![](https://vijaykarnataka.com/photo/86861821/photo-86861821.jpg)
ಲೇಖಕರು: ರಮೇಶ್ ಕುಮಾರ್ ನಾಯಕ್
ಕೇಂದ್ರ ಸರಕಾರ ತಮ್ಮ ವಿಶೇಷ 'ಸ್ಥಾನಮಾನ'ವನ್ನು ಮುಲಾಜಿಲ್ಲದೆ ಕಿತ್ತು ಹಾಕಿರುವುದರ ಬಗ್ಗೆ ಕಾಶ್ಮೀರದ ಸ್ಥಳೀಯರಿಗೆ ಮುನಿಸಿದೆ. ಆದರೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೇಂದ್ರ ಸರಕಾರ ಕೈಗೊಂಡಿರುವ ಸಮರೋಪಾದಿ ಕಾರ್ಯಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ.
ಬಿಜೆಪಿ ಮುಸ್ಲಿಂ ವಿರೋಧಿ ಪಕ್ಷ ಎಂದು ಟೀಕಿಸುವ ಭರದಲ್ಲೇ, 370ನೇ ವಿಧಿ ಹಿಂತೆಗೆದುಕೊಂಡ ಬಳಿಕ ಜಮ್ಮು - ಕಾಶ್ಮೀರದಲ್ಲಿ ನಡೆಯುತ್ತಿರುವ ಸರಣಿ ಪ್ರಗತಿ ಕಾಮಗಾರಿಗಳು ಸ್ವತಂತ್ರ ಭಾರತದ ಇತಿಹಾಸದಲ್ಲಿ ಹಿಂದೆಂದೂ ನಡೆದಿರಲಿಲ್ಲ ಎಂದು ಕಾಶ್ಮೀರಿಗರು ಮನ ಬಿಚ್ಚಿ ಹೇಳುತ್ತಾರೆ.
'ಶೇಖ್ ಅಬ್ದುಲ್ಲಾ ಕಾಲದಿಂದ ಹಿಡಿದು ಈಗಿನ ಮೆಹಬೂಬಾ ಮುಫ್ತಿವರೆಗೆ ಇಲ್ಲಿಯ ಎಲ್ಲ ರಾಜಕೀಯ ಮುಖಂಡರೂ ಲೂಟಿ ಮಾಡಿದ್ದಾರೆಯೇ ಹೊರತು ಕಾಶ್ಮೀರದ ಪ್ರಗತಿಗೆ ಸ್ವಲ್ಪವೂ ಗಮನ ಕೊಡಲಿಲ್ಲ. ಇವರು ದಿಲ್ಲಿ, ಲಂಡನ್, ದುಬೈನಲ್ಲಿ ಹೇರಳ ಆಸ್ತಿಪಾಸ್ತಿ ಮಾಡಿಟ್ಟಿದ್ದಾರೆ ಎಂಬ ಆಕ್ರೋಶ ಜನ ಸಾಮಾನ್ಯರಲ್ಲಿದೆ' ಎಂದವರು 'ಕಶೂರ್ ಟೈಮ್ಸ್' ಉರ್ದು ಪತ್ರಿಕೆಯ ಶ್ರೀನಗರದ ಹಿರಿಯ ವರದಿಗಾರ ಅದಿಲ್ ಇಸ್ಮಾಯಿಲ್.
ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟಕ್ಚರ್ ಲಿ. ನಿರ್ಮಿಸುತ್ತಿರುವ ಜೋಜಿಲಾ ಸುರಂಗ ಮಾರ್ಗ ವೀಕ್ಷಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮಿಸಿದ ಸಂದರ್ಭದಲ್ಲಿ ಮಾತಿಗೆ ಸಿಕ್ಕಿದ್ದ ಅವರು ಕಾಶ್ಮೀರದ ಪ್ರಸ್ತುತ ಸ್ಥಿತಿಯನ್ನು ಮುಕ್ತವಾಗಿ ಹಂಚಿಕೊಂಡರು.
