ಲಾಕ್‌ಡೌನ್‌ನಿಂದ ಹಟ್ಟಿ ಚಿನ್ನದ ಗಣಿ ಕಂಪನಿಗೆ 40 ಕೋಟಿ ರೂ. ನಷ್ಟ

ಕೊರೊನಾ ಲಾಕ್‌ಡೌನ್‌ನಿಂದ ಹಲವು ದಿನಗಳ ಕಾಲ ಉತ್ಪಾದನೆ ಸ್ಥಗಿತಗೊಂಡಿದ್ದರಿಂದ ಹಟ್ಟಿ ಚಿನ್ನದ ಗಣಿ ಕಂಪನಿಗೆ 40 ಕೋಟಿ ರೂ. ನಷ್ಟವಾಗಿದೆ ಎಂದು ಗಣಿ ಕಂಪನಿ ನಿಗಮದ ಅಧ್ಯಕ್ಷ ಮಾನಪ್ಪ ವಜ್ಜಲ್‌ ತಿಳಿಸಿದ್ದಾರೆ.

ಲಾಕ್‌ಡೌನ್‌ನಿಂದ ಹಟ್ಟಿ ಚಿನ್ನದ ಗಣಿ ಕಂಪನಿಗೆ 40 ಕೋಟಿ ರೂ. ನಷ್ಟ
Linkup
(ರಾಯಚೂರು): ಕೊರೊನಾ ಲಾಕ್‌ಡೌನ್‌ನಿಂದ ಹಲವು ದಿನ ಉತ್ಪಾದನೆ ಸ್ಥಗಿತಗೊಂಡಿದ್ದರಿಂದ ಹಟ್ಟಿ ಚಿನ್ನದ ಗಣಿ ಕಂಪನಿಗೆ 40 ಕೋಟಿ ರೂ. ನಷ್ಟವಾಗಿದೆ ಎಂದು ಗಣಿ ಕಂಪನಿ ನಿಗಮದ ಅಧ್ಯಕ್ಷ ಮಾನಪ್ಪ ವಜ್ಜಲ್‌ ಹೇಳಿದರು. ಉತ್ಪಾದನೆ ಹೆಚ್ಚಳ ಕುರಿತು ಚರ್ಚಿಸಲು ಅಧಿಕಾರಿಗಳ ಜತೆ ಸ್ಥಳೀಯ ಚಿನ್ನದ ಗಣಿ ಕಂಪನಿಯ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. " ವೇಳೆ ಒಟ್ಟು 35 ದಿನ ಉತ್ಪಾದನೆ ಸ್ಥಗಿತಗೊಂಡಿದ್ದರೂ ಎಲ್ಲ ಕಾರ್ಮಿಕರಿಗೆ ವೇತನ ನೀಡಲಾಗಿದೆ. ಜೂ.17 ರಿಂದ ಶೇ.50 ರಷ್ಟು ಕಾರ್ಮಿಕರನ್ನು ಬಳಸಿ ಉತ್ಪಾದನೆ ಕೈಗೊಳ್ಳಲಾಗುತ್ತಿದೆ. ಏಪ್ರಿಲ್‌, ಮೇ ಹಾಗೂ ಜೂನ್‌ ವೇಳೆ 400 ಕೆ.ಜಿ. ಚಿನ್ನ ಉತ್ಪಾದಿಸುವ ಗುರಿಗೆ ಕೇವಲ 205 ಕೆ.ಜಿ. ಚಿನ್ನ ಉತ್ಪಾದಿಸಲಾಗಿದೆ. ಮುಂದಿನ ದಿನಗಳಲ್ಲಿ ಅಧಿಕ ಚಿನ್ನ ಉತ್ಪಾದಿಸುವ ಉದ್ದೇಶದಿಂದ ಅಧಿಕಾರಿಗಳ ಸಭೆ ನಡೆಸಲಾಯಿತು. ಕಾರ್ಮಿಕರು ಅನಗತ್ಯ ರಜೆ ಪಡೆಯದೇ ಉತ್ಪಾದನೆಗೆ ಮುಂದಾಗುವಂತೆ ಸೂಚಿಸಲಾಗಿದೆ," ಎಂದರು. "ಸೇವೆಯಲ್ಲಿದ್ದಾಗ ಮೃತಪಟ್ಟ ಕಾರ್ಮಿಕರ ಕುಟುಂಬದ ಒಬ್ಬರಿಗೆ ಹಾಗೂ ಗಣಿ ಕಂಪನಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಶೀಘ್ರವೇ ಉದ್ಯೋಗ ನೀಡಲಾಗುವುದು. ಖಾಲಿ ಇರುವ ಹುದ್ದೆಗಳ ಭರ್ತಿಗೆ ಕಳೆದ ನಿರ್ದೇಶಕ ಮಂಡಳಿಯಲ್ಲಿ ಚರ್ಚಿಸಲಾಗಿದ್ದು, ಮಂಡಳಿಯ ಸರ್ವಾನುಮತ ಒಪ್ಪಿಗೆ ನಂತರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು," ಎಂದು ತಿಳಿಸಿದರು. ಮೆಡಿಕಲ್‌ ಅನ್‌ಫಿನ್‌ ಯೋಜನೆ ಸ್ಥಗಿತ "ಸೇವೆಯಲ್ಲಿರುವ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ಒದಗಿಸುವ ಮೆಡಿಕಲ್‌ ಅನ್‌ಫಿಟ್‌ ಯೋಜನೆಯನ್ನು ಸರಕಾರ ಸ್ಥಗಿತಗೊಳಿಸಿದೆ. ಕಾರ್ಮಿಕರ ಕುಟುಂಬಗಳಿಗೆ ಉದ್ಯೋಗ ಮೀಸಲಿಡುವ ಬದಲು ಹೊಸಬರಿಗೆ ಅವಕಾಶ ನೀಡಬೇಕೆಂದು ಸರಕಾರ ಸೂಚನೆ ನೀಡಿದೆ. ಆದರೂ ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು," ಎಂದ ಅವರು, ''ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಶಾಶ್ವತ ಕುಡಿಯುವ ನೀರು, ರಸ್ತೆ, ಚರಂಡಿ ಅಭಿವೃದ್ಧಿ, ಸ್ಮಶಾನಕ್ಕೆ ಜಾಗ ಸೌಲಭ್ಯ ಕಲ್ಪಿಸುವ ಸಂಬಂಧ ಈಗಾಗಲೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿದೆ. ಮುಂದಿನ ಸಭೆಯಲ್ಲಿ ಹಣ ಬಿಡುಗಡೆಗೆ ಪ್ರಯತ್ನಿಸಲಾಗುವುದು," ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಡಾ.ಶಿವಬಸಪ್ಪ, ಗಿರಿಮಲ್ಲನಗೌಡ, ಗುಂಡಪ್ಪಗೌಡ ಪಾಟೀಲ್‌, ಪರಮೇಶ ಯಾದವ್‌, ಶಂಕರಗೌಡ ಬಳಗಾನೂರು, ಗುಂಡಪ್ಪಗೌಡ ಗುರಿಕಾರ, ಶಿವರಾಜಗೌಡ ಗುರಿಕಾರ, ಗೋವಿಂದ ನಾಯಕ, ವೆಂಕೋಬ್‌ ಪವಾಡೆ, ರಮೇಶ ಹುಳಿಮೇಶ್ವರ ಇತರರಿದ್ದರು.