿಕೊಂಡಿದೆ. ಕತ್ತರಿಸಿದ ಪದರ ಒಳಗೆ ಚಿನ್ನವನ್ನು ಕರಗಿಸಿ ಅದರ ಪೇಸ್ಟ್ ಅನ್ನು ಬಳಿಯಲಾಗಿತ್ತು. 'ಕಣ್ಣೂರು ವಿಮಾನ ನಿಲ್ದಾಣದ ವಾಯು ಗುಪ್ತಚರ ಘಟಕವು ಎರಡು ಪದರದ ಪ್ಯಾಂಟ್‌ಗಳ ಒಳಗೆ ತೆಳುವಾದ ಪೇಸ್ಟ್ ರೂಪದಲ್ಲಿ ಹಚ್ಚಲಾಗಿದ್ದ 302 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ' ಎಂದು ಸುದ್ದಿಸಂಸ್ಥೆ ತಿಳಿಸಿದೆ. ಚಿನ್ನವನ್ನು ಗುದದ ಒಳಗೆ, ಶೂ ಒಳಗೆ ಹಾಗೂ ಬೇರೆ ಬೇರೆ ರೂಪಗಳಲ್ಲಿ ಕರಗಿಸಿ ಕದ್ದೊಯ್ಯುವ ಪ್ರಕರಣಗಳನ್ನು ಅಧಿಕಾರಿಗಳು ಭೇದಿಸಿದ್ದರು. ಆದರೆ ಚಿನ್ನವನ್ನು ಪೇಸ್ಟ್ ರೀತಿ ಪ್ಯಾಂಟ್‌ಗೆ ಹಚ್ಚಿ ಸಾಗಿಸುವಾಗ ಸಿಕ್ಕಿಬಿದ್ದಿರುವುದು ವಿಶಿಷ್ಟ ಪ್ರಕರಣವಾಗಿದೆ. ಇತ್ತೀಚೆಗೆ ಶಾರ್ಜಾದಿಂದ ಅಮೃತಸರಕ್ಕೆ ವಿಮಾನದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಒಳ ಉಡುಪಿನ ಒಳಗೆ 1,894 ಗ್ರಾಂ ತೂಕದ ಚಿನ್ನದ ಪೇಸ್ಟ್ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದ. ಜೀನ್ಸ್ ಪ್ಯಾಂಟ್‌ನ ಒಂದು ಪದರವನ್ನು ಕತ್ತರಿಸಿ ಅದಕ್ಕೆ ಕರಗಿಸಿದ ಚಿನ್ನದ ಪೇಸ್ಟ್ ಹಚ್ಚಿ, ಬಳಿಕ ಅದನ್ನು ಹೊಲಿದು ಧರಿಸಿ ಬಂದಿದ್ದ ಕಳ್ಳನ ಚಾಣಾಕ್ಷತೆ ಕಂಡು ಸಾಮಾಜಿಕ ಜಾಲತಾಣದ ಬಳಕೆದಾರರು ಬೆರಗಾಗಿದ್ದಾರೆ. 'ಅದ್ಭುತ ತಂತ್ರ' ಎಂದು ಕೆಲವರು ಕಳ್ಳನನ್ನು ಶ್ಲಾಘಿಸಿದ್ದಾರೆ! 'ನಾನು ದೊಡ್ಡವನಾದ ಬಳಿಕ ಕೇರಳದಲ್ಲಿ ಕಸ್ಟಮ್ಸ್ ಅಧಿಕಾರಿಯಾಗಲು ಬಯಸಿದ್ದೇನೆ' ಎಂದು ಮತ್ತೊಬ್ಬರು ತಮಾಷೆಯಾಗಿ ಹೇಳಿದ್ದಾರೆ.