ಬಂಗಾಳ ಗಡಿಯಲ್ಲಿ ಬಾಂಗ್ಲಾದೇಶದ ಇಬ್ಬರು ಗೋ ಕಳ್ಳಸಾಗಣೆದಾರರ ಹತ್ಯೆ

ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ನಡುವಿನ ಗಡಿಯಲ್ಲಿ ಅಕ್ರಮ ಗೋವು ಕಳ್ಳಸಾಗಣೆಯನ್ನು ಸಂಪೂರ್ಣವಾಗಿ ತಡೆಯಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಈ ಹಿಂದೆ ಹೇಳಿಕೆ ನೀಡಿತ್ತು. ಆದರೆ ಶುಕ್ರವಾರ ನಸುಕಿನಲ್ಲಿ ಬಾಂಗ್ಲಾದೇಶದ ಕಳ್ಳಸಾಗಣೆದಾರರು ಗೋ ಸಾಗಣೆ ವೇಳೆ ಬಿಎಸ್‌ಎಫ್‌ ಗುಂಡಿಗೆ ಬಲಿಯಾಗಿದ್ದಾರೆ.

ಬಂಗಾಳ ಗಡಿಯಲ್ಲಿ ಬಾಂಗ್ಲಾದೇಶದ ಇಬ್ಬರು ಗೋ ಕಳ್ಳಸಾಗಣೆದಾರರ ಹತ್ಯೆ
Linkup
ಕೋಲ್ಕೊತಾ: ಪಶ್ಚಿಮ ಬಂಗಾಳದ ಕೂಚ್‌ಬೆಹರ್‌ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಬಾಂಗ್ಲಾದೇಶದ ಇಬ್ಬರನ್ನು ಗಡಿ ಭದ್ರತಾ ಪಡೆ ಯೋಧರು ಶುಕ್ರವಾರ ನಸುಕಿನಲ್ಲಿ ಹತ್ಯೆಗೈದಿದ್ದಾರೆ. ''ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಸುಮಾರು 60 ದುಷ್ಕರ್ಮಿಗಳ ತಂಡವು ಗೋವುಗಳ ಅಕ್ರಮ ಸಾಗಣೆ ಮಾಡುತ್ತಿತ್ತು. ಗಡಿ ಭದ್ರತಾ ಸಿಬ್ಬಂದಿಯು ಇವರನ್ನು ತಡೆದಿದ್ದು, ಈ ವೇಳೆ ದುಷ್ಕರ್ಮಿಗಳು ಸೈನಿಕರ ಮೇಲೆಯೇ ದಾಳಿ ಮಾಡಿದ್ದಾರೆ. ಆಗ ಯೋಧರು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಹತರಾಗಿದ್ದಾರೆ,'' ಎಂದು ಬಿಎಸ್‌ಎಫ್‌ ಹೆಚ್ಚುವರಿ ಮಹಾ ನಿರ್ದೇಶಕ ವೈ.ಬಿ. ಖುರಾನಿಯಾ ತಿಳಿಸಿದ್ದಾರೆ. ''ಗಡಿಯಲ್ಲಿ ಗೋವುಗಳ ಕಳ್ಳಸಾಗಣೆಗೆ ಆಗಾಗ ಯತ್ನಿಸಲಾಗುತ್ತದೆ. ದುಷ್ಕರ್ಮಿಗಳು ಸುಧಾರಿತ ಸ್ಫೋಟಕ ಸಾಧನ ಸಿಡಿಸುವ ಮೂಲಕ ಬೇಲಿಯಿಂದ ಪಾರಾಗಿ ಒಳನುಸುಳುತ್ತಾರೆ. ಶುಕ್ರವಾರವೂ ಇದೇ ಪ್ರಯತ್ನ ಮಾಡಲಾಗಿದೆ. ಬಿಎಸ್‌ಎಫ್‌ ಯೋಧರು ದುಷ್ಕರ್ಮಿಗಳನ್ನು ತಡೆದಾಗ ಅವರು ಸರಳು ಹಾಗೂ ದೊಣ್ಣೆಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಆಗಲೇ ಯೋಧರು ಗುಂಡು ಹಾರಿಸಿದ್ದಾರೆ. ಆದರೂ, ಬಿಎಸ್‌ಎಫ್‌ನ ಇಬ್ಬರು ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ,'' ಎಂದು ವಿವರಿಸಿದ್ದಾರೆ. ಮತ್ತೊಂದೆಡೆ, ಘಟನೆ ವೇಳೆ ಭಾರತದ ನಾಗರಿಕನೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ''ಗಡಿಯಿಂದ 700 ಮೀಟರ್‌ ಒಳಗೆ ಭಾರತೀಯನ ಶವ ಪತ್ತೆಯಾಗಿದೆ. ಈತ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾನೋ ಅಥವಾ ಬೇರೆ ಕಾರಣಕ್ಕಾಗಿ ಮೃತಪಟ್ಟಿದ್ದಾನೋ ಎಂಬುದನ್ನು ವೈದ್ಯರು ತಿಳಿಸಬೇಕು,'' ಎಂದು ಪೊಲೀಸರು ಹೇಳಿದ್ದಾರೆ. ಅಂತಾರಾಷ್ಟ್ರೀಯ ಗಡಿಯಿಂದ ವಾಪಸ್ ಮರಳುವಂತೆ ಬಾಂಗ್ಲಾದೇಶಿ ಅಕ್ರಮ ನುಸುಳುಕೋರರಿಗೆ ಸೂಚಿಸಲಾಗಿತ್ತು. ಆದರೆ ಅದಕ್ಕೆ ಕಿವಿಗೊಡದ ಅವರು ಕಬ್ಬಿಣದ ಸರಳು ಬಳಸಿ ಹಲ್ಲೆಗೆ ಮುಂದಾಗಿದ್ದರು. ಹೀಗಾಗಿ ಆತ್ಮರಕ್ಷಣೆ ಕ್ರಮವಾಗಿ ಭದ್ರತಾ ಪಡೆ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ. ಹತ್ಯೆ ನಿಲ್ಲಿಸಿ ಎಂದ ಬಾಂಗ್ಲಾ ಮಾಡುತ್ತಿದ್ದ ಇಬ್ಬರನ್ನು ಬಿಎಸ್‌ಎಫ್‌ ಯೋಧರು ಹತ್ಯೆ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ''ಗಡಿಯಲ್ಲಿ ಬಾಂಗ್ಲಾ ನಾಗರಿಕರನ್ನು ಹತ್ಯೆ ಮಾಡುವುದನ್ನು ಬಿಎಸ್‌ಎಫ್‌ ನಿಲ್ಲಿಸಬೇಕು. ಬಾಂಗ್ಲಾ ನಾಗರಿಕರು ಭಾರತದ ಗಡಿಯೊಳಗೆ, ಭಾರತದ ನಾಗರಿಕರು ಬಾಂಗ್ಲಾ ಗಡಿಯೊಳಗೆ ಪ್ರವೇಶಿಸುತ್ತಾರೆ. ಇಂತಹ ಅತಿಕ್ರಮಣಕಾರರನ್ನು ನಿಭಾಯಿಸಲು ಶಿಷ್ಟಾಚಾರ ಇದೆ. ಆದರೆ, ಇವರ ಮೇಲೆ ಗುಂಡು ಹಾರಿಸಿದ್ದು ದುರದೃಷ್ಟಕರ,'' ಎಂದು ಬಾಂಗ್ಲಾ ಗೃಹ ಸಚಿವ ಅಸಾದುಜ್ಜಮನ್‌ ಖಾನ್‌ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಗಡಿ ಭಾಗದಿಂದ ಬಾಂಗ್ಲಾದೇಶಕ್ಕೆ ಗೋವುಗಳ ಕಳ್ಳ ಸಾಗಣೆ ಅವ್ಯಾಹತವಾಗಿ ನಡೆಯುತ್ತಿತ್ತು. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿದೆ ಎಂದು ಜುಲೈನಲ್ಲಿ ಹೇಳಿಕೆ ನೀಡಿತ್ತು. ಮೇ ತಿಂಗಳಿನಿಂದ ಒಂದೇ ಒಂದು ಗೋವಿನ ಕಳ್ಳಸಾಗಣೆ ನಡೆದಿಲ್ಲ ಎಂದು ಅದು ತಿಳಿಸಿತ್ತು. ಆದರೆ ಶುಕ್ರವಾರ ನಡೆದ ಈ ಘಟನೆಯು ಬಿಎಸ್‌ಎಫ್ ಎಷ್ಟೇ ನಿಗಾ ವಹಿಸಿದ್ದರೂ ಕಳ್ಳ ಸಾಗಣೆ ನಡೆಯುತ್ತಲೇ ಇದೆ ಎಂಬುದನ್ನು ತೋರಿಸಿದೆ. ಹೀಗಾಗಿ ಗಡಿಯಲ್ಲಿ ಬಿಎಸ್‌ಎಫ್ ಮತ್ತಷ್ಟು ಭದ್ರತೆ ನಿಯೋಜಿಸುವ ಸಾಧ್ಯತೆ ಇದೆ.