ಸೋಂಕು ಕಡಿವಾಣಕ್ಕೆ ಕಟ್ಟುನಿಟ್ಟಿನ ನಿಯಮ ಪಾಲಿಸುವಂತೆ ಅಪಾರ್ಟ್‌ಮೆಂಟ್‌ಗಳಿಗೆ ಬಿಬಿಎಂಪಿ ತಾಕೀತು

ಕೊರೊನಾ ಸೋಂಕು ಕಡಿವಾಣ ನಿಟ್ಟಿನಲ್ಲಿ ಕೋವಿಡ್‌ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ವಸತಿ ಸಮುಚ್ಚಯಗಳ ನಿವಾಸಿಗಳಿಗೆ ಬಿಬಿಎಂಪಿ ಸೂಚಿಸಿದೆ.

ಸೋಂಕು ಕಡಿವಾಣಕ್ಕೆ ಕಟ್ಟುನಿಟ್ಟಿನ ನಿಯಮ ಪಾಲಿಸುವಂತೆ ಅಪಾರ್ಟ್‌ಮೆಂಟ್‌ಗಳಿಗೆ ಬಿಬಿಎಂಪಿ ತಾಕೀತು
Linkup
ಬೆಂಗಳೂರು: ಕೊರೊನಾ ಸೋಂಕಿನ ಎರಡನೇ ಅಲೆಯು ಶರವೇಗದಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಗುಣಮಟ್ಟದ ಕಾರ್ಯ ವಿಧಾನ (ಎಸ್‌ಒಪಿ) ಹಾಗೂ ಕೋವಿಡ್‌ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ವಸತಿ ಸಮುಚ್ಚಯಗಳ ನಿವಾಸಿಗಳಿಗೆ ಸೂಚಿಸಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ. ವಸತಿ ಸಮುಚ್ಚಯಗಳು, ಬಡಾವಣೆಗಳಲ್ಲಿ ವಾಸಿಸುತ್ತಿರುವ ಜನರೆಲ್ಲರೂ ಒಂದೇ ಲಿಫ್ಟ್‌ ಬಳಸುತ್ತಾರೆ. ಮೆಟ್ಟಿಲುಗಳ ರೈಲಿಂಗ್‌ ಹಿಡಿದುಕೊಂಡು ಓಡಾಡುತ್ತಾರೆ. ಉದ್ಯಾನದಲ್ಲಿ ಒಟ್ಟಿಗೆ ವಾಯುವಿಹಾರ ಮಾಡುತ್ತಾರೆ. ಅಲ್ಲದೇ ಹೊರಗಿನಿಂದಲೂ ಆಹಾರ, ಅಗತ್ಯ ವಸ್ತುಗಳು ಹಾಗೂ ಇನ್ನಿತರೆ ಸೇವೆಗಳನ್ನು ಒದಗಿಸುವವರು ಬಂದು ಹೋಗುತ್ತಾರೆ. ಹೀಗಾಗಿ, ಕೋವಿಡ್‌ ನಿಯಮಾವಳಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಪಾಲಿಕೆಯ ಮುಖ್ಯ ಆಯುಕ್ತ ಗೌರವ್‌ ಗುಪ್ತ ಆದೇಶಿಸಿದ್ದಾರೆ. ಅಪಾರ್ಟ್‌ಮೆಂಟ್‌ಗಳು, ಬಡಾವಣೆಗಳ ಆವರಣದಲ್ಲಿ ನಿವಾಸಿಗಳು ಗುಂಪು ಸೇರದಂತೆ ನೋಡಿಕೊಳ್ಳಬೇಕು. ಸಾಮಾನ್ಯ ಆವರಣ, ರೈಲಿಂಗ್‌, ಲಿಫ್ಟ್‌ಗಳನ್ನು ಎಲ್ಲರೂ ಬಳಸುವುದರಿಂದ ಸೋಂಕು ನಿವಾರಕ ದ್ರಾವಣದಿಂದ ಶುಚಿಗೊಳಿಸುತ್ತಿರಬೇಕು. ಹೌಸ್‌ ಕೀಪಿಂಗ್‌ ಸಿಬ್ಬಂದಿಗೆ ಸೋಪು, ಸ್ಯಾನಿಟೈಸರ್‌ ಒದಗಿಸಬೇಕು. ವಾಯು ವಿಹಾರದ ವೇಳೆ ಕನಿಷ್ಠ ಒಂದು ಮೀಟರ್‌ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವೇಶಿಸುವ ಪ್ರತಿಯೊಬ್ಬರ ಉಷ್ಣಾಂಶವನ್ನು ಥರ್ಮಲ್‌ ಸ್ಕ್ಯಾ‌ನರ್‌ನಿಂದ ಪರೀಕ್ಷಿಸಬೇಕು. ಜ್ವರ, ನೆಗಡಿ, ಕೆಮ್ಮು, ಗಂಟಲು ನೋವು, ತಲೆ ನೋವಿನಿಂದ ಬಳಲುತ್ತಿರುವವರನ್ನು ಸ್ಥಳೀಯ ಫೀವರ್‌ ಕ್ಲಿನಿಕ್‌ ಅಥವಾ ಆಸ್ಪತ್ರೆಗೆ ಕಳುಹಿಸಬೇಕು. ಇಲ್ಲವೇ ಆಪ್ತಮಿತ್ರ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಅತಿಥಿಗಳು, ಸಂದರ್ಶಕರು, ಚಾಲಕರು ಮತ್ತು ಇನ್ನಿತರೆ ಸಿಬ್ಬಂದಿಯ ದೇಹದ ಉಷ್ಣಾಂಶ ಪರೀಕ್ಷಿಸಬೇಕು. ಪ್ರವೇಶ, ನಿರ್ಗಮನ ದ್ವಾರಗಳಲ್ಲಿ ಹ್ಯಾಂಡ್‌ವಾಶ್‌ ಮತ್ತು ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು ಎಂದು ತಾಕೀತು ಮಾಡಲಾಗಿದೆ. ಪ್ರತಿ 15 ದಿನಕ್ಕೊಮ್ಮೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್‌ ವರದಿಯನ್ನು ತರುವಂತೆ ಹೇಳಬೇಕು. ಲಿಫ್ಟ್‌ ಆಪರೇಟಿಂಗ್‌ ಬಟನ್ಸ್‌ಗಳನ್ನು ಸ್ಯಾನಿಟೈಸ್‌ ಮಾಡಬೇಕು. ನಿವಾಸಿಗಳು ಸಹ ಲಿಫ್ಟ್‌ ಬಳಸಿದ ತಕ್ಷಣ ಸೋಪ್‌ನಿಂದ ಕೈಗೊಳ್ಳನ್ನು ತೊಳೆದುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ. ಸೋಂಕಿತ ಪ್ರಕರಣಗಳು ಕಂಡುಬಂದರೆ, ಕಂಟೈನ್ಮೆಂಟ್‌ ವಲಯವನ್ನಾಗಿ ಮಾಡಲು ಆರೋಗ್ಯಾಧಿಕಾರಿಗಳಿಗೆ ಸಹಕರಿಸಬೇಕು. ಸರಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಎಲ್ಲರಿಗೂ ಕಾಣಿಸುವಂತೆ ಪ್ರದರ್ಶಿಸಬೇಕು. ಹೊರರಾಜ್ಯಗಳಿಂದ ಬಂದವರು ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರಬೇಕು. ಜ್ವರ, ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ತಕ್ಷಣ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಪ್ರತ್ಯೇಕವಾಗಿರಬೇಕು. ಮನೆಯಿಂದ ಹೊರಗೆ ಮಕ್ಕಳನ್ನು ಆಟಕ್ಕೆ ಬಿಡಬಾರದು. ಪೋಷಕರು ಮಕ್ಕಳಿಗೆ ಒಳಾಂಗಣ ಚಟುವಟಿಕೆಗಳಿಗೆ ಪ್ರೇರೇಪಿಸಬೇಕು. 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರ ಹೋಗಬಾರದು ಎಂದು ನಿರ್ದೇಶನ ನೀಡಲಾಗಿದೆ. ಸೋಂಕಿತರಿಗೆ ಅಗತ್ಯ ನೆರವು ನೀಡಿ ಹೋಮ್‌ ಐಸೋಲೇಷನ್‌ನಲ್ಲಿರುವ ಸೋಂಕಿತರು ಮನೆಯಿಂದ ಹೊರಬರದಂತೆ ನೋಡಿಕೊಳ್ಳಬೇಕು. ಕ್ವಾರಂಟೈನ್‌ ಪೋಸ್ಟರ್‌ ಅಂಟಿಸಬೇಕು. ಸೋಂಕಿತರಿಗೆ ಕಿರುಕುಳ ನೀಡದೆ, ಅಗತ್ಯ ನೆರವು ಒದಗಿಸಬೇಕು ಎಂದು ಸೂಚಿಸಿದ್ದಾರೆ. ಜಿಮ್‌, ಈಜುಕೊಳ ಬಂದ್‌ ಜಿಮ್‌, ಈಜುಕೊಳ, ಕ್ಲಬ್‌ಗಳನ್ನು ಮುಚ್ಚಿರಬೇಕು. ಹೊರಾಂಗಣ ಚಟುವಟಿಕೆಗಳು, ಬೇಸಿಗೆ ಶಿಬಿರಗಳಿಗೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ.