ಬೆಂಗಳೂರು: ಮೈಸೂರು ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿರುವ ಗೂಡ್ಸ್‌ಶೆಡ್ ರಸ್ತೆಯು ಮೂರು ತಿಂಗಳ ಕಾಲ ಬಂದ್ ಆಗುತ್ತಿದೆ. ಬಿಬಿಎಂಪಿಯು ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದ ವಾಹನ ಸಂಚಾರ ನಿಷೇಧಿಸಲಾಗುತ್ತಿದೆ.
ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯ ಅಂಬೇಡ್ಕರ್ ಡೌನ್ ರಾರಯಂಪ್‌ನಿಂದ ಡಾ. ಟಿ.ಸಿ.ಎಂ ರಾಯನ್ ರಸ್ತೆ ಜಂಕ್ಷನ್‌ವರೆಗಿನ 1.5 ಕಿ.ಮೀ ಮಾರ್ಗದ ಗೂಡ್ಸ್‌ಶೆಡ್ ರಸ್ತೆಗೆ ವೈಟ್‌ಟಾಪಿಂಗ್ ಮಾಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ಸಂಚಾರ ಪೊಲೀಸರು ನಿರ್ಬಂಧಿಸಿದ್ದಾರೆ. ಹೀಗಾಗಿ, ಮೆಜೆಸ್ಟಿಕ್ ಕಡೆಗೆ ಸಾಗುವ ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕಿದೆ.
ಮೈಸೂರು ರಸ್ತೆ, ಚಾಮರಾಜಪೇಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ಮೆಜೆಸ್ಟಿಕ್ ರೈಲು ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣ, ರೇಸ್‌ಕೋರ್ಸ್ ರಸ್ತೆ, ಮಲ್ಲೇಶ್ವರ, ವಿಧಾನಸೌಧದತ್ತ ತೆರಳಬೇಕಿದ್ದವರು ಮೂಲಕ ಸಂಚರಿಸುತ್ತಿದ್ದರು. ಪಾಲಿಕೆಯು ವೈಟ್‌ಟಾಪಿಂಗ್ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 3-4 ಕಿ.ಮೀ ಸುತ್ತು ಹಾಕಿಕೊಂಡು ಮೆಜೆಸ್ಟಿಕ್ ತಲುಪಬೇಕಿದೆ. ಸಂಚಾರ ಪೊಲೀಸರು ಸೂಚಿಸಿರುವ ಪರ್ಯಾಯ ಮಾರ್ಗಗಳಲ್ಲಿ ಅಧಿಕ ವಾಹನ ದಟ್ಟಣೆ ಉಂಟಾಗಲಿದೆ. ವಾಹನ ಸವಾರರು ಕನಿಷ್ಠ 3 ತಿಂಗಳು ಕಾಲ ಟ್ರಾಫಿಕ್‌ಜಾಮ್‌ನ ನರಕವ್ಯೂಹದಲ್ಲಿ ಸಿಲುಕಿ ಹಾಕಿಕೊಂಡು ಹೈರಾಣಾಗಲಿದ್ದಾರೆ.
ಹಂತ ಹಂತವಾಗಿ ವೈಟ್‌ಟಾಪಿಂಗ್:
ಪಾಲಿಕೆಯು ತುಂಬಾ ಕಿರಿದಾಗಿರುವ ಗೂಡ್ಸ್‌ಶೆಡ್ ರಸ್ತೆಯಲ್ಲಿ ಹಂತ ಹಂತವಾಗಿ ವೈಟ್‌ಟಾಪಿಂಗ್ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಿದೆ. ಹೀಗಾಗಿ, ಮೊದಲಿಗೆ ಬೇಲಿ ಮಠ ರಸ್ತೆವರೆಗೆ, ಬಳಿಕ ಕಾಟನ್‌ಪೇಟೆ ಅಡ್ಡರಸ್ತೆವರೆಗೆ ವಾಹನ ಸಂಚಾರ ನಿಷೇಧಿಸಿ ಕೆಲಸ ಮಾಡಲು ಉದ್ದೇಶಿಸಲಾಗಿದೆ. ಹೀಗಾಗಿ, ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಗುರುತಿಸಲಾಗಿದೆ.
