ಮುಂಬಯಿ ಟ್ರಾಫಿಕ್‌ನಿಂದಾಗಿ ಡೈವೋರ್ಸ್ ಆಗುತ್ತಿವೆ ಎಂದ ಮಾಜಿ ಸಿಎಂ ಫಡ್ನವೀಸ್ ಹೆಂಡತಿ!

ಮುಂಬಯಿಯ ರಸ್ತೆ ಸಂಚಾರ ದಟ್ಟಣೆಯ ಕಾರಣದಿಂದ ಶೇ 3ರಷ್ಟು ವಿಚ್ಛೇದನಗಳು ಉಂಟಾಗುತ್ತಿವೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಹೇಳಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ.

ಮುಂಬಯಿ ಟ್ರಾಫಿಕ್‌ನಿಂದಾಗಿ ಡೈವೋರ್ಸ್ ಆಗುತ್ತಿವೆ ಎಂದ ಮಾಜಿ ಸಿಎಂ ಫಡ್ನವೀಸ್ ಹೆಂಡತಿ!
Linkup
ಮುಂಬಯಿ: ವಾಣಿಜ್ಯ ನಗರಿ ಮುಂಬಯಿಯಲ್ಲಿನ ಸಮಸ್ಯೆಯು ನಗರದಲ್ಲಿ ಶೇ 3ರಷ್ಟು ವಿಚ್ಛೇದನ ಪ್ರಕರಣಗಳಿಗೆ ಕಾರಣವಾಗುತ್ತಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅವರ ಪತ್ನಿ ಶನಿವಾರ ಹೇಳಿದ್ದಾರೆ. ರಾಜಧಾನಿಯಲ್ಲಿನ ರಸ್ತೆ ಹಾಗೂ ಸಂಚಾರ ದಟ್ಟಣೆ ಸ್ಥಿತಿಗತಿಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅವರು ಈ ವಿಚಿತ್ರ ಹೇಳಿಕೆ ನೀಡಿದ್ದಾರೆ. ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಮೃತಾ ಅವರ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ಚಾಟಿ ಬೀಸಿರುವ ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ, 'ಇದು ಈ ದಿನದ ಅತ್ಯುತ್ತಮ (ಕು) ತರ್ಕ' ಎಂದು ಲೇವಡಿ ಮಾಡಿದ್ದಾರೆ. ಅಮೃತಾ ಫಡ್ನವೀಸ್ ಅವರ ಹೇಳಿಕೆಯು ಸಾಮಾಜಿಕ ಜಾಲತಾಣ ಬಳಕೆದಾರರ ತಮಾಷೆಯ ಹಾಗೂ ಮೀಮ್ ವಸ್ತುವಾಗಿ ಪರಿಣಮಿಸಿದೆ. 'ಮುಂಬಯಿಯಲ್ಲಿ ಟ್ರಾಫಿಕ್ ಜಾಮ್ ಕಾರಣದಿಂದ ಜನರಿಗೆ ತಮ್ಮ ಕುಟುಂಬಕ್ಕೆ ಸಾಕಷ್ಟು ಸಮಯ ನೀಡಲು ಸಾಧ್ಯವಾಗದೆ ಶೇ ಮೂರರಷ್ಟು ಡೈವೋರ್ಸ್‌ಗಳು ಉಂಟಾಗುತ್ತಿವೆ ಎನ್ನುವುದು ನಿಮಗೆ ತಿಳಿದಿದೆಯೇ?' ಎಂದು ಅಮೃತಾ ಪ್ರಶ್ನಿಸಿದ್ದರು. 'ನಾನು ಇದನ್ನು ಸಾಮಾನ್ಯ ಪ್ರಜೆಯಾಗಿ ಹೇಳುತ್ತಿದ್ದೇನೆ. ಒಮ್ಮೆ ನಾನು ಮನೆಯಿಂದ ಹೊರಗೆ ಬಂದರೆ ರಸ್ತೆಗುಂಡಿಗಳು, ಸಂಚಾರ ದಟ್ಟಣೆಯಂತಹ ಅನೇಕ ಸಮಸ್ಯೆಗಳನ್ನು ಕಾಣುತ್ತೇನೆ' ಎಂದು ತಿಳಿಸಿದ್ದರು. ಈ ಸಮಸ್ಯೆಗಳು ತಮಗೆ ವೈಯಕ್ತಿಕವಾಗಿ ಬಾಧಿಸಿವೆ ಎಂದು ಹೇಳಿದ್ದರು. 'ನಾನು ದೇವೇಂದ್ರ ಫಡ್ನವೀಸ್ ಅವರ ಪತ್ನಿ ಎಂಬುದನ್ನು ಮರೆತುಬಿಡಿ. ನಾನು ಒಬ್ಬ ಮಹಿಳೆಯಾಗಿ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ರಸ್ತೆಗಳಲ್ಲಿ ಗುಂಡಿಗಳು ಮತ್ತು ಸಂಚಾರ ದಟ್ಟಣೆಯನ್ನು ಮತ್ತು ಅವು ನಮಗೆ ಹೇಗೆ ತೊಂದರೆ ಕೊಡುತ್ತವೆ ಎಂಬುದನ್ನು ನಾನೂ ಅನುಭವಿಸಿದ್ದೇನೆ' ಎಂದು ತಿಳಿಸಿದ್ದರು. ಮಾಜಿ ಮುಖ್ಯಮಂತ್ರಿ ಹೆಂಡತಿಯ ಹೇಳಿಕೆಗೆ ಲೇವಡಿ ಮಾಡಿರುವ ಪ್ರಿಯಾಂಕಾ ಚತುರ್ವೇದಿ, ಬೆಂಗಳೂರಿನ ಕುಟುಂಬಗಳು ಅವರ ಹೇಳಿಕೆಯನ್ನು ಓದದೆ ಇರುವುದು ಒಳಿತು ಎಂದಿದ್ದಾರೆ. 'ಈ ದಿನದ ಅತ್ಯುತ್ತಮ (ಕು) ತರ್ಕ ಪ್ರಶಸ್ತಿಯು, ರಸ್ತೆಗಳಲ್ಲಿನ ಟ್ರಾಫಿಕ್ ಕಾರಣದಿಂದ ಶೇ 3ರಷ್ಟು ಮುಂಬೈಕರ್‌ಗಳು ಡೈವೋರ್ಸ್ ಪಡೆಯುತ್ತಿದ್ದಾರೆ ಎಂಬ ಹೇಳಿಕೆ ನೀಡಿದ ಮಹಿಳೆಗೆ ಸಂದಲಿದೆ. ಬ್ರೇಕ್ ಮೇಲೆ ಗಮನ ಹರಿಸುವುದರ ಬದಲು ದಯವಿಟ್ಟು ರಜೆಯ ವಿರಾಮ ತೆಗೆದುಕೊಳ್ಳಿ. ಬೆಂಗಳೂರಿನ ಕುಟುಂಬಗಳು ಇದನ್ನು ಓದುವುದನ್ನು ತಪ್ಪಿಸಿ, ಇದು ನಿಮ್ಮ ಮದುವೆಗೆ ಮಾರಕವಾಗಬಹುದು' ಎಂದು ವ್ಯಂಗ್ಯ ಮಾಡಿದ್ದಾರೆ.