ಗೋವಾದಲ್ಲಿ 'ದೀದಿ' ಅಬ್ಬರ, ಪೇಸ್‌ ಪಕ್ಷ ಸೇರ್ಪಡೆ ಬಳಿಕ ಟಿಎಂಸಿಗೆ ಬಿಜೆಪಿ ಮಾಜಿ ಮಿತ್ರನ ಬೆಂಬಲ!

ಮೂರು ದಿನಗಳ ಗೋವಾ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ ಜಿಎಫ್‌ಪಿಯ ವಿಜಯ್‌ ಸರ್ದೇಸಾಯಿ ಅವರನ್ನು ಭೇಟಿಯಾಗಿದ್ದು, ಎರಡೂ ಪಕ್ಷಗಳು ಒಟ್ಟಿಗೆ ಕೆಲಸ ಮಾಡಲು ನಿರ್ಧರಿಸಿವೆ ಮತ್ತು ಬಿಜೆಪಿ ವಿರುದ್ಧ ಹೋರಾಡಲು ತೀರ್ಮಾನಿಸಿವೆ ಎಂದಿದ್ದಾರೆ.

ಗೋವಾದಲ್ಲಿ 'ದೀದಿ' ಅಬ್ಬರ, ಪೇಸ್‌ ಪಕ್ಷ ಸೇರ್ಪಡೆ ಬಳಿಕ ಟಿಎಂಸಿಗೆ ಬಿಜೆಪಿ ಮಾಜಿ ಮಿತ್ರನ ಬೆಂಬಲ!
Linkup
ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಶನಿವಾರ ಫಾರ್ವರ್ಡ್‌ ಪಾರ್ಟಿ(ಜಿಎಫ್‌ಪಿ) ಯ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ. ವಿಜಯ್‌ ಸರ್ದೇಸಾಯಿ ನೇತೃತ್ವದ ಪಕ್ಷ ಮುಂದಿನ ವರ್ಷ ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಜತೆ ಕೈ ಜೋಡಿಸುವ ಸಾಧ್ಯತೆ ಇದೆ. ಮೂರು ದಿನಗಳ ಗೋವಾ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ ಜಿಎಫ್‌ಪಿಯ ವಿಜಯ್‌ ಸರ್ದೇಸಾಯಿ ಅವರನ್ನು ಭೇಟಿಯಾದ ಬಳಿಕ ಪ್ರತಿಕ್ರಿಯೆ ನೀಡಿ, ಮಮತಾ ಬ್ಯಾನರ್ಜಿ, ಎರಡೂ ಪಕ್ಷಗಳು ಒಟ್ಟಿಗೆ ಕೆಲಸ ಮಾಡಲು ನಿರ್ಧರಿಸಿವೆ ಮತ್ತು ಬಿಜೆಪಿ ವಿರುದ್ಧ ಹೋರಾಡಲು ತೀರ್ಮಾನಿಸಿವೆ ಎಂದು ಹೇಳಿದ್ದಾರೆ. "ವಿಜಯ್ ಸರ್ದೇಸಾಯಿ ಮತ್ತು ನಾನು ಬಿಜೆಪಿ ವಿರುದ್ಧ ಒಟ್ಟಾಗಿ ಹೋರಾಡಲು ನಿರ್ಧರಿಸಿದ್ದೇವೆ. ವಿಲೀನವಾಗಬೇಕೋ ಬೇಡವೋ ಎಂಬುದು ಅವರ ನಿರ್ಧಾರ. ಪ್ರಾದೇಶಿಕ ಪಕ್ಷಗಳನ್ನು ಒಡೆಯಲು ಟಿಎಂಸಿ ಬಯಸುವುದಿಲ್ಲ," ಎಂದು ಪತ್ರಿಕಾಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಗೋವಾ ಫಾರ್ವರ್ಡ್‌ ಪಾರ್ಟಿ ಬಿಜೆಪಿ ಜತೆಗಿನ ಸಂಬಂಧವನ್ನು ಮುರಿದುಕೊಂಡಿತ್ತು. ಬಿಜೆಪಿ ಸಮಾಜ ವಿರೋಧಿ ಎಂದು ದೂರಿ ಕಮಲ ಪಾಳಯದ ಜತೆಗಿನ ಸಖ್ಯಕ್ಕೆ ಕೊನೆ ಹಾಡಿದ್ದರು ವಿಜಯ್‌ ಸರ್ದೇಸಾಯಿ. "ಈ ಭ್ರಷ್ಟ ಮತ್ತು ಕೋಮುವಾದಿ ಆಡಳಿತವನ್ನು ಕೊನೆಗಾಣಿಸಲು ಪ್ರತಿಪಕ್ಷಗಳ ಒಗ್ಗಟ್ಟು ಬಹಳ ಮುಖ್ಯ. 2022ರ ಬಗ್ಗೆ ಗಂಭೀರವಾಗಿ ಯೋಚಿಸೋಣ," ಎಂದು ಸರ್ದೇಸಾಯಿ ಹೇಳಿದ್ದು, ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸುವ ಸೂಚನೆ ನೀಡಿದ್ದಾರೆ. ಗೋವಾ ಫಾರ್ವರ್ಡ್‌ ಪಾರ್ಟಿ ಗೋವಾ ವಿಧಾನಸಭೆಯಲ್ಲಿ 3 ಸ್ಥಾನಗಳನ್ನು ಹೊಂದಿದ್ದು, ರಾಜ್ಯದಲ್ಲಿ ಪ್ರಮುಖ ಪ್ರಾದೇಶಿಕ ಪಕ್ಷವಾಗಿ ಗುರುತಿಸಿಕೊಂಡಿದೆ. ಕಳೆದ ಬಿಜೆಪಿ ಸರಕಾರದಲ್ಲಿ ವಿಜಯ್‌ ಸರ್ದೇಸಾಯಿ ಉಪಮುಖ್ಯಮಂತ್ರಿಯಾಗಿಗೂ ಕಾರ್ಯನಿರ್ವಹಿಸಿದ್ದರು. ಈ ವರ್ಷ ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಟಿಎಂಸಿ ಹೊಸ ಹೊಸ ರಾಜ್ಯಗಳಲ್ಲಿ ಬೇರೂರಲು ತವಕಿಸುತ್ತಿದ್ದು, ಗೋವಾವನ್ನು ಇದಕ್ಕೆ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಗೋವಾದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಎರಡು ಬಾರಿಯ ಗೋವಾ ಮುಖ್ಯಮಂತ್ರಿ ಲುಯಿಜಿನ್ಹೋ ಫಲೇರೋ ಅವರನ್ನು ಟಿಎಂಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಜತೆ ಬೇರೆ ಬೇರೆ ವಲಯಗಳ ಖ್ಯಾತನಾಮರನ್ನೂ ಪಕ್ಷದತ್ತ ಸೆಳೆಯುತ್ತಿದೆ. ಶುಕ್ರವಾರವಷ್ಟೇ ಖ್ಯಾತ ಟೆನಿಸ್‌ ಆಟಗಾರ ತೃಣಮೂಲ ಕಾಂಗ್ರೆಸ್‌ ಸೇರಿದ್ದಾರೆ. ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಪೇಸ್‌ ಪಕ್ಷಕ್ಕೆ ಸೇರ್ಪಡೆ­ಯಾಗಿದ್ದರು. “ನಾನೀಗ ಟೆನಿಸ್‌ನಿಂದ ನಿವೃತ್ತಿಯಾಗಿದ್ದೇನೆ. ರಾಜಕಾರಣ ಎಂಬ ಮಾಧ್ಯಮದ ಮೂಲಕ ದೇಶದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಜನಸೇವೆ ಮಾಡಲು ತೀರ್ಮಾನಿಸಿದ್ದೇನೆ. ದೀದಿ (ಮಮತಾ) ನಿಜವಾದ ಚಾಂಪಿಯನ್‌. ಹೀಗಾಗಿ ಟಿಎಂಸಿ ಸೇರಿದ್ದೇನೆ,’’ ಎಂದು 