ಲಾಕ್‌ಡೌನ್, ವರ್ಕ್‌ ಫ್ರಂ ಹೋಂ ಎಫೆಕ್ಟ್: ಬೆಂಗಳೂರಿನಲ್ಲಿ 8 ಸಾವಿರ ಪಿಜಿಗಳು ಬಂದ್‌..!

ಕೊರೊನಾ ಬಳಿಕ ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 12 ಸಾವಿರ ಪಿಜಿಗಳಲ್ಲಿ ಕೇವಲ ನಾಲ್ಕು ಸಾವಿರ ಪಿಜಿಗಳು ಮಾತ್ರ ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿವೆ. ಉಳಿದ 8 ಸಾವಿರ ಪಿಜಿಗಳು ನಿಂತು ಹೋಗಿವೆ.

ಲಾಕ್‌ಡೌನ್, ವರ್ಕ್‌ ಫ್ರಂ ಹೋಂ ಎಫೆಕ್ಟ್: ಬೆಂಗಳೂರಿನಲ್ಲಿ 8 ಸಾವಿರ ಪಿಜಿಗಳು ಬಂದ್‌..!
Linkup
: ಕೊರೊನಾ ಹೊಡೆತ ಸಾಕಷ್ಟು ಉದ್ಯಮಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅದೇ ರೀತಿ ಪೇಯಿಂಗ್‌ ಗೆಸ್ಟ್‌()ಗಳ ಮೇಲೂ ತೀವ್ರ ಹೊಡೆತ ನೀಡಿದೆ. ಇದರ ಪರಿಣಾಮ ಒಂದರಲ್ಲೇ ಬರೋಬ್ಬರಿ 8 ಸಾವಿರಕ್ಕೂ ಹೆಚ್ಚು ಪಿಜಿಗಳು ಬಂದ್‌ ಆಗಿವೆ. ಪಿಜಿಗಳಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳು ನೆಲೆಸುತ್ತಾರೆ. ಆದರೆ, 2021ರ ಕೊರೊನಾ ಮೊದಲ ಅಲೆಯಿಂದಲೂ ಆನ್‌ಲೈನ್‌ ತರಗತಿಗಳು ಮತ್ತು ವರ್ಕ್ ಫ್ರಮ್‌ ಹೋಮ್‌ ನಡೆಯುತ್ತಿರುವುದರಿಂದ ಬೆಂಗಳೂರಿನ ಹೆಚ್ಚಿನ ಪಿ.ಜಿಗಳು ಮುಚ್ಚಿಹೋಗಿವೆ. 2021ರ ಜನವರಿ ತಿಂಗಳಿನಲ್ಲಿ ನಗರದ ಪಿಜಿ ಉದ್ಯಮ ಚೇತರಿಕೆ ಕಾಣುವ ಲಕ್ಷಣವಿತ್ತು. ಆದರೆ, ಕೊರೊನಾ ಎರಡನೇ ಅಲೆ ಪರಿಣಾಮವಾಗಿ ಪಿಜಿಗಳು ಸದ್ಯಕ್ಕೆ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಬೆಂಗಳೂರು ಪಿಜಿ ಅಸೋಸಿಯೇಷನ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಪಣಂಬೂರ್‌ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಪಿಜಿಗಳು ಮುಚ್ಚಿರುವುದರಿಂದ ಸರಿ ಸುಮಾರು 30 ಸಾವಿರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಬೆಂಗಳೂರು ನಗರ ಒಂದರಲ್ಲೇ 8 ಸಾವಿರಕ್ಕೂ ಹೆಚ್ಚು ಪೇಯಿಂಗ್‌ ಗೆಸ್ಟ್‌ಗಳು ಬಂದ್‌ ಆಗಿವೆ. ಬೆಂಗಳೂರು ಪಿಜಿ ಅಸೋಸಿಯೇಷನ್‌ ಪ್ರಕಾರ, ನಗರದಲ್ಲಿರುವ 12 ಸಾವಿರ ಪಿಜಿಗಳಲ್ಲಿ ಕೇವಲ ನಾಲ್ಕು ಸಾವಿರ ಪಿಜಿಗಳು ಮಾತ್ರ ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿವೆ. ಉಳಿದ 8 ಸಾವಿರ ಪಿಜಿಗಳು ನಿಂತು ಹೋಗಿವೆ. ಎಲೆಕ್ಟ್ರಾನಿಕ್‌ ಸಿಟಿ, ಮಾರತ್‌ಹಳ್ಳಿ, ವೈಟ್‌ಫೀಲ್ಡ್‌ ಭಾಗಗಳಲ್ಲಿರುವ ಐಟಿ ಕಂಪನಿಗಳು ಕೊರೊನಾ ಮೊದಲನೇ ಅಲೆಯ ಪ್ರಾರಂಭದಲ್ಲಿ ದೀರ್ಘಾವಧಿಯ ವರ್ಕ್ ಫ್ರಮ್‌ ಹೋಮ್‌ ನೀತಿ ಜಾರಿಗೊಳಿಸಿದವು. ಅದರ ಪರಿಣಾಮ ಸಾವಿರಾರು ಐಟಿ ಉದ್ಯೋಗಿಗಳು ಏಕಾಏಕಿ ಪಿಜಿಗಳನ್ನು ಖಾಲಿ ಮಾಡಿ ಹೊರಟರು. ಕೆಲವರು ತಮ್ಮ ವಸ್ತುಗಳನ್ನು ಬಿಟ್ಟು ಕೋಣೆಗಳಿಗೆ ಬೀಗ ಹಾಕಿ ಹೊರಟರು. ಇದರಿಂದ ಪಿಜಿಗಳನ್ನು ಹೋಮ್‌ ಕ್ವಾರಂಟೈನ್‌ ಸೆಂಟರ್‌ಗಳಾಗಿ ಮಾರ್ಪಡಿಸಲು ಸಾಧ್ಯವಾಗಿಲ್ಲ ಎಂದು ಪಿಜಿ ಮಾಲೀಕರೊಬ್ಬರು ತಿಳಿಸಿದರು. 'ಕೆಲವೇ ಕೆಲವರಿಗಾಗಿ ಪಿಜಿ ನಡೆಸಲು ಸಾಧ್ಯವಿಲ್ಲ. ನಮ್ಮ ಉದ್ಯೋಗಿಗಳಿಗೆ ವೇತನ ನೀಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಸರಕಾರದ ಅನೇಕ ಇಲಾಖೆಗಳಿಗೆ ನಮ್ಮ ಮನವಿ ಸಲ್ಲಿಸಿದ್ದೇವೆ. ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸರಕಾರ ಪಿಜಿ ವಲಯವನ್ನು ಅಧಿಕೃತ ಉದ್ದಿಮೆಯಾಗಿ ಪರಿಗಣಿಸಿ ಸಹಾಯ ಮಾಡಬೇಕು' ಎಂದು ಅಶೋಕ್‌ ಕುಮಾರ್‌ ಪಣಂಬೂರ್‌ ಒತ್ತಾಯಿಸಿದ್ದಾರೆ.