ರಿಯಾಯಿತಿ ದರದಲ್ಲಿ ಬಡ ಕಲಾವಿದರಿಗೆ ಮನೆ ನೀಡಲು ಸರ್ಕಾರ ಚಿಂತಿಸುತ್ತಿದೆ: ಡಾ ಸಿ ಎನ್ ಅಶ್ವತ್ಥನಾರಾಯಣ!

ಬೆಂಗಳೂರಿನ ಚಲನಚಿತ್ರ ಕಲಾವಿದರ ಸಂಘದಲ್ಲಿ ಕನ್ನಡ ಸಿನಿಮಾ ಕಲಾವಿದರಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಡಾ.ಸಿಎನ್ ಅಶ್ವತ್ಥನಾರಾಯಣ ಜೊತೆ ಕಲಾವಿದರ ಸಮಸ್ಯೆಗಳ ಕುರಿತು ಚರ್ಚೆ ಮಾಡಲಾಗಿದೆ.

ರಿಯಾಯಿತಿ ದರದಲ್ಲಿ ಬಡ ಕಲಾವಿದರಿಗೆ ಮನೆ ನೀಡಲು ಸರ್ಕಾರ ಚಿಂತಿಸುತ್ತಿದೆ: ಡಾ ಸಿ ಎನ್ ಅಶ್ವತ್ಥನಾರಾಯಣ!
Linkup
ಬೆಂಗಳೂರು: ಚಲನಚಿತ್ರ ಕಲಾವಿದರ ಸಂಘದಲ್ಲಿ ಗುರುವಾರ (ಮೇ 31) ಕನ್ನಡ ಸಿನಿಮಾ ಕಲಾವಿದರಿಗೆ ನೀಡುವ ಅಭಿಯಾನಕ್ಕೆ ರಾಜ್ಯ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ. "ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ 18 ವರ್ಷ ವಯಸ್ಸಿನ ಮೇಲ್ಪಟ್ಟ 15,000 ಕಲಾವಿದರಿಗೂ ಕೋವಿಡ್‌ ಲಸಿಕೆ ನೀಡಲಾಗುವುದು. ಸಂಕಷ್ಟದಲ್ಲಿರುವ ಕಲಾವಿದರಿಗೆ ಆರ್ಥಿಕ ನೆರವು ಸೇರಿ ಆಹಾರ ಧಾನ್ಯ ನೀಡಲು ಸರ್ಕಾರ ತಯಾರಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸುವೆ" ಎಂದು ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದ್ದಾರೆ. "ಮುಖ್ಯಮಂತ್ರಿಗಳ ಗೃಹ ನಿರ್ಮಾಣ ಯೋಜನೆ ಅಡಿಯಲ್ಲಿ ಬಡ ಕಲಾವಿದರಿಗೆ ರಿಯಾಯಿತಿ ಬೆಲೆಯಲ್ಲಿ ಮನೆ ನೀಡುವ ಬಗ್ಗೆಯೂ ಸರ್ಕಾರ ಉದ್ದೇಶಿಸಿದೆ. ಸದ್ಯದಲ್ಲೇ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದ್ದು, ಮನೆ ಅಗತ್ಯ ಇರುವ ಕಲಾವಿದರು ಅರ್ಜಿ ಹಾಕಿಕೊಳ್ಳಬಹುದು" ಎಂದು ಡಿಸಿಎಂ ತಿಳಿಸಿದರು. "ನಮ್ಮ ನಾಡಿನ ಕಲೆ ಸಂಸ್ಕೃತಿ ರಕ್ಷಣೆಯಲ್ಲಿ ಕಲಾವಿದರ ಪಾತ್ರ ದೊಡ್ಡದು. ಅವರು ನಮ್ಮ ಸಾಂಸ್ಕೃತಿಕ ರಾಯಭಾರಿಗಳು. ಹೀಗಾಗಿ ಕಲಾವಿದರು ಸಂಕಷ್ಟಕ್ಕೆ ಸಿಲುಕುವುದನ್ನು ಸರ್ಕಾರ ಇಷ್ಟಪಡುವುದಿಲ್ಲ. ಮೊದಲ ಅಲೆಯ ಕಾಲದಲ್ಲೂ ಚಿತ್ರರಂಗದ ನೆರವಿಗೆ ಸರ್ಕಾರ ಧಾವಿಸಿತ್ತು. ಈಗಲೂ ನೆರವಿಗೆ ಬರಲಿದೆ. ಯಾವ ಕಾರಣಕ್ಕೂ ಸಿನಿಮಾ ರಂಗ ಕಷ್ಟಕ್ಕೆ ಸಿಲುಕಲು ಬಿಡುವುದಿಲ್ಲ" ಎಂದು ಡಿಸಿಎಂ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಂಸದೆ, ನಟಿ ಸುಮಲತಾ ಅಂಬರೀಶ್‌, ಕಲಾವಿದರ ಸಂಘದ ಅಧ್ಯಕ್ಷ ರಾಕ್‌ಲೈನ್‌ ವೆಂಕಟೇಶ್‌, ಹಿರಿಯ ಕಲಾವಿದ ದೊಡ್ಡಣ್ಣ ಅವರು ಕಲಾವಿದರ ಸಮಸ್ಯೆಗಳ ಬಗ್ಗೆ ಡಿಸಿಎಂ ಡಾ. ಸಿಎನ್ ಅಶ್ವತ್ಥನಾರಾಯಣ ಜತೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ನಿರ್ದೇಶಕಿ ರೂಪಾ ಅಯ್ಯರ್‌ ಸೇರಿದಂತೆ ಚಿತ್ರರಂಗದ ಅನೇಕರು ಇದ್ದರು.