ಲಸಿಕೆ ಕೊರತೆ ನೀಗಿಸಲು ವಾಕ್ಸಿನ್‌ ಫಾರ್ಮುಲಾ ಹಂಚಿಕೊಳ್ಳುವಂತೆ ಪ್ರಧಾನಿಗೆ ಕೇಜ್ರಿವಾಲ್‌ ಮನವಿ

ದೇಶದ ಬೇಡಿಕೆಯಷ್ಟು ಲಸಿಕೆ ಉತ್ಪಾದಿಸಲಾಗದೆ ಸೀರಂ ಇನ್ಸ್‌ಟ್ಯೂಟ್‌ ಮತ್ತು ಭಾರತ್‌ ಬಯೋಟೆಕ್‌ ಏದುಸಿರುಬಿಡುತ್ತಿವೆ. ಇಂಥಹ ಸಂದರ್ಭದಲ್ಲೇ ಅರವಿಂದ ಕೇಜ್ರಿವಾಲ್‌ ಇಂಥಹದ್ದೊಂದು ಬೇಡಿಕೆ ಇಟ್ಟಿದ್ದಾರೆ.

ಲಸಿಕೆ ಕೊರತೆ ನೀಗಿಸಲು ವಾಕ್ಸಿನ್‌ ಫಾರ್ಮುಲಾ ಹಂಚಿಕೊಳ್ಳುವಂತೆ ಪ್ರಧಾನಿಗೆ ಕೇಜ್ರಿವಾಲ್‌ ಮನವಿ
Linkup
ಹೊಸದಿಲ್ಲಿ: ಕೊರೊನಾ ಲಸಿಕೆಯ ಫಾರ್ಮುಲಾವನ್ನು ಬಹಿರಂಗಪಡಿಸಿ ಹೆಚ್ಚಿನ ಕಂಪನಿಗಳಿಗೆ ಲಸಿಕೆ ಉತ್ಪಾದನೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಬೇಡಿಕೆಯಷ್ಟು ಲಸಿಕೆ ಪೂರೈಸಲಾಗದೆ ಸೀರಂ ಇನ್ಸ್‌ಟ್ಯೂಟ್‌ ಮತ್ತು ಭಾರತ್‌ ಬಯೋಟೆಕ್‌ ಒದ್ದಾಡುತ್ತಿವೆ. ಇಂಥಹ ಸಂದರ್ಭದಲ್ಲೇ ಅರವಿಂದ ಕೇಜ್ರಿವಾಲ್‌ ಇಂಥಹದ್ದೊಂದು ಬೇಡಿಕೆ ಇಟ್ಟಿದ್ದಾರೆ. ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಸೀರಂ ಇನ್ಸ್‌ಟ್ಯೂಟ್‌ ಮತ್ತು ಕೊವಾಕ್ಸಿನ್‌ ಲಸಿಕೆಯನ್ನು ಭಾರತ್‌ ಬಯೋಟೆಕ್‌ ತಯಾರಿಸುತ್ತಿವೆ. ಈ ಎರಡೂ ಲಸಿಕೆಗಳನ್ನು ದೇಶದಲ್ಲಿ ನೀಡಲಾಗುತ್ತಿದೆ. ರಷ್ಯಾದ ಸ್ಪುಟ್ನಿಕ್‌-ವಿ ಲಸಿಕೆಗೆ ಅನುಮತಿ ಸಿಕ್ಕಿದೆಯಾದರೂ ಅದರ ಉತ್ಪಾದನೆ ಇನ್ನೂ ಆರಂಭವಾಗಿಲ್ಲ. ಒಟ್ಟು ಐದು ಕಂಪನಿಗಳು ಇದನ್ನು ಉತ್ಪಾದಿಸಲಿವೆ. ಹೆಚ್ಚಿನ ಕಂಪನಿಗಳು ಲಸಿಕೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡರೆ ಪೂರೈಕೆ ಸಮಸ್ಯೆ ನೀಗಲಿದೆ ಎಂದು ಕೇಜ್ರಿವಾಲ್ ಪ್ರಧಾನಿಗೆ ಸಲಹೆ ನೀಡಿದ್ದಾರೆ. "ಕೇವಲ ಎರಡು ಕಂಪನಿಗಳು