ರಾಹುಲ್, ಪ್ರಿಯಾಂಕಾ ವಿರುದ್ಧ ಆರೋಪ: ಕಾಂಗ್ರೆಸ್‌ಗೆ ಅಮರಿಂದರ್ ಸಿಂಗ್ ರಾಜೀನಾಮೆ

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಸುಮಾರು ಒಂದೂವರೆ ತಿಂಗಳ ಬಳಿಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಮ್ಮ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಇದರಲ್ಲಿ ರಾಹುಲ್, ಪ್ರಿಯಾಂಕಾ ಗಾಂಧಿ ವಿರುದ್ಧವೂ ಆರೋಪ ಮಾಡಿದ್ದಾರೆ.

ರಾಹುಲ್, ಪ್ರಿಯಾಂಕಾ ವಿರುದ್ಧ ಆರೋಪ: ಕಾಂಗ್ರೆಸ್‌ಗೆ ಅಮರಿಂದರ್ ಸಿಂಗ್ ರಾಜೀನಾಮೆ
Linkup
ಹೊಸದಿಲ್ಲಿ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸುಮಾರು ಒಂದೂವರೆ ತಿಂಗಳ ಬಳಿಕ ಪಂಜಾಬ್‌ನ ಹಿರಿಯ ರಾಜಕೀಯ ನಾಯಕ ಕ್ಯಾಪ್ಟನ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಅವರು ಅಧ್ಯಕ್ಷೆ ಅವರಿಗೆ ಮಂಗಳವಾರ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಪತ್ರದಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಮಗ ರಾಹುಲ್ ಗಾಂಧಿ ಮತ್ತು ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ವೈಯಕ್ತಿಕವಾಗಿ ಕೆಲವು ನಾಯಕರ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ. ಈಗಾಗಲೇ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಮತ್ತು ಬಿಜೆಪಿ ಒಳಗೊಂಡಂತೆ ವಿವಿಧ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವುದಾಗಿ ಅಮರಿಂದರ್ ಘೋಷಿಸಿದ್ದಾರೆ. ಈಗ ಅಧಿಕೃತವಾಗಿ ಅವರು ಕಾಂಗ್ರೆಸ್‌ನಿಂದ ಹೊರಗೆ ಹೆಜ್ಜೆ ಇರಿಸಿದ್ದಾರೆ. 'ನನ್ನ ಬಲವಾದ ಆಕ್ಷೇಪದ ನಡುವೆ ಮತ್ತು ಪಂಜಾಬ್‌ನ ಬಹುತೇಕ ಎಲ್ಲ ಸಂಸದರ ಸರ್ವಾನುಮತದ ಸಲಹೆ ಬಳಿಕವೂ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಮತ್ತು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಸಾರ್ವಜನಿಕವಾಗಿ ಅಪ್ಪಿಕೊಂಡ ಪಾಕಿಸ್ತಾನದ ಪರ ಸಹಾಯಕನಾಗಿರುವ ಅವರನ್ನು ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೀರಿ' ಎಂದು ರಾಜೀನಾಮೆ ಪತ್ರದಲ್ಲಿ ಅಮರಿಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾನ್ ಮತ್ತು ಬಾಜ್ವಾ ಇಬ್ಬರೂ ಭಾರತೀಯರನ್ನು ಕೊಲ್ಲಲು ಗಡಿಯಾಚೆಯಿಂದ ಭಯೋತ್ಪಾದಕರನ್ನು ಕಳುಹಿಸುವುದಕ್ಕೆ ಹೊಣೆಗಾರರು. 2017ರಲ್ಲಿ ನನ್ನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ 82 ಪಂಜಾಬ್ ಸೈನಿಕರು ಹುತಾತ್ಮರಾಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನನ್ನನ್ನು ಮತ್ತು ನನ್ನ ಸರ್ಕಾರವನ್ನು ನಿರಂತರವಾಗಿ ನಿಂದಿಸುತ್ತಲೇ ಸಿಧು ಹೆಸರು ಪಡೆದುಕೊಂಡಿದ್ದಾರೆ. ನಾನು ಅವರ ತಂದೆಯಷ್ಟು ಹಿರಿಯ ವ್ಯಕ್ತಿ. ಆದರೆ ಅದು ನನ್ನ ವಿರುದ್ಧ ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಕೊಳಕು ಭಾಷೆಗಳನ್ನು ಬಳಸುವುದನ್ನು ತಡೆಯಲಿಲ್ಲ ಎಂದು ಆರೋಪಿಸಿದ್ದಾರೆ. 'ನನಗೆ ನಿಮ್ಮ ಹಾಗೂ ನಿಮ್ಮ ಮಕ್ಕಳ ನಡವಳಿಕೆಗಳಿಂದ ವಾಸ್ತವವಾಗಿ ತೀವ್ರ ನೋವಾಗಿದೆ. ನಿಮ್ಮ ಮಕ್ಕಳನ್ನು ನನ್ನ ಸ್ವಂತ ಮಕ್ಕಳಂತೆಯೇ ನಾನು ಬಹಳ ಪ್ರೀತಿಸುತ್ತೇನೆ. ಅವರ ತಂದೆ ಮತ್ತು ನಾನು 1954ರ ಶಾಲಾ ದಿನಗಳಿಂದಲೂ ಜತೆಯಾಗಿದ್ದೇವೆ. ಅದಕ್ಕೀಗ 67 ವರ್ಷವಾಗಿದೆ' ಎಂದು ಪತ್ರದಲ್ಲಿ ಬರೆದಿದ್ದಾರೆ. ಅಸ್ಥಿರ ವ್ಯಕ್ತಿ ಹಾಗೂ ಪಾಕಿಸ್ತಾನವನ್ನು ತೀವ್ರ ಪ್ರೀತಿಸುವ ನವಜೋತ್ ಸಿಂಗ್ ಸಿಧು ಅವರನ್ನು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬೆಂಬಲಿಸುತ್ತಿದ್ದಾರೆ. ಇದೆಲ್ಲದಕ್ಕೂ ಸೋನಿಯಾ ಗಾಂಧಿ ಕುರುಡಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ರಾಜ್ಯ ಮತ್ತು ದೇಶದ ಹಿತಾಸಕ್ತಿಯಿಂದ ನಾನು ಕಾಂಗ್ರೆಸ್‌ಗೆ ನನ್ನ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುಮಾರು ಏಳು ಪುಟಗಳ ಸುದೀರ್ಘ ಪತ್ರದಲ್ಲಿ ಅವರು ಹೇಳಿದ್ದಾರೆ.