ಮೈಸೂರು ರಸ್ತೆ ಕಡೆಯಿಂದ ಮೆಜೆಸ್ಟಿಕ್ ಕಡೆ ಸಾಗುವವರು ಮೇಲ್ಸೇತುವೆ ಏರದೆ, ಟ್ಯಾಂಕ್ ಬಂಡ್ ರಸ್ತೆ ಮಾರ್ಗವಾಗಿ ಬಿನ್ನಿಮಿಲ್ ಸರ್ಕಲ್‌ನಲ್ಲಿ ಬಲ ತಿರುವು ಪಡೆದು, ಟಿ.ಸಿ.ಎಂ.ರಾಯನ್ ರಸ್ತೆ ಜಂಕ್ಷನ್ ಗೂಡ್ಸ್‌ಶೆಡ್ ರಸ್ತೆ ಮೂಲಕ ಗುಬ್ಬಿತೋಟದಪ್ಪ ರಸ್ತೆ, ಶಾಂತಲಾ ಜಂಕ್ಷನ್‌ಗೆ ಸೇರಬಹುದಾಗಿದೆ. ಇಲ್ಲವೇ ಮೇಲ್ಸೇತುವೆಯಲ್ಲಿಯೇ ಪುರಭವನ, ಕೆ.ಜಿ.ರಸ್ತೆ ಮಾರ್ಗವಾಗಿ ಮೆಜೆಸ್ಟಿಕ್ ತಲುಪಬೇಕಿದೆ. ಚಾಮರಾಜಪೇಟೆ ಸುತ್ತಮುತ್ತಲ ಪ್ರದೇಶಗಳ ವಾಹನ ಸವಾರರು ಕೂಡ ಇದೇ ಮಾರ್ಗದಲ್ಲಿಸಂಚರಿಸಬೇಕು.
ಕಾಟನ್‌ಪೇಟೆ ಅಡ್ಡರಸ್ತೆಯಿಂದಾಚೆಗೆ ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಗೂಡ್ಸ್‌ಶೆಡ್ ರಸ್ತೆಯು ಪೂರ್ಣ ಬಂದ್ ಆಗಲಿದೆ. ಆಗ ವಾಹನ ಸವಾರರು ಟ್ಯಾಂಕ್ ಬಂಡ್ ರಸ್ತೆ, ಬಿನ್ನಿಮಿಲ್, ಮಾಗಡಿ ರಸ್ತೆಯ ಕುಷ್ಠರೋಗಿಗಳ ಆಸ್ಪತ್ರೆ, ಹಳೆ ಮೈಸೂರು ರಸ್ತೆ, ಓಕಳೀಪುರಂ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಬಹುದಾಗಿದೆ.
ಹಂತ ಹಂತವಾಗಿ ಕಾಮಗಾರಿ ':
''ಗೂಡ್ಸ್‌ಶೆಡ್ ರಸ್ತೆಯು ತುಂಬಾ ಕಿರಿದಾಗಿದ್ದು, ವೈಟ್‌ಟಾಪಿಂಗ್ ಮತ್ತು ಪಾದಚಾರಿ ಮಾರ್ಗದ ಅಭಿವೃದ್ಧಿಯು ಸವಾಲಾಗಿ ಪರಿಣಮಿಸಲಿದೆ. ವಾಹನ ಸಂಚಾರಕ್ಕೆ ಹೆಚ್ಚಿನ ತೊಡಕಾಗದಂತೆ ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲಾಗುವುದು. ಈ ರಸ್ತೆಯು ಒಂದೂವರೆ ಕಿ.ಮೀ ಉದ್ದವಿದ್ದು, 90 ದಿನಗಳಲ್ಲಿ ಕೆಲಸ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ,'' ಎಂದು ಪಾಲಿಕೆಯ ಮುಖ್ಯ ಎಂಜಿನಿಯರ್ (ಯೋಜನೆ) ಲೋಕೇಶ್ ಅವರು 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.
