![](https://vijaykarnataka.com/photo/87855962/photo-87855962.jpg)
: ಜಮ್ಮು - ಕಾಶ್ಮೀರದ ಪುಲ್ವಾಮದಲ್ಲಿ 2019ರಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಗೆ ಇ - ಕಾಮರ್ಸ್ ಸಂಸ್ಥೆಯೊಂದರಿಂದ ಸೇರಿ ಸ್ಫೋಟಕ ಸಾಧನಗಳಿಗೆ ಬಳಸುವ ಹಲವು ಉಪಕರಣ ಖರೀದಿಸಲಾಗಿದೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಇ - ಕಾಮರ್ಸ್ ಸಂಸ್ಥೆಯೊಂದರ ವಿರುದ್ಧ ಮಧ್ಯ ಪ್ರದೇಶ ಮತ್ತು ಆಂಧ್ರ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಮಾಡಿದ ಪ್ರಕರಣ ದಾಖಲಾಗಿರುವ ಬೆನ್ನಲ್ಲಿಯೇ ಈ ಆಪಾದನೆ ಕೇಳಿ ಬಂದಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಇದೀಗ ನಿಷೇಧಿತ ರಾಸಾಯನಿಕ ಮಾರಾಟ ಆರೋಪ ಮಾಡಿದೆ.
'ಭಾರತೀಯ ಸೇನೆಯ 40 ಯೋಧರು ಹುತಾತ್ಮರಾಗಲು ಕಾರಣವಾದ ಪುಲ್ವಾಮ ದಾಳಿಗೂ ಮುನ್ನ ಸುಧಾರಿತ ಸ್ಫೋಟಕ ಸಾಧನ (ಐಇಡಿ) ತಯಾರಿಸಲು ಬಳಸುವ ರಾಸಾಯನಿಕಗಳಾದ ಅಮೋನಿಯಂ ನೈಟ್ರೇಟ್, ನೈಟ್ರೋ ಗ್ಲಿಸರಿನ್ ಹಾಗೂ ಬ್ಯಾಟರಿಗಳು ಸೇರಿ ಹಲವು ಉಪಕರಣಗಳನ್ನು ಆನ್‌ಲೈನ್ ಮೂಲಕ ಖರೀದಿಸಲಾಗಿದೆ' ಎಂದು ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ. ಸಿ. ಭಾರ್ತಿಯಾ ಹೇಳಿದ್ದಾರೆ.
'ಪುಲ್ವಾಮ ದಾಳಿ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬಂಧಿಸಿದ ವ್ಯಕ್ತಿ ನೀಡಿದ ಮಾಹಿತಿಯಿಂದಲೇ ಈ ಆತಂಕಕಾರಿ ಸಂಗತಿ ಬಹಿರಂಗವಾಗಿದೆ. ಆನ್‌ಲೈನ್ ಮೂಲಕ ಏನು ಬೇಕಾದರೂ ಮಾರಾಟ ಮಾಡಬಹುದು ಎಂದು ಇ - ಕಾಮರ್ಸ್ ಸಂಸ್ಥೆಗಳು ಭಾವಿಸಿವೆ. ಹಾಗಾಗಿ ಕೂಡಲೇ ಇದರ ಕುರಿತು ತನಿಖೆಯಾಗಬೇಕು ಹಾಗೂ ಸಂಬಂಧಿಸಿದ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.
'ಸ್ಫೋಟಕ ಕಾಯಿದೆ - 1884ರ ಪ್ರಕಾರ ಅಮೋನಿಯಂ ನೈಟ್ರೇಟ್ ಉತ್ಪಾದನೆ, ಮಾರಾಟ ಹಾಗೂ ಸಂಗ್ರಹವನ್ನು 2011ರಲ್ಲಿ ನಿಷೇಧಿಸಲಾಗಿದೆ. ಅಲ್ಲದೆ, 2006ರಲ್ಲಿ ಮಾಲೇಗಾಂವ್ ಹಾಗೂ 2008ರಲ್ಲಿ ದಿಲ್ಲಿಯಲ್ಲಿ ನಡೆದ ಬಾಂಬ್ ದಾಳಿಯಲ್ಲೂ ಇದೇ ರಾಸಾಯನಿಕ ಬಳಸಲಾಗಿತ್ತು. ಹೀಗಿದ್ದರೂ ಇ - ಕಾಮರ್ಸ್ ಸಂಸ್ಥೆ ಆನ್‌ಲೈನ್‌ನಲ್ಲಿ ಈ ರಾಸಾಯನಿಕ ಮಾರಾಟ ಮಾಡುತ್ತಿರುವುದು ದೇಶದ ಭದ್ರತೆಗೆ ಅಪಾಯಕಾರಿಯಾಗಿದೆ' ಎಂದು ಹೇಳಿದರು.
ಪುಲ್ವಾಮದಲ್ಲಿ 2019ರ ಫೆಬ್ರವರಿ 14ರಂದು ಯೋಧರನ್ನು ಗುರಿಯಾಗಿಸಿ ನಡೆದ ಆತ್ಮಾಹುತಿ ದಾಳಿಯಲ್ಲಿ 40 ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಬಾಲಾಕೋಟ್ ಮೇಲೆ ವಾಯು ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿತ್ತು.
