ರಾಹುಲ್ ಗಾಂಧಿ ವಿರುದ್ಧ ಆರೆಸ್ಸೆಸ್ ಮಾನಹಾನಿ ಪ್ರಕರಣ: ಫೆಬ್ರವರಿ 10ರಿಂದ ವಿಚಾರಣೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರದ ಭಿವಾಂಡಿಯಲ್ಲಿ ದಾಖಲಾಗಿರುವ ಮಾನಹಾನಿ ಪ್ರಕರಣದ ವಿಚಾರಣೆಯು ಫೆಬ್ರವರಿ 10ರಂದು ಆರಂಭವಾಗಲಿದೆ. ಸ್ಥಳೀಯ ಆರೆಸ್ಸೆಸ್ ಕಾರ್ಯಕರ್ತ ಈ ದೂರು ದಾಖಲಿಸಿದ್ದರು.

ರಾಹುಲ್ ಗಾಂಧಿ ವಿರುದ್ಧ ಆರೆಸ್ಸೆಸ್ ಮಾನಹಾನಿ ಪ್ರಕರಣ: ಫೆಬ್ರವರಿ 10ರಿಂದ ವಿಚಾರಣೆ
Linkup
ಥಾಣೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಕಾರ್ಯಕರ್ತರೊಬ್ಬರು ಕಾಂಗ್ರೆಸ್ ನಾಯಕ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣದ ಪ್ರತಿ ದಿನದ ವಿಚಾರಣೆಯನ್ನು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ನ್ಯಾಯಾಲಯ ಫೆಬ್ರವರಿ 10ರಿಂದ ನಡೆಸಲು ಶನಿವಾರ ನಿರ್ಧರಿಸಿದೆ. ನ್ಯಾಯಾಲಯವು ಶನಿವಾರದಿಂದ ವಿಚಾರಣೆ ಆರಂಭಿಸಲು ನಿಗದಿಯಾಗಿತ್ತು. ಆದರೆ ಅರ್ಜಿದಾರರ ಪರ ವಕೀಲರು, ತಮ್ಮ ಕಕ್ಷಿದಾರರು ಕೆಲವು ವೈಯಕ್ತಿಕ ಕಾರಣಗಳಿಂದ ಪಟ್ಟಣದಿಂದ ಹೊರಗೆ ಹೋಗಬೇಕಿರುವುದರಿಂದ ವಿಚಾರಣೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದರು. ಇದನ್ನು ನ್ಯಾಯಾಲಯ ಪುರಸ್ಕರಿಸಿತು. ವಿಚಾರಣೆಯು ಫೆಬ್ರವರಿ 10ರಂದು ಆರಂಭವಾಗಲಿದೆ ಎಂದು ಭಿವಾಂಡಿಯ ಸಿವಿಲ್ ಕೋರ್ಟ್ ಮತ್ತು ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್ (ಜೆಎಂಎಫ್‌ಸಿ) ನ್ಯಾಯಾಧೀಶ ಜೆವಿ ಪಲಿವಾಲ್ ತಿಳಿಸಿದರು. ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಕಾರ್ಯಕರ್ತ ರಾಜೇಶ್ ಕುಂಟೆ ಅವರು ವೈಯಕ್ತಿಕ ಕಾರಣಗಳಿಂದ ಪಟ್ಟಣ ತೊರೆಯಬೇಕಿದೆ ಎಂದು ವಕೀಲ ಪ್ರಬೋಧ್ ಜಯ್ವಂತ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ತಮ್ಮ ಕಕ್ಷಿದಾರ ಗೋವಾ, ಪಂಜಾಬ್ ಮತ್ತು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಳ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ ಎಂದು ರಾಹುಲ್ ಗಾಂಧಿ ಅವರ ಪರ ವಕೀಲ ನಾರಾಯಣ್ ಅಯ್ಯರ್ ತಿಳಿಸಿದರು. ಆದರೆ ಕೋರ್ಟ್ ತನ್ನ ವಿಚಾರಣೆಯನ್ನು ಮುಂದುವರಿಸಲು ಅಡ್ಡಿಯಿಲ್ಲ ಎಂದು ಹೇಳಿದರು. ಎರಡೂ ಕಡೆಯ ವಕೀಲರ ಹೇಳಿಕೆ ಆಲಿಸಿದ ನ್ಯಾಯಾಲಯ, ವಿಚಾರಣೆಯನ್ನು ಮುಂದೂಡಿತು. ಜನವರಿ 29ರಂದು ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದ್ದ ಕೋರ್ಟ್, ಚುನಾಯಿತ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂಬ ಸುಪ್ರೀಂಕೋರ್ಟ್‌ನ ಇತ್ತೀಚಿನ ಆದೇಶವನ್ನು ಉಲ್ಲೇಖಿಸಿತ್ತು. ರಾಹುಲ್ ಗಾಂಧಿ ವಿರುದ್ಧದ ಪ್ರಕರಣ ಕೂಡ ಇದೇ ವರ್ಗದಲ್ಲಿ ಬರುತ್ತದೆ. ಹೀಗಾಗಿ ಅದನ್ನು ಆದ್ಯತೆಯ ಮೇರೆಗೆ ತೆಗೆದುಕೊಳ್ಳಬೇಕು. ಇದನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಮತ್ತು ದೈನಂದಿನ ಆಧಾರದಲ್ಲಿ ಪ್ರಕ್ರಿಯೆ ಸಾಗಬೇಕು ಎಂದು ಭಿವಾಂಡಿ ಕೋರ್ಟ್ ಹೇಳಿತ್ತು. ಥಾಣೆಯ ಭಿವಾಂಡಿ ಪಟ್ಟಣದಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ ವಿರುದ್ಧ 2014ರಲ್ಲಿ ಆರೆಸ್ಸೆಸ್ ಸ್ಥಳೀಯ ಕಾರ್ಯಕರ್ತ ರಾಜೇಶ್ ಕುಂಟೆ ಪ್ರಕರಣ ದಾಖಲಿಸಿದ್ದರು. ಮಹಾತ್ಮ ಗಾಂಧಿ ಅವರ ಹತ್ಯೆಯ ಹಿಂದೆ ಆರೆಸ್ಸೆಸ್ ಇದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಈ ಹೇಳಿಕೆ ಆರೆಸ್ಸೆಸ್‌ನ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಕುಂಟೆ ದೂರು ನೀಡಿದ್ದರು. 2018ರಲ್ಲಿ ಥಾಣೆಯ ನ್ಯಾಯಾಲಯ ಈ ದೂರಿನ ಅಡಿ ರಾಹುಲ್ ಗಾಂಧಿ ವಿರುದ್ಧ ಆಪಾದನೆ ನಿಗದಿಪಡಿಸಿತ್ತು. ಆದರೆ ತಾವು ತಪ್ಪು ಮಾಡಿಲ್ಲ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.