ಎರಡೂ ಕಡೆ ಪಾದಚಾರಿ ಮಾರ್ಗ ಅಭಿವೃದ್ಧಿ
''ಗೂಡ್ಸ್‌ಶೆಡ್ ರಸ್ತೆಯಲ್ಲಿ 300 ಎಂಎಂ ಮತ್ತು 150 ಎಂಎಂ ವ್ಯಾಸದ ಕುಡಿಯುವ ನೀರಿನ ಕೊಳವೆಗಳನ್ನು ಅಳವಡಿಸಬೇಕಿದೆ. ಆನಂತರ ಮೂಲಸೌಕರ್ಯಗಳನ್ನು ಸ್ಥಳಾಂತರಿಸಿ ಕಾಮಗಾರಿ ಆರಂಭಿಸಲಾಗುವುದು. ರಸ್ತೆಯು 7 ಮೀಟರ್ ಅಗಲವಿದ್ದು, ಎರಡೂ ಕಡೆಯು ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುವುದು. ಈ ಮಾರ್ಗದಡಿಯಲ್ಲಿಯೇ ಕುಡಿಯುವ ನೀರು, ಒಳಚರಂಡಿ, ಒಎಫ್‌ಸಿ, ಬೆಸ್ಕಾಂ ಕೇಬಲ್‌ಗಳಿಗೆ ಡಕ್ಟ್ಗಳನ್ನು ಹಾಕಲಾಗುವುದು. ಹಾಗೆಯೇ ರಸ್ತೆಯಲ್ಲಿ ಪ್ರತಿ 100 ಮೀಟರ್‌ಗೆ ಅಡ್ಡಲಾಗಿ ಡಕ್ಟ್‌ಗಳನ್ನು ಅಳವಡಿಸಲಾಗುವುದು,'' ಎಂದು ಲೋಕೇಶ್ ಹೇಳಿದರು.
ಪುರಭವನ ಕಡೆಗಿನ ಮೇಲ್ಸೇತುವೆಯೂ ಬಂದ್
ಮೈಸೂರು ರಸ್ತೆ ಕಡೆಯಿಂದ ಪುರಭವನದತ್ತ ಸಂಪರ್ಕ ಕಲ್ಪಿಸುವ ಬಾಲಗಂಗಾಧರನಾಥ ಮೇಲ್ಸೇತುವೆಯ ಡೌನ್ ರ್ಯಾಂಪ್‌ನಿಂದ ಎಸ್‌ಜೆಪಿ ರಸ್ತೆವರೆಗೆ ಶುಕ್ರವಾರ ರಾತ್ರಿಯಿಂದ ವೈಟ್‌ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೀಗಾಗಿ, ಕೆ.ಆರ್.ಮಾರುಕಟ್ಟೆ ಡೌನ್ ರ್ಯಾಂಪ್‌ನಿಂದ ಟೌನ್‌ಹಾಲ್ ಕಡೆಗಿನ ಮೇಲ್ಸೇತುವೆಯಲ್ಲಿ 15 ದಿನಗಳ ಕಾಲ ವಾಹನ ಸಂಚಾರ ನಿಷೇಧಿಸಲಾಗುತ್ತಿದೆ.
''ಮೈಸೂರು ರಸ್ತೆಯಿಂದ ಪುರಭವನದ ಕಡೆಗಿನ ಮೇಲ್ಸೇತುವೆಯ ಡೌನ್ ರ್ಯಾಂಪ್‌ನಿಂದ ಎಸ್‌ಜೆಪಿ ರಸ್ತೆವರೆಗೆ (300 ಮೀಟರ್ ಉದ್ದ) ವೈಟ್‌ಟಾಪಿಂಗ್ ಮಾಡಬೇಕಿದೆ. ಅಲ್ಲದೆ, ಮಳೆ ಬಂದಾಗಲೆಲ್ಲಾ ಉಂಟಾಗುತ್ತಿರುವ ಪ್ರವಾಹ ನಿಯಂತ್ರಣಕ್ಕೆ ಕಲ್ವರ್ಟ್‌ನ ಪುನರ್ ನವೀಕರಣ ಕಾಮಗಾರಿಯನ್ನೂ ಕೈಗೊಳ್ಳಲಾಗುತ್ತಿದೆ. ಈ ಕೆಲಸ ಮುಗಿದರೆ, ಪ್ರವಾಹ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗಲಿದೆ. ಮೇಲ್ಸೇತುವೆಯ ಒಂದು ಭಾಗವನ್ನು ಬಂದ್ ಮಾಡಿ ಕಾಮಗಾರಿ ಕೈಗೊಳ್ಳಲು ಸಂಚಾರ ಪೊಲೀಸರು 15 ದಿನ ಕಾಲಾವಕಾಶ ನೀಡಿದ್ದರೂ, 10 ದಿನದಲ್ಲಿ ಕೆಲಸ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ,'' ಎಂದು ಲೋಕೇಶ್ ತಿಳಿಸಿದರು.