'ಕಳೆದ ಎರಡು ವರ್ಷಗಳಲ್ಲಿ ಜಮ್ಮು - ಕಾಶ್ಮೀರ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶಗಳ ಸಣ್ಣ ಸಣ್ಣ ಊರುಗಳಲ್ಲೂ ಒಂದಲ್ಲ ಒಂದು ಕಾಮಗಾರಿ ನಡೆಯುತ್ತಿದೆ. ಹಿಮಪಾತದ ಕಾರಣ ಇಲ್ಲಿಯ ಜನ ವರ್ಷದಲ್ಲಿ ಆರು ತಿಂಗಳು ಮನೆಯಿಂದ ಹೊರ ಬರಲೂ ಆಗುತ್ತಿರಲಿಲ್ಲ. ತುರ್ತು ವೈದ್ಯಕೀಯ ನೆರವು ಬೇಕಾದ ಸಂದರ್ಭದಲ್ಲೂ ಸಂಪರ್ಕ ರಸ್ತೆ ಇಲ್ಲದ ಕಾರಣ ಆಸ್ಪತ್ರೆಗೆ ಹೋಗಲು ಸಾಧ್ಯವಿರಲಿಲ್ಲ. ಆದರೆ ಈಗ ಗ್ರಾಮೀಣ ಕಾಶ್ಮೀರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳು ಜನರಲ್ಲಿ ಹೊಸ ಭರವಸೆ ಮೂಡಿಸಿದೆ' ಎಂದವರು ಹೇಳಿದರು.
'ಇಲ್ಲಿಯ ಯುವ ಜನರಿಗೆ ಸರಿಯಾದ ಉದ್ಯೋಗವೇ ಸಿಗುತ್ತಿರಲಿಲ್ಲ. ಸಹಜವಾಗಿಯೇ ಇವರು ಅಡ್ಡ ಹಾದಿ ಹಿಡಿಯುತ್ತಿದ್ದರು. ಪಾಕಿಸ್ತಾನವು ಕಾಶ್ಮೀರದ ಹತಾಶ ಹುಡುಗರನ್ನು ತನ್ನ ದಾಳಕ್ಕೆ ಸುಲಭವಾಗಿ ಬಳಸುತ್ತಿತ್ತು. ಆದರೆ ಈಗ ಕಾಶ್ಮೀರದುದ್ದಕ್ಕೂ ಸಾವಿರಾರು ಕೋಟಿ ರೂ.ಗಳ ಕಾಮಗಾರಿಗಳು ನಡೆಯುತ್ತಿರುವುದರಿಂದ ಸ್ಥಳೀಯ ಜನರಿಗೆ ವರ್ಷವಿಡೀ ಉದ್ಯೋಗ ಸಿಗುವಂತಾಗಿದೆ. ಪ್ರತಿಭಟನೆ, ಕಲ್ಲೆಸೆತ ಇತ್ಯಾದಿ ದೇಶ ವಿರೋಧಿ ಚಟುವಟಿಕೆಗಳು ಕಡಿಮೆಯಾಗಲು ಇದು ಮುಖ್ಯ ಕಾರಣ' ಎಂದವರು ಅಭಿಪ್ರಾಯಪಟ್ಟರು.
ಕಾಶ್ಮೀರದಲ್ಲಿ ಹೆದ್ದಾರಿ ಕ್ರಾಂತಿ
ಜಮ್ಮು - ಕಾಶ್ಮೀರದ ಜನರ ಅತಿ ದೊಡ್ಡ ಸಮಸ್ಯೆ ಎಂದರೆ ರಸ್ತೆ ಸಂಪರ್ಕ. ಅತ್ಯಂತ ಕಡಿದಾದ ಅಪಾಯಕಾರಿ ರಸ್ತೆಗಳಲ್ಲಿ ಸುತ್ತು ಬಳಸಿ ಹೋಗಬೇಕಾಗಿರುವ ಕಾರಣ ಸುದೀರ್ಘ ಸಮಯ ಹಿಡಿಯುತ್ತದೆ. ಹಿಮಪಾತದಿಂದಾಗಿ ವರ್ಷದಲ್ಲಿ ಐದಾರು ತಿಂಗಳ ಕಾಲ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಪರ್ಕವೇ ಇರುವುದಿಲ್ಲ. ಆದರೆ ಈಗ ಇಲ್ಲಿ ಹೆದ್ದಾರಿ ಕ್ರಾಂತಿಯೇ ನಡೆಯುತ್ತಿದೆ.
2014ರ ವರೆಗೆ ಜಮ್ಮು - ಕಾಶ್ಮೀರದಲ್ಲಿ ಕೇವಲ 4 ಹೆದ್ದಾರಿಗಳಿದ್ದವು. 2021ರಲ್ಲಿ ಅವುಗಳ ಸಂಖ್ಯೆ 11ಕ್ಕೇರಿದೆ. ಹಲವಾರು ಸುರಂಗ ಮತ್ತು ಹೊಸ ಮಾರ್ಗಗಳ ಕಾರಣ ದಿಲ್ಲಿ - ಶ್ರೀನಗರ, ಶ್ರೀನಗರ - ಜಮ್ಮು ನಡುವಿನ ಸಂಚಾರದ ಅವಧಿ 8 ರಿಂದ 10 ಗಂಟೆಯಷ್ಟು ಕಡಿಮೆ ಆಗಲಿದೆ. ಈಗ ಕೈಗೆತ್ತಿಕೊಂಡಿರುವ ಎಲ್ಲ ಕಾಮಗಾರಿಗಳು ಮುಗಿದಾಗ ಲೇಹ್, ಜಮ್ಮು ಮತ್ತು ಶ್ರೀನಗರ ನಡುವೆ ಸರ್ವ ಋುತು ಸಂಚಾರ ಸಾಧ್ಯವಾಗಲಿದೆ. ಇದರಿಂದಾಗಿ ಕಣಿವೆ ರಾಜ್ಯದ ಪ್ರವಾಸೋದ್ಯಮ ಮತ್ತಷ್ಟು ಬಲಗೊಳ್ಳಲಿದೆ.
2023ರಲ್ಲಿ ಶ್ರೀನಗರ ಚತುಷ್ಪಥ ರಿಂಗ್ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ. 2022ರಲ್ಲಿ ಕಾಶ್ಮೀರ ಮತ್ತು ಕನ್ಯಾಕುಮಾರಿ ನಡುವೆ ನೇರ ರೈಲು ಮಾರ್ಗವೂ ಸಾಕಾರಗೊಳ್ಳಲಿದೆ. ಜೋಜಿಲಾ, ಝಡ್ ಮೊಹರ್ ಸೇರಿದಂತೆ ಒಟ್ಟು 11 ಸುರಂಗ ಮಾರ್ಗಗಳ ಕಾಮಗಾರಿ ನಡೆಯುತ್ತಿದೆ. ಹವಾಮಾನ ವೈಪರೀತ್ಯದ ನಡುವೆಯೇ ಕಣಿವೆ - ಬೆಟ್ಟಗಳ ನಡುವೆ ರಸ್ತೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಮೂಲಸೌಕರ್ಯಕ್ಕೆ ಉತ್ತೇಜನ
ಹೊಸ ಕೈಗಾರಿಕೆ ನೀತಿ ಘೋಷಿಸಿರುವ ಕೇಂದ್ರ ಸರಕಾರ 35 ಸಾವಿರ ಕೋಟಿ ರೂ. ನಿಧಿ ಮೀಸಲಿಟ್ಟಿದೆ. ಏಮ್ಸ್ ಸೇರಿದಂತೆ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ. 50 ಹೊಸ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ವಿದ್ಯುತ್ ಉತ್ಪಾದನೆ, ದೂರಸಂಪರ್ಕ ಇತ್ಯಾದಿ ಬೃಹತ್ ಯೋಜನೆಗಳು ರೂಪುಗೊಂಡಿವೆ. ಹಿಂದಿನ 40 ವರ್ಷಗಳ ಅವಧಿಯಲ್ಲಿ 3,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದ್ದರೆ, ಕಳೆದ ಮೂರೇ ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ 6,298 ಮೆಗಾ ವ್ಯಾಟ್‌ಗೆ ಏರಿದೆ. ಮಹಿಳಾ ಸ್ವಾವಲಂಬಿ ಯೋಜನೆ, ಯುವ ಜನರಿಗೆ ಉದ್ಯೋಗ ಇತ್ಯಾದಿ ದೂರದೃಷ್ಟಿ ಯೋಜನೆಗೆ ಚಾಲನೆ ನೀಡಲಾಗಿದೆ.
ಯಾವುದೇ ಪ್ರದೇಶದ ಜನ ಸಮೂಹವನ್ನು ಕೇವಲ ಸೇನಾ ಬಲದಿಂದ ಸುದೀರ್ಘ ಕಾಲ ನಿಯಂತ್ರಿಸಲಾಗದು. ಅವರ ವಿಶ್ವಾಸ ಗಳಿಸುವುದೊಂದೇ ಅಂತಿಮ ಮಾರ್ಗ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಅಭೂತಪೂರ್ವ ಅಭಿವೃದ್ಧಿ ಕಾಮಗಾರಿಗಳು ಭವಿಷ್ಯದ ಶಾಂತ ಮತ್ತು ಸ್ಥಿರ ಕಾಶ್ಮೀರದ ದೃಷ್ಟಿಯಿಂದ ಮಹತ್ವಪೂರ್ಣ ಕೊಡುಗೆಯಾಗಲಿದೆ.