ರಾಜ್ಯದ ಕೃಷಿ ಸಚಿವ ಬಿ.ಸಿ ಪಾಟೀಲ್‌ ಜೊತೆ ನಿರ್ದೇಶಕ ಯೋಗರಾಜ್ ಭಟ್ ಸಿನಿಮಾ

ಚಿತ್ರರಂಗದಲ್ಲಿ 'ವಿಕಟ ಕವಿ' ಎಂದೇ ಖ್ಯಾತರಾಗಿರುವ ನಿರ್ದೇಶಕ ಯೋಗರಾಜ್‌ ಭಟ್‌ ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದು, ರಾಜ್ಯದ ಕೃಷಿ ಸಚಿವ ಬಿ.ಸಿ ಪಾಟೀಲ್‌ ನಿರ್ಮಾಣ ಮಾಡುತ್ತಿದ್ದಾರೆ. ಅದರ ವಿವರ ಇಲ್ಲಿದೆ.

ರಾಜ್ಯದ ಕೃಷಿ ಸಚಿವ ಬಿ.ಸಿ ಪಾಟೀಲ್‌ ಜೊತೆ ನಿರ್ದೇಶಕ ಯೋಗರಾಜ್ ಭಟ್ ಸಿನಿಮಾ
Linkup
(ಹರೀಶ್‌ ಬಸವರಾಜ್‌) ಯೋಗರಾಜ್‌ ಭಟ್‌ ಅವರು ಸದಾ ಬಿಝಿ ಇರುವ ನಿರ್ದೇಶಕ. ಸಿನಿಮಾ, ರಿಯಾಲಿಟಿ ಶೋ, ಹಾಡು ಹೀಗೆ ಯಾವುದಾದರೊಂದು ಕೆಲಸದಲ್ಲಿಅವರು ಸದಾ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇತ್ತೀಚೆಗಷ್ಟೆ ಅವರು 'ಆದ್ದರಿಂದ' ಎಂಬ ವಿಭಿನ್ನ ಸಿನಿಮಾ ಮಾಡುತ್ತಿರುವುದಾಗಿ ಸುದ್ದಿಯಾಗಿತ್ತು. ಈಗ ಅವರು ಮತ್ತೊಂದು ಸಿನಿಮಾ ಮಾಡುತ್ತಿದ್ದು, ಅದನ್ನು ರಾಜ್ಯದ ಕೃಷಿ ಸಚಿವ ಬಿ.ಸಿ ಪಾಟೀಲ್‌ ನಿರ್ಮಾಣ ಮಾಡುತ್ತಿದ್ದಾರೆ. ಬಿ.ಸಿ ಪಾಟೀಲ್‌ ಅವರು ರಾಜಕೀಯಕ್ಕೆ ಬರುವುದಕ್ಕೂ ಮುನ್ನ ಸಿನಿಮಾ ರಂಗದಲ್ಲಿಸಕ್ರಿಯರಾಗಿದ್ದವರು. ಕೆಲವು ವರ್ಷಗಳ ಹಿಂದೆಯಷ್ಟೇ ಅವರು 'ಹ್ಯಾಪಿ ನ್ಯೂ ಇಯರ್‌' ಸಿನಿಮಾಗೆ ಬಂಡವಾಳ ಹೂಡಿದ್ದರು. ಇದೀಗ ಅವರು ಶಾಸಕರಾಗಿ ಸಚಿವರಾದರೂ ಸಿನಿಮಾ ನಂಟು ಬಿಡದೆ ಮತ್ತೆ ಭಟ್ಟರ ಜತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಹೇಳಿರುವ ನಿರ್ದೇಶಕ ಯೋಗರಾಜ್‌ ಭಟ್‌, 'ನನ್ನದು ಮತ್ತು ಬಿ.