ವೀರಶೈವ, ಲಿಂಗಾಯತರು ಒಂದಾಗಬಾರದೇ ಎಂದ ಎಂಬಿ ಪಾಟೀಲ

ನಮ್ಮಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳಿವೆ. ಒಂದೆರಡು ದಿನದಲ್ಲಿ ಬಗೆಹರಿಯಲಿದೆ ಎನ್ನಲಾಗದು. ಸಮುದಾಯ ಒಂದುಗೂಡಿಸಲು ಸಾಮಾನ್ಯ ಕಾರ್ಯಕರ್ತನಾಗಿ ಪ್ರಯತ್ನ ನಡೆಸುತ್ತೇನೆ. ನಾನು ನೇತೃತ್ವ ವಹಿಸುವುದಿಲ್ಲ

ವೀರಶೈವ, ಲಿಂಗಾಯತರು ಒಂದಾಗಬಾರದೇ ಎಂದ ಎಂಬಿ ಪಾಟೀಲ
Linkup
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆ ಬಳಿಕ ವೀರಶೈವ ಹಾಗೂ ಲಿಂಗಾಯಿತ ಸಮುದಾಯವನ್ನು ಒಟ್ಟುಗೂಡಿಸುವುದಕ್ಕೆ ಸಾಮೂಹಿಕ ನಾಯಕತ್ವದಲ್ಲಿ ಚರ್ಚಿಸಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ. ನಿವಾಸದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,''ವೀರಶೈವ, ಲಿಂಗಾಯತರು ಒಂದುಗೂಡಬಾರದೆ? ಒಂದುಗೂಡಿದರೆ ಯಾರಿಗೆ ಏನು ಸಮಸ್ಯೆಯೋ ಗೊತ್ತಿಲ್ಲ? ಚುನಾವಣೆಗೂ ಮುನ್ನವೇ ಪ್ರಯತ್ನ ಆರಂಭಿಸಿದರೆ ರಾಜಕೀಯ ಬಣ್ಣ ನೀಡಿ ಅಪಪ್ರಚಾರ ಮಾಡಲಾಗುತ್ತದೆ. ಹಾಗಾಗಿ ಚುನಾವಣೆ ನಂತರ ಪಂಚ ಪೀಠಾಧೀಶರು, ವಿರಕ್ತ ಮಠಗಳು, ವೀರಶೈವ ಮಹಾಸಭಾ, ಜಾಗತಿಕ ಲಿಂಗಾಯಿತ ಮಹಾಸಭಾ ಸೇರಿದಂತೆ ಎಲ್ಲ ಸಮಾಲೋಚಿಸಿ ಸಮುದಾಯಕ್ಕೆ ಒಳಿತಾಗುವ ನಿಟ್ಟಿನಲ್ಲಿ ಮುಂದುವರಿಯುತ್ತೇವೆ. ಈ ವಿಚಾರದ ಇತ್ತೀಚೆಗೆ ಹೇಳಿಕೆ ನೀಡಿದ್ದೇನೆಯೇ ಹೊರತು ಹೋರಾಟ, ಪ್ರತ್ಯೇಕತೆ ಕೂಗು ಎಂಬ ಪದ ಪ್ರಸ್ತಾಪಿಸಿಲ್ಲ'' ಎಂದು ಹೇಳಿದರು. ''ನಮ್ಮಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳಿವೆ. ಒಂದೆರಡು ದಿನದಲ್ಲಿ ಬಗೆಹರಿಯಲಿದೆ ಎನ್ನಲಾಗದು. ಸಮುದಾಯ ಒಂದುಗೂಡಿಸಲು ಸಾಮಾನ್ಯ ಕಾರ್ಯಕರ್ತನಾಗಿ ಪ್ರಯತ್ನ ನಡೆಸುತ್ತೇನೆ. ನಾನು ನೇತೃತ್ವ ವಹಿಸುವುದಿಲ್ಲ''ಎಂದರು. ''ಈ ಹಿಂದೆ ವೀರಶೈವ ಸೇರಿದಂತೆ 99 ಉಪ ಪಂಗಡಗಳನ್ನು ಸೇರಿಸಿ ಪ್ರತ್ಯೇಕ ಧರ್ಮದ ಮಾನ್ಯತೆ ಕೋರಲಾಗಿತ್ತು. ಅದು ಫಲಪ್ರದವಾಗಿದ್ದರೆ ಅಲ್ಪಸಂಖ್ಯಾತ ಸ್ಥಾನಮಾನ ದೊರೆತು ಸೌಲಭ್ಯ ಸಿಗುತ್ತಿತ್ತು. ಈಗ ಅನಿವಾರ್ಯವಾಗಿ ಪಂಚಮಸಾಲಿ ಸೇರಿದಂತೆ ಕೆಲ ಉಪಪಂಗಡಗಳನ್ನು ಪ್ರವರ್ಗ-2ಎಗೆ ಸೇರಿಸುವಂತೆ ಒತ್ತಾಯಿಸುವಸ್ಥಿತಿ ಬಂದಿದೆ. ಅದು ತಪ್ಪಲ್ಲ. ಈ ಹಿಂದೆ ಚಿತ್ರದುರ್ಗದಲ್ಲಿನಾನು ಬೆಂಬಲಿಸಿದ್ದೆ,'' ಎಂದು ನೆನಪಿಸಿಕೊಂಡರು. ನಮ್ಮಲ್ಲೂ ಸ್ವಲ್ಪ ಲೋಪವಾಗಿದೆ ''ಈ ಹಿಂದೆ ಪ್ರಯತ್ನ ನಡೆಸಿದಾಗ ಸಮಯಾವಕಾಶ ಕಡಿಮೆಯಿತ್ತು. ನಮ್ಮಲ್ಲೂಸ್ವಲ್ಪ ಲೋಪದೋಷವಾಗಿದೆ. ತರಾತುರಿಯಲ್ಲಿಪ್ರಯತ್ನ ನಡೆದಿದ್ದರಿಂದ ಚುನಾವಣೆಯಿದ್ದ ಕಾರಣ ರಾಜಕೀಯ ಬಣ್ಣ ನೀಡಲಾಯಿತು. ತರಾತುರಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿವಿಫಲರಾದೆವು. ವೀರಶೈವ ಲಿಂಗಾಯಿತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವಂತೆ ವೀರಶೈವ ಮಹಾಸಭಾ ಮನವಿ ಮಾಡಿತ್ತು. ಆದರೆ ಶಬ್ದದ ತಾಂತ್ರಿಕ ಬಳಕೆ ತೊಂದರೆ ಕಾರಣಕ್ಕೆ ಬೇಡಿಕೆ ಈಡೇರಲಿಲ್ಲ. ಹಾಗಾಗಿ ವೀರಶೈವ ಒಳಗೊಂಡಂತೆ ಪ್ರತ್ಯೇಕ ಧರ್ಮದ ಬೇಡಿಕೆಗೆ ಹೋರಾಟ ನಡೆಸಲಾಯಿತು. ಮುಂದೆ ಭಿನ್ನಾಭಿಪ್ರಾಯವಿಲ್ಲದಂತೆ ಒಮ್ಮತದ ನಿರ್ಧಾರ ಕೈಗೊಳ್ಳಲು ಪ್ರಯತ್ನಿಸಲಾಗುವುದು,'' ಎಂದು ಹೇಳಿದರು. ಕಾಂಗ್ರೆಸ್‌ಗೆ ಸಂಬಂಧವಿಲ್ಲ, ಹಾನಿಯೂ ಇಲ್ಲ ''ಸಮುದಾಯದ ಬೇಡಿಕೆಗೂ ಕಾಂಗ್ರೆಸ್‌ ಪಕ್ಷಕ್ಕೂ ಸಂಬಂಧವಿಲ್ಲ. ಹಿಂದೆಯೂ ಇಲ್ಲ, ಈಗಲೂ ಇಲ್ಲ ಮುಂದೆಯೂ ಯಾವುದೇ ಸಂಬಂಧವಿರುವುದಿಲ್ಲ. ನನ್ನ ಹೇಳಿಕೆಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಮುಜುಗರವಾಗಿಲ್ಲ. ನನ್ನ ಹೇಳಿಕೆ ಬಗ್ಗೆ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರಿಗೆ ಗೊತ್ತಿರಲಿಲ್ಲ. ಬಳಿಕ ನಾನು ಅವರಿಗೆ ಮಾಹಿತಿ ನೀಡಿದ್ದೇನೆ. ನಮ್ಮ ಹೋರಾಟದಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿಲ್ಲ. 2008 ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿಪಕ್ಷ ಪಡೆದ ಲಿಂಗಾಯತ ಮತ ಪ್ರಮಾಣ ಸಮಾನವಾಗಿದೆ'' ಎಂದರು. ಯಡಿಯೂರಪ್ಪ ಜತೆ ಹೋಲಿಸಬೇಡಿ ''ಯಾವುದೇ ಪಕ್ಷ, ಸಮುದಾಯದಲ್ಲಿ ನಾವೇ ನಾಯಕರೆಂದುಕೊಂಡರೆ ಆಗುವುದಿಲ್ಲ. ಜನ ಒಪ್ಪಿ ಬೆಂಬಲಿಸಿದರಷ್ಟೇ ನಾಯಕರಾಗುತ್ತೇವೆ,'' ಎಂದು ತಿಳಿಸಿದರು. ಯಡಿಯೂರಪ್ಪ ನಂತರ ಲಿಂಗಾಯತ ನಾಯಕರಾಗಲು ಮುಂದಾಗಿದ್ದೀರಾ ಎಂಬ ಪ್ರಶ್ನೆಗೆ, ''ಯಡಿಯೂರಪ್ಪ ದೊಡ್ಡ ನಾಯಕರು. ಅವರಿಗೆ ನನ್ನನ್ನು ಹೋಲಿಸಬಾರದು. ನಾವೆಲ್ಲಾಎರಡನೇ ಹಂತದವರು'' ಎಂದರು. ''ಯಡಿಯೂರಪ್ಪನವರು ಸಮುದಾಯದ ಪ್ರಮುಖ ನಾಯಕರು. ಚುನಾವಣೆ ಬಳಿಕ ಆ ಸಂದರ್ಭ ಬಂದಾಗ ಯಡಿಯೂರಪ್ಪ, ಹೊರಟ್ಟಿ , ಮಾಜಿ ಸಚಿವರಾದ ಶರಣ ಪ್ರಕಾಶ್‌ ಪಾಟೀಲ್‌, ಈಶ್ವರ ಖಂಡ್ರೆ ಸೇರಿದಂತೆ ಎಲ್ಲರೊಂದಿಗೆ ಚರ್ಚಿಸಲಾಗುವುದು'' ಎಂದು ತಿಳಿಸಿದರು. ರಾಜಕೀಯ ಅಜೆಂಡಾ ಇಲ್ಲ ಪ್ರತಿಕೂಲ ಪರಿಣಾಮದ ಭಯದಿಂದ ಹೋರಾಟದಿಂದ ಹಿಂದೆ ಸರಿಯುತ್ತೀರಾ ಎಂಬ ಪ್ರಶ್ನೆಗೆ ''ನನ್ನ ತಂದೆ, ತಾಯಿ ಬಿಟ್ಟು ಯಾರಿಗೂ ಭಯಪಡುವುದಿಲ್ಲ. ನಾನು ಹಿಂದೆ ತಪ್ಪು ಮಾಡಿಲ್ಲ. ತಪ್ಪು ಮಾಡುವುದೂ ಇಲ್ಲ.ಇದರಲ್ಲಿ ನನಗೆ ಯಾವುದೇ ರಾಜಕೀಯ ಅಜೆಂಡಾ ಇಲ್ಲ, ಮುಂದೆಯೂ ಇರುವುದಿಲ್ಲ'' ಎಂದು ಸ್ಪಷ್ಟಪಡಿಸಿದರು. ''ಈ ಪ್ರಯತ್ನದಲ್ಲಿ ಯಾರೂ ನನ್ನ ಕೈಬಿಟ್ಟಿಲ್ಲ. ಮಾಜಿ ಸಚಿವ ವಿನಯ್‌ ಕುಲಕರ್ಣಿ, ಸಚಿವ ಮುರುಗೇಶ್‌ ನಿರಾಣಿ ಅವರು ವೀರಶೈವ-ಲಿಂಗಾಯಿತರು ಒಂದುಗೂಡಬೇಕು ಎಂದು ಹೇಳಿದರು.