ಲಸಿಕೆಗಳನ್ನು ಉತ್ಪಾದಿಸುತ್ತಿವೆ. ಅವರು ತಿಂಗಳಿಗೆ ಆರರಿಂದ ಏಳು ಕೋಟಿ ಡೋಸ್‌ ಲಸಿಕೆ ಮಾತ್ರ ಉತ್ಪಾದಿಸುತ್ತಾರೆ. ಈ ರೀತಿಯಾಗಿ, ಎಲ್ಲರಿಗೂ ಲಸಿಕೆ ಹಾಕಲು ಎರಡು ವರ್ಷಗಳು ಬೇಕಾಗುತ್ತದೆ. ಆಗ ಅನೇಕ ಅಲೆಗಳು ಬರುತ್ತವೆ. ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ರಾಷ್ಟ್ರೀಯ ಯೋಜನೆಯನ್ನು ರೂಪಿಸುವುದು ಮುಖ್ಯ," ಎಂದು ಕೇಜ್ರಿವಾಲ್‌ ಹೇಳಿದ್ದಾರೆ. "... ಲಸಿಕೆಗಳನ್ನು ತಯಾರಿಸಲು ಹಲವಾರು ಕಂಪನಿಗಳನ್ನು ನಿಯೋಜಿಸಬೇಕು. ಕೇಂದ್ರವು ಈ ಎರಡೂ ಲಸಿಕೆಗಳ ಸೂತ್ರವನ್ನು ಸಂಗ್ರಹಿಸಿ ಇತರರಿಗೆ ನೀಡಬೇಕು. ಇದರಿಂದ ಅವರೂ ಲಸಿಕೆಗಳನ್ನು ಸುರಕ್ಷಿತವಾಗಿ ಉತ್ಪಾದಿಸಬಹುದು,” ಎಂದು ಅವರು ವಿವರಿಸಿದ್ದಾರೆ. "ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಇದನ್ನು ಸಾಧ್ಯವಾಗಿಸಲು ಕೇಂದ್ರಕ್ಕೆ ಅಧಿಕಾರವಿದೆ," ಎಂದು ಅವರು ಒತ್ತಿ ಹೇಳಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಪ್ರತಿ ಭಾರತೀಯನಿಗೂ ಲಸಿಕೆ ನೀಡಬೇಕಾಗಿದೆ, ಮತ್ತು ಅದರಲ್ಲಿ ನಮ್ಮ ಪಾತ್ರ ನಿರ್ವಹಿಸಲು ನಾವು ಸಿದ್ಧರಿದ್ದೇವೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಅವರು ತಿಳಿಸಿದ್ದಾರೆ. ನಾವು ದಿನ ನಿತ್ಯ 1.25 ಲಕ್ಷ ಡೋಸ್‌ ಲಸಿಕೆ ನೀಡುತ್ತಿದ್ದೇವೆ. ದಿನಕ್ಕೆ 3 ಲಕ್ಷ ಡೋಸ್‌ ಲಸಿಕೆಯನ್ನು ನೀಡಲಿದ್ದೇವೆ. ಮುಂದಿನ ಮೂರು ತಿಂಗಳ ಒಳಗಾಗಿ ಎಲ್ಲಾ ನಿವಾಸಿಗಳಿಗೂ ಲಸಿಕೆ ನೀಡಲು ಉದ್ದೇಶಿಸಿದ್ದೇವೆ. ಆದರೆ ನಾವು ಕೊರತೆಯನ್ನು ಎದುರಿಸುತ್ತಿದ್ದೇವೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.