ಸಿ ಪಾಟೀಲ್‌ರದ್ದು ಬಯಲು ಸೀಮೆಯ ಸ್ನೇಹ. ಇಬ್ಬರೂ ಒಂದೇ ಭಾಗದಿಂದ ಬಂದವರು. ಹಾಗಾಗಿ ನಮ್ಮಿಬ್ಬರಲ್ಲಿ ಪರಸ್ಪರ ವಿಶೇಷವಾದ ಪ್ರೀತಿ, ವಿಶ್ವಾಸವಿದೆ. ಯಾವುದೋ ವಿಚಾರಕ್ಕೆ ಕೆಲವು ದಿನಗಳ ಹಿಂದೆಯಷ್ಟೇ ಅವರನ್ನು ಭೇಟಿ ಮಾಡಿದ್ದೆ. ಆಗ ಸಿನಿಮಾ ಮಾಡುವ ವಿಚಾರ ಪ್ರಸ್ತಾಪವಾಯಿತು. ಈ ಬಗ್ಗೆ ಒಂದೆರಡು ಲೈನ್‌ ಹೇಳಿದ್ದೆ. ನಂತರ ಸಿನಿಮಾ ನಿರ್ಮಾಣ ಫೈನಲ್‌ ಆಯಿತು. ಗುರು ಪೂರ್ಣಿಮೆಯ ದಿನ ನಾವು ಮತ್ತೆ ಭೇಟಿಯಾದೆವು' ಎಂದಿದ್ದಾರೆ. ಈ ಸಿನಿಮಾಗೆ ಕಥೆ ಮತ್ತು ಕಲಾವಿದರು ಫೈನಲ್‌ ಆಗಿದ್ದು, ಇವೆಲ್ಲವನ್ನೂ ಅವರು ಸದ್ಯದಲ್ಲೇ ಅನೌನ್ಸ್‌ ಮಾಡಲಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್‌ ಮತ್ತು ಆ್ಯಕ್ಷನ್‌ ಓರಿಯೆಂಟೆಡ್‌ ಸಿನಿಮಾ. ಕನ್ನಡ , ತೆಲುಗು, ತಮಿಳು ಭಾಷೆಗಳಲ್ಲಿ ನಟಿಸುತ್ತಿರುವ ಕಲಾವಿದರೊಬ್ಬರು ಈ ಸಿನಿಮಾದಲ್ಲಿ ನಾಯಕರಾಗಿದ್ದು, ನಾಯಕಿ ಕೂಡ ದಕ್ಷಿಣ ಭಾರತದ ಖ್ಯಾತ ತಾರೆ ಎನ್ನಲಾಗುತ್ತಿದೆ. ಯೋಗರಾಜ್‌ ಭಟ್‌ ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಕಾಂಬಿನೇಶನ್‌ನಲ್ಲಿ ಸಾಕಷ್ಟು ಯಶಸ್ವಿ ಹಾಡುಗಳು ಬಂದಿದ್ದು, ಬಿ.ಸಿ ಪಾಟೀಲರ ಸಿನಿಮಾಗಾಗಿ ಈ ಜೋಡಿ ಮತ್ತೆ ಒಂದಾಗಿದೆ. ಗುರು ಪೂರ್ಣಿಮೆ ದಿನ ಯೋಗರಾಜ್‌ ಭಟ್ಟರ ಕಚೇರಿಯಲ್ಲಿ ಹರಿಕೃಷ್ಣ, ಯೋಗರಾಜ್‌ ಭಟ್‌ ಮತ್ತು ಅವರ ಸ್ನೇಹಿತ, ನಿರ್ದೇಶಕ ಸೂರಿ, ಸುಧೀರ್‌ ಅರಸ್‌, ನಟ, ಕಥೆಗಾರ ವಿಕಾಸ್‌ ಮತ್ತು ಬಿ.ಸಿ ಪಾಟೀಲ್‌ ಇರುವ ಫೋಟೊಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಬಿ.ಸಿ ಪಾಟೀಲ್‌ ಅವರು ರಾಜಕೀಯದಲ್ಲಿದ್ದರೂ ಅವರ ಮನಸ್ಸು ಯಾವಾಗಲೂ ಸಿನಿಮಾದೆಡೆಗೆ ತುಡಿಯುತ್ತದೆ. ಯಾವುದೋ ವಿಚಾರಕ್ಕೆ ಅವರನ್ನು ಭೇಟಿ ಮಾಡಿದ್ದೆ. ಇದರಿಂದಾಗಿ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ಇದರಲ್ಲಿರುವ ಕಲಾವಿದರ ಬಗ್ಗೆ ಸದ್ಯದಲ್ಲೇ ತಿಳಿಸುತ್ತೇವೆ ಎಂದು ಹೇಳಿದ್ದಾರೆ ಯೋಗರಾಜ್‌ ಭಟ್‌