48 ಕೆಜಿ ಗಾಂಜಾ ವಶ
ಮಧ್ಯ ಪ್ರದೇಶದಲ್ಲಿ ಇ - ಕಾಮರ್ಸ್ ಸಂಸ್ಥೆ ಮೂಲಕ ಮಾರಾಟ ಮಾಡಲಾದ ಸುಮಾರು 21.7 ಕೆಜಿ ಗಾಂಜಾ ವಶಪಡಿಸಿಕೊಂಡು, ಸಂಸ್ಥೆಯ ಭಾರತ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಪೊಲೀಸರು ಇದೇ ಸಂಸ್ಥೆಯ ಡೆಲಿವರಿ ಬಾಯ್‌ನಿಂದ 48 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಮಧ್ಯಪ್ರದೇಶದ ಪೊಲೀಸರು ನೀಡಿದ ಮಾಹಿತಿ ಮೇರೆಗೆ ವಿಶಾಖಪಟ್ಟಣಂ ಪೊಲೀಸರು ಹಲವೆಡೆ ಪರಿಶೀಲನೆ ನಡೆಸಿದ್ದು, ಈ ವೇಳೆ ಚಿಲಕಪತಿ ಶ್ರೀನಿವಾಸ ಎಂಬಾತನನ್ನು ಬಂಧಿಸಿದ್ದಾರೆ. ಈತ ನೀಡಿದ ಮಾಹಿತಿ ಆಧರಿಸಿ ತಪಾಸಣೆ ನಡೆಸಿದಾಗ ತಲಾ 24 ಕೆಜಿ ಗಾಂಜಾ ಇರುವ ಎರಡು ಬ್ಯಾಗ್ ಪತ್ತೆಯಾಗಿವೆ.
ಬಾಂಗ್ಲಾ ಇಬ್ಬರು ನಾಗರಿಕರು ವಾಪಸ್
ದಾರಿ ತಪ್ಪಿ ಭಾರತದ ಗಡಿ ಪ್ರವೇಶಿಸಿದ್ದ ಬಾಂಗ್ಲಾ ದೇಶದ ಇಬ್ಬರು ಪ್ರವಾಸಿಗರನ್ನು ಗಡಿ ಭದ್ರತಾ ಸಿಬ್ಬಂದಿ (ಬಿಎಸ್‌ಎಫ್) ಸುರಕ್ಷಿತವಾಗಿ ವಾಪಸ್ ಕಳುಹಿಸಿದ್ದಾರೆ. ಮೇಘಾಲಯದ ದಕ್ಷಿಣ ಗಾರೋ ಹಿಲ್ಸ್ ಜಿಲ್ಲೆಯ ಗಡಿಯಲ್ಲಿ ದಾರಿ ತಪ್ಪಿ ನವೆಂಬರ್ 20ರಂದು ಮೊಹಮ್ಮದ್ ಅಖ್ತರ್ ಉಜ್ಜಮನ್ (43) ಹಾಗೂ ಮೊಹಮ್ಮದ್ ಅಮಿರುಲ್ ಇಸ್ಲಾಂ (18) ಎಂಬುವರು ಭಾರತದ ಗಡಿ ಪ್ರವೇಶಿಸಿದ್ದರು. ಅವರನ್ನು ಗಡಿ ಭದ್ರತಾ ಸಿಬ್ಬಂದಿಯು ವಶಕ್ಕೆ ಪಡೆದಿದ್ದರು. ಮಾನವೀಯತೆ ಆಧಾರದ ಮೇಲೆ ಅವರನ್ನು ವಾಪಸ್ ಕಳುಹಿಸಲಾಗಿದೆ.
ನೌಕಾಪಡೆ ಇಬ್ಬರು ನಿವೃತ್ತ ಅಧಿಕಾರಿಗಳಿಗೆ ಜಾಮೀನು
ಜಲಾಂತರ್ಗಾಮಿ ಯೋಜನೆ ಕುರಿತ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದ ನೌಕಾಪಡೆ ನಿವೃತ್ತ ಅಧಿಕಾರಿಗಳಾದ ರಣದೀಪ್ ಸಿಂಗ್, ಎಸ್. ಜೆ. ಸಿಂಗ್ ಸೇರಿ ಹಲವರಿಗೆ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. 'ಅಧಿಕೃತ ರಹಸ್ಯೆಗಳ ಕಾಯಿದೆ (ಒಎಸ್‌ಎ) ಅಡಿಯಲ್ಲಿ ತನಿಖೆ ನಡೆಸಿರುವ ಕುರಿತು ಸಿಬಿಐ ಅಧಿಕಾರಿಗಳು ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖವಾಗಿಲ್ಲ. ಅಲ್ಲದೆ ಆರೋಪಪಟ್ಟಿ ಅಪೂರ್ಣವಾಗಿದೆ. ಹೀಗಾಗಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗುತ್ತಿದೆ' ಎಂದು ವಿಶೇಷ ನ್ಯಾ. ಅನುರಾಧಾ ಶುಕ್ಲಾ ಭಾರದ್ವಾಜ್ ಅವರು ತಿಳಿಸಿದ್ದಾರೆ. ಮಾಹಿತಿ ಸೋರಿಕೆ ಆರೋಪದಲ್ಲಿ ಸಿಬಿಐ ಅಧಿಕಾರಿಗಳು ಸೆಪ್ಟೆಂಬರ್ 2 ರಂದು ಹಲವು ಅಧಿಕಾರಿಗಳನ್ನು ಬಂಧಿಸಿದ್ದರು.