ವಿಧಾನಸಭೆ ಚುನಾವಣೆ: ಜುಲೈನಿಂದ ಉತ್ತರ ಪ್ರದೇಶಕ್ಕೆ ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರ ನಿರಂತರ ಭೇಟಿ

ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಮುಂದಿನ ತಿಂಗಳಿನಿಂದ ನಿರಂತರವಾಗಿ ಭೇಟಿ ನೀಡುವ ಯೋಜನೆ ರೂಪಿಸಲಾಗಿದೆ.

ವಿಧಾನಸಭೆ ಚುನಾವಣೆ: ಜುಲೈನಿಂದ ಉತ್ತರ ಪ್ರದೇಶಕ್ಕೆ ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರ ನಿರಂತರ ಭೇಟಿ
Linkup
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪ್ರಧಾನಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಮುಂದಿನ ತಿಂಗಳಿನಿಂದಲೇ ತಯಾರಿ ಆರಂಭಿಸಲಿದ್ದಾರೆ. ರಾಜ್ಯದಲ್ಲಿನ ಅಭಿವೃದ್ಧಿ ಹಾಗೂ ಕಲ್ಯಾಣ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲು ಹಾಗೂ ಪಕ್ಷದ ಪದಾಧಿಕಾರಿಗಳ ಜತೆಗೆ ಚರ್ಚಿಸಲು ಜುಲೈನಿಂದ ನಿರಂತರವಾಗಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಕೋವಿಡ್ 19 ಕಾರಣದಿಂದ ಹಾಗೂ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಲು ಪ್ರಧಾನಿ ಮೋದಿಗೆ ಅವರಿಗೆ ಸಾಧ್ಯವಾಗಿರಲಿಲ್ಲ. ಅವರು ಜುಲೈ ತಿಂಗಳಿನಿಂದ ತಮ್ಮ ಕ್ಷೇತ್ರ ವಾರಾಣಸಿ ಸೇರಿದಂತೆ ರಾಜ್ಯಕ್ಕೆ ಬಹುತೇಕ ಪ್ರತಿ ತಿಂಗಳೂ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಹಾಗೂ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಅವರು ಲಕ್ನೋಗೆ ಸೋಮವಾರ ಮತ್ತೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಮುಖ್ಯಮಂತ್ರಿ ಅವರೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ. ಉತ್ತರ ಪ್ರದೇಶದ ಅಧಿಸೂಚನೆಯು ಡಿಸೆಂಬರ್‌ನಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ. ಯೋಗಿ ಆದಿತ್ಯನಾಥ್ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಪಕ್ಷ ತಯಾರಿ ಆರಂಭಿಸಲಿದೆ. ಬಿಎಲ್ ಸಂತೋಷ್ ಹಾಗೂ ರಾಧಾ ಮೋಹನ್ ಸಿಂಗ್ ಅವರು ಮುಖ್ಯಮಂತ್ರಿ ಜತೆ ಸಂಘಟನಾ ಚಟುವಟಿಕೆಗಳು ಮತ್ತು ರಾಜ್ಯ ಸಂಪುಟದ ವಿಸ್ತರಣೆ ಸಾಧ್ಯತೆಗಳ ಕುರಿತು ಚರ್ಚಿಸಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ಲಕ್ನೋ ಸಂಸದರೂ ಆಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂದಿನ ತಿಂಗಳಿನಿಂದ ರಾಜ್ಯಕ್ಕೆ ಸತತ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರತಿ 14 ದಿನಗಳಿಗೊಮ್ಮೆ ಒಬ್ಬ ಹಿರಿಯ ನಾಯಕರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.