![](https://vijaykarnataka.com/photo/82350057/photo-82350057.jpg)
: ಕರ್ಫ್ಯೂ ಉಲ್ಲಂಘಿಸಿ ಹೊರ ಬರುವ ವ್ಯಕ್ತಿಗಳ ವಾಹನಗಳನ್ನು ಜಪ್ತಿ ಮಾಡುತ್ತಿರುವ ನಗರ ಪೊಲೀಸರು, ದಂಡ ವಿಧಿಸುವ ಕುರಿತು ಸರಕಾರದಿಂದ ಆದೇಶ ಬರುವವರೆಗೆ ಮಾಲೀಕರಿಗೆ ವಾಹನ ಮರಳಿಸುವುದಿಲ್ಲ ಎಂದು ತಿಳಿಸಿದ್ದಾರೆ.
ನಗರದಲ್ಲಿ ಈಗಾಗಲೇ ಸುಮಾರು 7 ಸಾವಿರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿ ಠಾಣೆಗೆ ಸಾಗಿಸಿದ್ದಾರೆ. ಅವುಗಳ ಸುರಕ್ಷತೆ, ರಕ್ಷಣೆಯು ಪೊಲೀಸರಿಗೆ ಸವಾಲಾಗಿದೆ. ಮತ್ತೊಂದೆಡೆ ದಂಡ ಕಟ್ಟುತ್ತೇವೆ ನಮ್ಮ ವಾಹನಗಳನ್ನು ಬಿಟ್ಟು ಕೊಡಿ ಎಂದು ನೂರಾರು ಜನರು ಠಾಣೆಗೆ ಎಡ ತಾಕುತ್ತಿದ್ದಾರೆ. ಠಾಣೆಗಳಿಗೆ ಫೋನ್ ಮಾಡಿ ವಿಚಾರಿಸುತ್ತಿದ್ದಾರೆ. ಆದರೆ, ಸರಕಾರದ ಆದೇಶದವರೆಗೆ ವಾಹನಗಳನ್ನು ಬಿಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಕೇಸ್ ದಾಖಲಾಗಿರುವ ಪ್ರಕರಣಗಳಲ್ಲಿ ಆರೋಪಿತರು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ. ವಾಹನ ಜಪ್ತಿ ಮಾಡಿಕೊಂಡಿರುವ ಪ್ರಕರಣದಲ್ಲಿ ದಂಡ ಮಾತ್ರ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ, ದಂಡದ ಮೊತ್ತ ಎಷ್ಟು ಎಂಬುದನ್ನು ತಿಳಿಸಿಲ್ಲ.
ಕಳೆದ ವರ್ಷ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲೂ ಕರ್ಫ್ಯೂ ಉಲ್ಲಂಘಿಸಿದವರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ದ್ವಿಚಕ್ರ ವಾಹನ, ಆಟೋಗಳಿಗೆ 500 ರೂ. ಮತ್ತು ಕಾರುಗಳಿಗೆ 1 ಸಾವಿರ ರೂ. ದಂಡ ಸಂಗ್ರಹಿಸಿದ್ದರು. ವಾಹನಗಳನ್ನು ಬಿಡುಗಡೆ ಮಾಡುವ ಮುನ್ನ, ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲೂ ದಂಡ ಕಟ್ಟಿಸಿಕೊಂಡಿದ್ದರು.
2.63 ಕೋಟಿ ರೂ. ದಂಡ ಸಂಗ್ರಹ
ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಪಾಡದೆ ಕೋವಿಡ್ 19 ಸುರಕ್ಷತೆ ಮಾರ್ಗಸೂಚಿಗಳ ಉಲ್ಲಂಘನೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಏಪ್ರಿಲ್ ತಿಂಗಳಲ್ಲಿ 1,09,794 ಪ್ರಕರಣ ದಾಖಲಿಸಿ 2.63 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ.