ಬೆಂಗಳೂರಿನಲ್ಲಿ ಹಳೆ ನೋಟು, ಕಲರ್‌ ಜೆರಾಕ್ಸ್‌ ನೋಟು ಮುದ್ರಿಸುತ್ತಿದ್ದ ಜಾಲ ಪತ್ತೆ..!

ಸುಮಾರು 25 ರಿಂದ 50 ಕೋಟಿವರೆಗೆ ಅಮಾನ್ಯಗೊಂಡಿರುವ ಹಳೆ ನೋಟುಗಳ ರಾಶಿಯನ್ನೇ ಸಂಗ್ರಹಿಸಲಾಗಿದೆ. ನೋಟುಗಳ ಬದಲಾವಣೆಗೆ ಶೇ 20 ರಿಂದ 40 ರಷ್ಟು ಹೊಸ ನೋಟು ನೀಡಬೇಕು ಎಂದು ಆರೋಪಿಗಳು ಹೇಳುತ್ತಿದ್ದರು.

ಬೆಂಗಳೂರಿನಲ್ಲಿ ಹಳೆ ನೋಟು, ಕಲರ್‌ ಜೆರಾಕ್ಸ್‌ ನೋಟು ಮುದ್ರಿಸುತ್ತಿದ್ದ ಜಾಲ ಪತ್ತೆ..!
Linkup
: ಕೇಂದ್ರ ಸರಕಾರ ಅಮಾನ್ಯಗೊಳಿಸಿರುವ ಒಂದು ಸಾವಿರ ಹಾಗೂ ಐನೂರು ಮುಖ ಬೆಲೆಯುಳ್ಳ ಹಳೆ ನೋಟು ಹಾಗೂ ಕಲರ್‌ ಜೆರಾಕ್ಸ್‌ ನೋಟುಗಳನ್ನು ಮುದ್ರಿಸಿ ವಂಚಿಸುತ್ತಿದ್ದ ಜಾಲವನ್ನು ಭೇದಿಸಿರುವ ಗೋವಿಂದ ಪುರ ಠಾಣೆ ಪೊಲೀಸರು, ಜಾಲದಲ್ಲಿ ಸಕ್ರಿಯರಾಗಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೆ. ಆರ್‌. ಪುರಂನ ಸುರೇಶ್‌ಕುಮಾರ್‌ (32), ರಾಜಾಜಿ ನಗರದ ರಾಮಕೃಷ್ಣ (32), ಆನೇಕಲ್‌ನ ಮಂಜುನಾಥ್‌ (43), ಹೊಂಗಸಂದ್ರದ ವೆಂಕಟೇಶ್‌(53), ದಯಾನಂದ (45) ಬಂಧಿತರು. ಆರೋಪಿಗಳಿಂದ 80 ಲಕ್ಷ ರೂ. ನಷ್ಟು ಅಮಾನ್ಯಗೊಂಡಿರುವ 1,000 ಹಾಗೂ 500 ಮುಖ ಬೆಲೆಯ ನೋಟುಗಳು ಹಾಗೂ ಐದು ಕೋಟಿ ರೂ. ಕಲರ್‌ ಜೆರಾಕ್ಸ್‌ ನೋಟುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದರು. ಆರೋಪಿಗಳ ಪೈಕಿ ಸುರೇಶ್‌, ರಾಮಕೃಷ್ಣ ಬಟ್ಟೆ ವ್ಯಾಪಾರಿಗಳಾಗಿದ್ದಾರೆ. ಮಂಜುನಾಥ್‌, ದಯಾನಂದ ರೈತರಾಗಿದ್ದು, ವೆಂಕಟೇಶ್‌ ಬಿಬಿಎಂಪಿಯ ಉಪ ಗುತ್ತಿಗೆದಾರನಾಗಿದ್ದಾನೆ ಎಂದು ಹೇಳಿದರು. ಆರೋಪಿಗಳು ತಮ್ಮಲ್ಲಿನ ಅಮಾನ್ಯಗೊಂಡಿರುವ ನೋಟುಗಳು ಹಾಗೂ ಜೆರಾಕ್ಸ್‌ ನೋಟುಗಳನ್ನು ಬದಲಾಯಿಸಲು ಗೋವಿಂದಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಎಚ್‌ಬಿಆರ್‌ ಬಡಾವಣೆ ಬಳಿಯ ಪೆಟ್ರೋಲ್‌ ಬಂಕ್‌ ಬಳಿ ಮಂಗಳವಾರ ಯತ್ನಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ನಿಷೇಧಿತ 500 ಮತ್ತು 1,000 ಮುಖಬೆಲೆಯ 45 ಲಕ್ಷ ರೂ. ಮೌಲ್ಯದ ನೋಟುಗಳನ್ನು ಜಪ್ತಿ ಮಾಡಲಾಗಿತ್ತು. ಬಳಿಕ ಮೂವರು ನಿಷೇಧಿತ ನೋಟುಗಳ ಬದಲಾವಣೆಗೆ ಬಂದಿರುವುದಾಗಿ ಹೇಳಿದ್ದರು. ವಿಚಾರಣೆ ನಂತರ ಇತರೆ ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ಪಡೆದು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಕೇರಳದಿಂದ ಬಂದಿದ್ದ ನೋಟುಗಳು: ಕೇರಳದ ಕಾಸರಗೋಡಿನಿಂದ ಕೋಟ್ಯಂತರ ರೂ. ನೋಟುಗಳು ಬರುತ್ತಿದ್ದು, ಅವುಗಳನ್ನು ಬದಲಾವಣೆ ಮಾಡಿದರೆ ಇಂತಿಷ್ಟು ಕಮಿಷನ್‌ ಸಿಗುತ್ತಿತ್ತು ಎಂದು ಆರೋಪಿಗಳು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕೇರಳದ ಬೇನೂರು - ಕುಂದಡುಕ್ಕುಂ ರಸ್ತೆಯಲ್ಲಿರುವ ಫಾರ್ಮ್ ಹೌಸ್‌ಗೆ ಆರೋಪಿಗಳನ್ನು ಕರೆದೊಯ್ದಾಗ ಅಲ್ಲಿಯೂ 500 ಮತ್ತು 1,000 ರೂ. ಮುಖ ಬೆಲೆಯ 35 ಲಕ್ಷ ರೂ. ಅಮಾನ್ಯಗೊಂಡಿರುವ ನೋಟುಗಳು ಹಾಗೂ ಐದು ಕೋಟಿ ಕಲರ್‌ ಜೆರಾಕ್ಸ್‌ ನೋಟುಗಳನ್ನು ಮೂಟೆಗಳಲ್ಲಿ ತುಂಬಿರುವುದು ಹಾಗೂ ಕೆಲವೊಂದು ನೋಟುಗಳನ್ನು ಥರ್ಮಕೋಲ್‌ ಮೇಲೆ ಅಂಟಿಸಿ ಬಂಡಲ್‌ ರೀತಿಯಲ್ಲಿ ಜೋಡಿಸಿರುವುದು ಕೂಡ ಕಂಡು ಬಂದಿದೆ. ಒಟ್ಟು 12 ಥರ್ಮಕೋಲ್‌ಗಳು ಹಾಗೂ 24 ಮೂಟೆಗಳಲ್ಲಿ ತುಂಬಿದ್ದ ಕಲರ್‌ ಜೆರಾಕ್ಸ್‌ ಮಾಡಿದ್ದ 5 ಕೋಟಿ ರೂ. ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಹಳೆ ನೋಟುಗಳ ವರ್ಗಾವಣೆ ದಂಧೆ ಮಾಡುತ್ತಿರುವುದಾಗಿ ಹೇಳಿ ಕೆಲ ಉದ್ಯಮಿಗಳನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಅವರನ್ನು ಫಾರ್ಮ್ ಹೌಸ್‌ಗೆ ಕರೆತಂದು ಕಂತೆಗಳನ್ನು ತೋರಿಸುತ್ತಿದ್ದರು. ಹಳೆ ನೋಟುಗಳನ್ನು ತೋರಿಸಿ ಕಮಿಷನ್‌ ಹೆಸರಿನಲ್ಲಿ ಹೊಸ ನೋಟುಗಳನ್ನು ಪಡೆದುಕೊಂಡು ವಂಚಿಸುವುದು ಆರೋಪಿಗಳ ಉದ್ದೇಶವಾಗಿತ್ತು ಎಂದು ಹೇಳಿದರು. ನೋಟಿನ ರಾಶಿ ನೋಡಲು ಶುಲ್ಕ: ಸುಮಾರು 25 ರಿಂದ 50 ಕೋಟಿವರೆಗೆ ಅಮಾನ್ಯಗೊಂಡಿರುವ ಹಳೆ ನೋಟುಗಳ ರಾಶಿಯನ್ನೇ ಸಂಗ್ರಹಿಸಲಾಗಿದೆ. ನೋಟುಗಳ ಬದಲಾವಣೆಗೆ ಶೇ 20ರಿಂದ 40 ರಷ್ಟು ಹೊಸ ನೋಟು ನೀಡಬೇಕು ಎಂದು ಆರೋಪಿಗಳು ಹೇಳುತ್ತಿದ್ದರು. ಇದರ ಭಾಗವಾಗಿ ಅಮಾನ್ಯಗೊಂಡಿರುವ ನೋಟಿನ ರಾಶಿ ನೋಡುವವರು ಮೊದಲು ಐದು ಲಕ್ಷ ರೂ. ಪಾವತಿಸಬೇಕಿತ್ತು. ಹಣ ಬದಲಾವಣೆ ಮಾಡಿಸದಿದ್ದರೆ ಪಾವತಿಸಿರುವ ಐದು ಲಕ್ಷ ವಾಪಸ್‌ ನೀಡುತ್ತಿರಲಿಲ್ಲ ಎಂದು ತಿಳಿದು ಬಂದಿದೆ.