48 ವರ್ಷದ ಪೇಸ್‌ ತಿಳಿಸಿದರು. ಬಾಲಿವುಡ್‌ ನಟಿ ನಫೀಸಾ ಅಲಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮೃಣಾಲಿನಿ ದೇಶ­ಪಾಂಡೆ ಕೂಡ ಈ ಸಂದರ್ಭದಲ್ಲಿ ಟಿಎಂಸಿ ಸೇರ್ಪಡೆ­ಯಾಗಿದ್ದರು. ಶನಿವಾರ ಲಿಯಾಂಡರ್‌ ಪೇಸ್‌, ಫಲೇರೋ ಹಾಗು ದೀದಿ ಸಮ್ಮುಖದಲ್ಲಿ ಪ್ರಖ್ಯಾತ ಟಿಯಾಟ್ರಿಸ್ಟ್ ಫ್ರಾನ್ಸಿಸ್ ಡಿ ಟುಯೆಮ್ ಕೂಡ ತೃಣಮೂಲ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಇವರೆಲ್ಲರ ನಡುವೆ ಗೋವಾ ಫಾರ್ವರ್ಡ್‌ ಪಾರ್ಟಿ (ಜಿಎಫ್‌ಪಿ) ಕೂಡ ಟಿಎಂಸಿಯತ್ತ ವಾಲಿದೆ. ಮೊದಲಿಗೆ ಜಿಎಫ್‌ಪಿ ಕಾಂಗ್ರೆಸ್‌ ಜತೆ ಮೈತ್ರಿಗೆ ಒಲವು ತೋರಿತ್ತು. ಆದರೆ ಪಕ್ಷವನ್ನು ಕಾಂಗ್ರೆಸ್‌ ಜತೆಗೆ ಕರೆದುಕೊಳ್ಳದ ಹಿನ್ನೆಲೆಯಲ್ಲಿ ಇದೀಗ ತೃಣಮೂಲ ಕಾಂಗ್ರೆಸ್‌ನ್ನು ಸಂಪರ್ಕಿಸಿದೆ. ಮುಂದಿನ ವರ್ಷದ ಆರಂಭದಲ್ಲಿ 40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದರೆ, ಗೋವಾದಲ್ಲಿ ನೆಲೆಯೂರಲು ಟಿಎಂಸಿ ಮತ್ತು ಎಎಪಿ ಹವಣಿಸುತ್ತಿವೆ. ಎರಡೂ ಪಕ್ಷಗಳು ಈಗಾಗಲೇ ಆಕ್ರಮಣಕಾರಿ ಶೈಲಿಯಲ್ಲಿ ಪ್ರಚಾರಕ್ಕಿಳಿದಿವೆ. ಈ ಮೂರೂ ಪಕ್ಷಗಳ ನಡುವೆ ಪ್ರತಿಪಕ್ಷ ಕಾಂಗ್ರೆಸ್‌ ಕೂಡ ಸ್ಪರ್ಧೆಯಲ್ಲಿದೆ. ಜತೆಗೆ ಇನ್ನೂ ಹಲವು ಪ್ರಾದೇಶಿಕ ಪಕ್ಷಗಳು ತಮ್ಮದೇ ಲೆಕ್ಕಾಚಾರ ಹಾಕಿಕೊಂಡು ಕುಳಿತಿವೆ. 2017ರಲ್ಲಿ ಗೋವಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅತೀ ಹೆಚ್ಚಿನ 17 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಆಗ ರಕ್ಷಣಾ ಸಚಿವರಾಗಿದ್ದ ಮನೋಹರ್‌ ಪರಿಕ್ಕರ್‌ ರಾಜ್ಯಕ್ಕೆ ವಾಪಾಸಾಗಿ ಹೊಸ ರಾಜಕೀಯ ಸಮೀಕರಣ ಹೆಣೆದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರುವಂತೆ ಮಾಡಿದ್ದರು. ಹೀಗೆ 13 ಸ್ಥಾನ ಗೆದ್ದೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.